ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಚಿಕ್ಕಮಕ್ಕಳ ತಜ್ಞ ಡಾ.ಆರ್.ಟಿ.ಪಾಟೀಲ ಅವರು 80ರ ದಶಕದಿಂದ ನಗರದಲ್ಲಿ ಆಸ್ಪತ್ರೆ ನಿರ್ಮಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆ ಸೇರಿದಂತೆ ಸುತ್ತಲಿನ ಜಿಲ್ಲೆಗಳ ಜನರು ಈ ಆಸ್ಪತ್ರೆ ಮೇಲೆ ನಂಬಿಕೆ ಇಟ್ಟು ಎರಡು ತಲೆಮಾರುಗಳಿಂದ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.ನವನಗರದಲ್ಲಿ ನೂತನವಾಗಿ ನಿರ್ಮಿಸಲಾದ ಶಾಂತಿ ಆಸ್ಪತ್ರೆ ನೂತನ ಕಟ್ಟಡದ ಉದ್ಘಾಟನೆಯಲ್ಲಿ ಅವರು ಮಾತನಾಡಿದರು. ಕ್ಲಿಷ್ಟಕರವಾದ ಚಿಕಿತ್ಸೆಗಳನ್ನು ಆಸ್ಪತ್ರೆಯ ವೈದ್ಯರು ಯಶಸ್ವಿಗೊಳಿಸಿದ್ದಾರೆ. ನೂತನ ಕಟ್ಟಡದಲ್ಲಿ ವೈದ್ಯಕೀಯ ವಿಭಾಗದ ನೂತನ ತಂತ್ರಜ್ಞಾನ, ಸುಸಜ್ಜಿತ ಕೊಠಡಿಗಳು ಸೇರಿ ಎಲ್ಲ ಆಧುನಿಕ ಸೌಲಭ್ಯವನ್ನು ಆಸ್ಪತ್ರೆ ಹೊಂದಿದ್ದು, ಆಸ್ಪತ್ರೆಯಿಂದ ರೋಗಿಗಳಿಗೆ ಉತ್ತಮ ಸೇವೆ ದೊರಕಲಿ ಎಂದು ಹಾರೈಸಿದರು.
1980 ದಶಕದಲ್ಲಿ ಶಾಂತಿ ಆಸ್ಪತ್ರೆಯು ಚಿಕ್ಕಮಕ್ಕಳ ಆರೋಗ್ಯ ಸೇವೆ ಆರಂಭಿಸಿತು. ಗುಣಮಟ್ಟದ ಶ್ರೇಷ್ಠತೆ ದೃಷ್ಟಿಯಿಂದ ಕೂಡಿತು. ನಾಲ್ಕು ದಶಕಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಛಾಪು ಮೂಡಿಸಿದೆ. ಅರ್ಥಪೂರ್ಣ, ಸಮಗ್ರ ಚಿಕಿತ್ಸೆಗೆ ಮೀಸಲಾಯಿತು. 38 ವರ್ಷಗಳ ಆರೋಗ್ಯ ಸೇವೆ ಮಾಡಿ ನವನಗರದಲ್ಲಿ 150 ಹಾಸಿಗೆಗಳ ಆತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ನಿರ್ಮಾಣಗೊಂಡಿದೆ. ವೈದ್ಯಕೀಯ ಸೇವೆಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಮತ್ತೊಂದು ಹೊಸ ಹೆಜ್ಜೆಯೊಂದಿಗೆ ಹೊಸ ಆಸ್ಪತ್ರೆ ಸ್ಥಾಪಿಸಲಾಗಿದೆ ಎಂದರು.ಹೊಸ ಆಸ್ಪತ್ರೆಯಲ್ಲಿ ಆತ್ಯಾಧುನಿಕ ವೈದ್ಯಕೀಯ ಸೌಲಭ್ಯ ಒಗಿಸಲಾಗಿದೆ. ನವಜಾತ ಶಿಶು ವಿಭಾಗ, ಚಿಕ್ಕಮಕ್ಕಳ ಶಸ್ತ್ರ ಚಿಕಿತ್ಸಾ ವಿಭಾಗ, ನರರೋಗ ವಿಭಾಗ, ನೆಪ್ರೋಲಾಜಿ ವಿಭಾಗ, ಹೆಮಟೋ ಅಂಕಾಲಜಿ ವಿಭಾಗ, ಗ್ರಾಸ್ಟ್ರೋಎಂಟರೋಲಾಜಿ ವಿಭಾಗ, ಎಲಬು ಕೀಲು, ತುರ್ತು ಚಿಕಿತ್ಸೆ, 24*7 ಔಷಾಧಾಲಯ, ರಕ್ತ ಭಂಡಾರ ಸೇರಿ ಎಲ್ಲವು ಒದಗಿಸಲಾಗಿದೆ. ಅಲ್ಲದೆ ಬಯೋಕೆಮಿಸ್ಟ್ರಿ, ಪ್ಯಾಥೋಲಜಿ, ಮೈಕ್ರೋಬಾಯೋಲಾಜಿ, ಕ್ಲಿನಿಕಲ್ ಪ್ಯಾಥೋಲಜಿ, ಬ್ಯಾಕ್ಟಿರಿಯೋಲಾಜಿ, ಸಿ.ಟಿ.ಸ್ಕ್ಯಾನ, ಎಂ.ಆರ್.ಐ ಸ್ಕ್ಯಾನ ಸೇರಿದಂತೆ ಮಹಾನಗರಗಳಲ್ಲಿ ದೊರೆಯುವ ಎಲ್ಲ ರೀತಿಯ ಚಿಕಿತ್ಸೆಗಳು ಇಲ್ಲಿ ಲಭ್ಯವಿದೆ.
ಎರೇಹೊಸಳ್ಳಿ ಮಠದ ಮಹಾಯೋಗಿ ವೇಮನ ಸಂಸ್ಥಾನ ಮಠದ ವೇಮಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಜವಳಿ ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಎಸ್.ಆರ್.ಪಾಟೀಲ ಆಸ್ಪತ್ರೆ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಸಂಸದ ಪಿ.ಸಿ.ಗದ್ದಿಗೌಡರ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ಶಾಸಕ ಜೆ.ಟಿ.ಪಾಟೀಲ ಹಾಗೂ ಎಚ್.ವೈ.ಮೇಟಿ, ಮಾಜಿ ಶಾಸಕ ಡಿ.ಆರ್.ಪಾಟೀಲ, ಅಮರೇಗೌಡ ಬಯ್ಯಾಪುರ, ವಿ.ಪ ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ರಕ್ಷಿತಾ ಈಟಿ, ಡಾ.ಬಿ.ಎಚ್.ಕೆರೂಡಿ, ಡಾ.ಅನುಸೂಯಾ ಕೆರೂಡಿ, ಹೈದ್ರಾಬಾದ್ ಫರ್ನಾಂಡಿಸ್ ಆಸ್ಪತ್ರೆಯ ಸಿಇಒ ಡಾ.ಪ್ರಮೋದ ಗದ್ದಂ, ಆಸ್ಪತ್ರೆ ಮುಖ್ಯಸ್ಥ ಡಾ. ಆರ್.ಟಿ.ಪಾಟೀಲ, ಚಿಕ್ಕಮಕ್ಕಳ ತಜ್ಞ ಡಾ.ಸುನೀಲ ಪಾಟೀಲ, ಡಾ.ವಿಕ್ರಮ ಪಾಟೀಲ, ಡಾ. ಟಿ.ಆರ್.ಪಾಟೀಲ ಸೇರಿದಂತೆ ಇತರರು ಇದ್ದರು.ಉತ್ತಮ ವೈದ್ಯಕೀಯ ಸೌಲಭ್ಯವು ಶಾಂತಿ ಆಸ್ಪತ್ರೆಯಲ್ಲಿ ದೊರೆಯುತ್ತಿದೆ. ಬಾಗಲಕೋಟೆ ಹೆಸರು ಕರ್ನಾಟಕದಲ್ಲಿ ನೆನಪಿಡುವಂತೆ ಶಾಂತಿ ಆಸ್ಪತ್ರೆಯ ವೈದ್ಯರು ಮಾಡಿದ್ದಾರೆ. ಡಾ.ಆರ್.ಟಿ.ಪಾಟೀಲ, ಡಾ. ಸುನೀಲ ಪಾಟೀಲ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಬದಲಾವಣೆ ಅಳವಡಿಸಿಕೊಂಡು ಹೊಸ ಸಂಶೋಧನೆ ಕೈಗೊಂಡಿದ್ದಾರೆ.
- ಎಸ್.ಆರ್.ಪಾಟೀಲ, ಮಾಜಿ ಸಚಿವರು.