ಸಾರಾಂಶ
ಗೋಕರ್ಣ: ಸಾಮಾನ್ಯ ಮನುಷ್ಯನ ಜೀವನ ಮಟ್ಟ ಹೆಚ್ಚಿಸುವ ಮಾನವೀಯ ಕಾರ್ಯ ಸಂಘ- ಸಂಸ್ಥೆಗಳಿಂದ ನಡೆಯಬೇಕು ಎಂದು ಸಾಹಿತಿ ಜಯಂತ್ ಕಾಯ್ಕಿಣಿ ತಿಳಿಸಿದರು.ಬುಧವಾರ ಸಂಜೆ ರಾಮತೀರ್ಥ ರಸ್ತೆಯಲ್ಲಿರುವ ನಿಮ್ಮು ಹೌಸ್‍ನ ನಿರ್ಮಲಾ ಗ್ರಾಂಡ್ ಹಾಲ್‍ನಲ್ಲಿ ಲಯನ್ಸ್ ಕ್ಲಬ್‍ನ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಜಾತಿಭೇದ ಮರೆತು ಸಮಾಜದಲ್ಲಿ ಒಂದಾಗಿ ಬದುಕು ಕಟ್ಟಿಕೊಳ್ಳುವ ಪರಿಪಾಠ ಬೆಳೆಯಬೇಕು. ಅಂತಹ ಚಟುವಟಿಕೆಗಳಿಗೆ ಲಯನ್ಸ್‌ನಂತಹ ಸಂಸ್ಥೆಗಳು ಜತೆಯಾಗಲಿ ಎಂದು ಆಶಿಸಿದರು.ಪುಣ್ಯಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಯಾತ್ರ್ರಿಕನನ್ನು ಸಮನಾಗಿ ನೋಡುವ ಪರಂಪರೆ ಹಿಂದಿನಿಂದಲೂ ಇದ್ದು, ತಮ್ಮ ಮನೆಯಲ್ಲಿ ಆದರಾತಿತ್ಯ ನೀಡಿ ಗೌರವಿಸುವ ಪರಿಪಾಠವಿದೆ. ಇದು ಗೋಕರ್ಣದ ಅಸ್ಮಿತೆ ಎಂದು ಬಣ್ಣಿಸಿದರು.
ಸಮಾಜವನ್ನು ಜಾತಿಯಿಂದ ಒಡೆದು ಜನರನ್ನು ಬೇರ್ಪಡಿಸುವ ಮನೋಭಾವನೆ ನಿಲ್ಲಬೇಕು. ಇದಕ್ಕೆ ಎಲ್ಲ ಜವಾಬ್ದಾರಿಯುತ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರು ಅರಿತು ಸಮಾಜಕ್ಕಾಗಿ ಕಾರ್ಯ ಮಾಡಬೇಕು ಎಂದರು.ಲಯನ್ಸ್ ಪಿ.ಡಿ.ಜಿ. ಡಾ ಗಿರೀಶ್ ಕುಚಿನಾಡ ಪ್ರತಿಜ್ಞಾವಿಧಿ ಬೋಧಿಸಿ ಪದಗ್ರಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಪ್ರವಾಸಿ ತಾಣದಲ್ಲಿ ಸಾಮಾಜಿಕ ಕಾರ್ಯಕ್ಕೆ ಅಂತಾರಾಷ್ಟ್ರೀಯ ಸಂಸ್ಥೆ ಸದಾ ಜತೆಯಲ್ಲಿದ್ದು, ಪ್ರತಿಯೊಂದು ಹುದ್ದೆ ಪಡೆದ ಲಯನ್ಸ್ ಸದಸ್ಯರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದರು.
ಸಂಸ್ಥಾಪಕ ಸದಸ್ಯ ಡಾ. ವಿ.ಆರ್. ಮಲ್ಲನ್ ಮಾತನಾಡಿ, 48 ವರ್ಷಗಳ ಹಿಂದೆ ಲಯನ್ಸ್ ಶಾಖೆ ಪ್ರಾರಂಭಿಸಿ ಅದನ್ನು ಮುನ್ನಡೆಸಿಕೊಂಡು ಬಂದ ಯಶೋಗಾಥೆ ವಿವರಿಸಿದರು.ಲಯನ್ಸ್ ಮಾಜಿ ಗವರ್ನರ್ ಪಿಡಿಜೆ ಗಣಪತಿ ನಾಯಕ್ ಮಾತನಾಡಿ, ಲಯನ್ಸ್‍ನ ಕಾರ್ಯ ಚಟುವಟಿಕೆ ಬಗ್ಗೆ ವಿವರಿಸಿದರು.
ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ರವೀಂದ್ರ ಕೊಡ್ಲೆಕೆರೆ ಮಾತನಾಡಿ, 25 ವರ್ಷದಿಂದ ಲಯನ್ಸ್ ಸದಸ್ಯನಾಗಿದ್ದು, ಈ ವರ್ಷ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸಂತೋಷ ತಂದಿದೆ ಎಂದರು.ಲಯನ್ಸ್‍ನ ರಿಜಿನಲ್ ಚೇರ್ ಪರ್ಸನ್ ಆರ್.ಎಚ್. ನಾಯಕ್, ಝೋನಲ್ ಚೇರ ಪರ್ಸನ್ ವಿನಯಾ ನಾಯ್ಕ ಮಾತನಾಡಿದರು.
ನೂತನ ಖಜಾಂಚಿ ರಾಮಚಂದ್ರ ಮಲ್ಲನ್ ಅಧ್ಯಕ್ಷರ ಕಿರು ಪರಿಚಯ ಮಾಡಿದರು. ನಿಕಟಪೂರ್ವ ಕಾರ್ಯದರ್ಶಿ ಮಹೇಶ್ ನಾಯಕ್ ವರದಿ ವಾಚಿಸಿದರು.ಕಾರ್ಯಕ್ರಮದಲ್ಲಿ ಹಿಂದಿನ ಅಧ್ಯಕ್ಷ ಎನ್.ಎಸ್. ಲಮಾಣಿ, ಖಜಾಂಚಿ ಪ್ರೇಮಾ ನಾಯಕ್, ನೂತನ ಕಾರ್ಯದರ್ಶಿ ಅಮಿತ್ ಗೋಕರ್ಣ, ಹಿರಿಯ ಸದಸ್ಯರಾದ ಬೀರಣ್ಣ ನಾಯಕ ಅಡಿಗೋಣ, ಡಾ. ಜಗದೀಶ್ ನಾಯ್ಕ್, ಶೈಲಜಾ ನಾಯಕ, ಭಾರತೀ ಲಮಾಣಿ ಅಹಲ್ಯಾ ನಾಯಕ್, ಗುರುಪ್ರಕಾಶ ಹೆಗಡೆ, ಸತೀಶ್ ನಾಯಕ್, ಅನಿಲ್ ಶೇಟ್ ದೀಪಕ್ ಅಡಪೇಕರ್, ಶಶಾಂಕ್ ಶೆಟ್ಟಿ ಹಾಗೂ ಉಳಿದ ಸದಸ್ಯರು ಉಪಸ್ಥಿತರಿದ್ದರು. ರಾಮಮೂರ್ತಿ ನಾಯಕ್ ನಿರ್ವಹಿಸಿದರು.
ಇದೇ ವೇಳೆ ಸಾಹಿತಿ ಜಯಂತಿ ಕಾಯ್ಕಿಣಿ, ಅವರ ಪತ್ನಿ ಸ್ಮಿತಾ ಹಾಗೂ ಲಯನ್ಸ್ ಸಂಸ್ಥಾಪಕ ಸದಸ್ಯ ಡಾ. ವಿ.ಆರ್. ಮಲ್ಲನ್ ಅವರ ಪತ್ನಿ ನೂತನಾ ಮಲ್ಲನ್ ದಂಪತಿಗಳನ್ನು ಲಯನ್ಸ್ ವತಿಯಿಂದ ಸನ್ಮಾನಿಸಲಾಯಿತು.