ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಲೇಖನಿ ಖಡ್ಗಕ್ಕಿಂತ ಹರಿತ, ಇದರ ಬಳಕೆ ಆರೋಗ್ಯಕರ ಸಮಾಜಕ್ಕೆ ದಿಕ್ಸೂಚಿ ಆಗಲಿ ಮತ್ತು ಜನಪರ ಆಶಯಗಳಿಗೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು. ಎಲ್ಲ ಧರ್ಮ, ಮತ, ಪಂಥಗಳನ್ನು ಮೀರಿ ಪತ್ರಕರ್ತರು ಬೆಳೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ಶನಿವಾರ ನಗರದ ಜೀವ್ಹೆಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಡಿವಿಜಿ ಮತ್ತು ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.
ಪತ್ರಕರ್ತರು ತಮ್ಮ ಅಭಿಪ್ರಾಯ ತೋರಿಸದೆ, ವಾಸ್ತವದಲ್ಲಿರುವ ವಿಚಾರವನ್ನು ಸಮಾಜದ ಮುಂದೆ ಇಡುವುದು ನಿಜವಾದ ಪತ್ರಿಕಾ ಧರ್ಮವಾಗಿದೆ. ಪತ್ರಕರ್ತರು ಸ್ವಾರ್ಥ ಬಿಟ್ಟು ಪತ್ರಿಕಾ ಧರ್ಮವನ್ನು ಪಾಲಿಸಬೇಕು ಎಂದರು.ಯಾವುದೇ ಸುದ್ದಿ ಮಾಡುವ ಮುನ್ನ ಅದರ ಸತ್ಯಾಸತ್ಯತೆ ತನಿಖೆ ಮಾಡಿ ಪ್ರಕಟಿಸಬೇಕು. ಅದು ಬಿಟ್ಟು ಯಾರದ್ದೋ ಹೇಳಿಕೆ ಮಾತಿನಂತೆ ಸುದ್ದಿ ಮಾಡುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಸಮಾಜದಲ್ಲಿನ ಹಲವಾರು ನ್ಯೂನ್ಯತೆಗಳನ್ನು ಹೊಡೆದೋಡಿಸಿ ಸುಧಾರಣೆ ತರುವಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾಗಿದೆ. ಅದನ್ನು ಪತ್ರಕರ್ತರು ಸರಿಯಾಗಿ ನಿಭಾಯಿಸಬೇಕು ಎಂದರು.
ರಾಯಚೂರು ಲೋಕಸಭಾ ಸಂಸದರಾದ ಜಿ.ಕುಮಾರ್ ನಾಯಕ ಮಾತನಾಡಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು. ಸಮಾಜದ ಸಮಸ್ಯೆಗಳನ್ನು ಬಿಂಬಿಸುವಲ್ಲಿ ಅವರ ಸತತ ಪರಿಶ್ರಮ ಶ್ಲಾಘನೀಯ ಎಂದರು.ಸಮಾಜದ ಸ್ವಾಸ್ಥ್ಯಕ್ಕೆ ಪತ್ರಿಕೆಗಳ ಪಾತ್ರ ಬಹಳ ಮುಖ್ಯ. ಪತ್ರಿಕೆಗಳು ಇಲ್ಲದಿದ್ದರೆ ಸಮಾಜದಲ್ಲಿ ಅಶಾಂತಿ ಮೂಡುತ್ತಿತ್ತು. ಯಾರು ಏನು ಬೇಕಾದರೂ ಮಾಡಬಹುದಿತ್ತು. ಭಯದ ವಾತಾವರಣವೇ ಇರುತ್ತಿರಲಿಲ್ಲ. ಆದರೆ, ಪತ್ರಿಕೆಗಳು ಒಂದು ರೀತಿಯಲ್ಲಿ ಅಂಕುಶದಂತೆ ಕೆಲಸ ಮಾಡುತ್ತಿವೆ. ಪತ್ರಕರ್ತರು ಸರ್ಕಾರ ಮತ್ತು ಸಮಾಜದ ಪ್ರತಿಬಿಂಬ ಹಾಗೂ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಪತ್ರಕರ್ತರು ಕನ್ನಡಿ ಇದ್ದಂತೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ ಮಾತನಾಡಿ, ಸಮಾಜಮುಖಿ ಪತ್ರಕರ್ತರಿಗೆ ಸಮಾಜದಲ್ಲಿ ಬೆಲೆ ಇದ್ದೇ ಇರುತ್ತದೆ ಎಂದು ತಿಳಸಿದರು. ಈ ವೇಳೆ ವಿಶೇಷ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.ಶರಣಾರ್ಥಿ ಕನ್ನಡಿಗರೇ ಪತ್ರಿಕೆಯ ಸಂಪಾದಕ ಶರಣು ಗದ್ದುಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಇಒ ಸೋಮಶೇಖರ್ ಬಿರಾದಾರ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಯಲ್ಲಪ್ಪ ಪಾಟೀಲ್, ವೆಂಕಟೇಶ್ ಟೊಣಪೆ, ಪತ್ರಕರ್ತರ ಸಂಘದ ರಾಜ್ಯ ಪರಿಷತ್ ಸದಸ್ಯ ರಾಘವೇಂದ್ರ ಕಾಮನಟಗಿ, ಕಾರ್ಯದರ್ಶಿ ಮಹೇಶ್ ಕಲಾಲ್, ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೇದ, ನಿವೃತ್ತ ದೈಹಿಕ ಶಿಕ್ಷಕ ಸೋಮಶೇಖರಯ್ಯ, ಡಾ.ಆನಂದ್, ಇಕ್ಬಾಲ್ ಲಲ್ಲೋಟಿ, ರಮೇಶ, ಅಮ್ಜದ್ ಖಾನ್, ಎಸ್‌ಡಿಪಿಐ ಸೈಯದ್ ಇಸ ಖಾಲಿದ, ಶಿವಪುತ್ರ, ಶಿವಕುಮಾರ್, ಕನ್ನಡ ಪರ ಸಂಘಟನೆಯ ದೇವು ಬಿಗುಡಿ, ಸೈಯದ್ ಶಫೀಯುವುದ್ದಿನ್ ಸಮಸ್ತ ಸಗರ ದರ್ಗಾ ಸೇರಿದಂತೆ ಇತರರಿದ್ದರು.
ಪತ್ರಕರ್ತ ದೇಶ ಕಾಯುವ ಸೈನಿಕನಿದ್ದಂತೆ
ಶಹಾಪುರ: ಜವಾಬ್ದಾರಿ ಪತ್ರಕರ್ತ ದೇಶ ಕಾಯುವ ಸೈನಿಕನಿದ್ದಂತೆ ಎಂದು ಕುಂಬಾರಗೇರಿ ಹಿರಿಯ ಮಠದ ಪೀಠಾಧಿಪತಿ ಸೂಗೂರೇಶ್ವರ ಶಿವಾಚಾರ್ಯರು ನಗರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪ್ರಾಮಾಣಿಕತೆ, ನಿಷ್ಠುರತೆ, ದಿಟ್ಟತನದ ಪತ್ರಕರ್ತರು ಇಂದು ಅನೇಕ ಸವಾಲು ಎದುರಿಸಬೇಕಾದ ಸ್ಥಿತಿ ಇದೆ. ಸಮಾಜದಲ್ಲಿ ಪತ್ರಕರ್ತರ ಜವಾಬ್ದಾರಿ ತುಂಬ ದೊಡ್ಡದು ಎಂದರು.