ಸಾರಾಂಶ
ಸಂಡೂರು: ವಾಲ್ಮೀಕಿ ನಿಗಮದ ಹಣವನ್ನು ಮಂತ್ರಿಯೇ ನುಂಗಿ ಹಾಕಿದ್ದಾರೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಜನತೆಗೆ ನ್ಯಾಯ ಕೊಡಿಸುವ ಬದಲು, ತಮ್ಮ ಪತ್ನಿಗೆ ನ್ಯಾಯ ದೊರಕಿಸಿಕೊಡಲು ಒದ್ದಾಡುತ್ತಿದ್ದಾರೆ. ಹೀಗಾಗಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಸೋಲಿಸಿ, ಅದರ ಭ್ರಷ್ಟಾಚಾರಕ್ಕೆ ತಕ್ಕ ಶಿಕ್ಷೆ ನೀಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ನಡೆದ ಬಿಜೆಪಿ ಸಂಡೂರು ಮಹಾಶಕ್ತಿ ಕೇಂದ್ರದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪಂಕ್ಚರ್ ಆಗಿವೆ. ಚುನಾವಣೆ ಬಂದಾಗೊಮ್ಮೆ, ಅಮಾವಾಸ್ಯೆ-ಹುಣ್ಣಿಮೆಗೆ ಒಮ್ಮೆ ಫಲಾನುಭವಿಗಳ ಅಕೌಂಟಿಗೆ ಹಣ ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಹಾಲಿನಿಂದ ಹಾಲ್ಕೊಹಾಲ್‌ವರೆಗಿನ ವಸ್ತುಗಳ ಬೆಲೆಗಳು ಏರಿಕೆಯಾಗಿವೆ. ಇಂದು ಹಲವರ ರೇಷನ್ ಕಾರ್ಡ್ ರದ್ದುಗೊಳಿಸಲು ಹೊರಟಿದ್ದಾರೆ. ಇಂದು ಸತ್ತವರ ಸರ್ಟಿಫಿಕೇಟನ್ನು ಪಡೆಯಲೂ ಹಣ ಕೊಡಬೇಕಿದೆ. ₹೨೦ ಇದ್ದ ಬಾಂಡ್ ಪೇಪರ್‌ನ ಬೆಲೆಯನ್ನು ₹೧೦೦ಕ್ಕೆ ಹೆಚ್ಚಿಸಲಾಗಿದೆ. ರೈತರು ಕೊಳವೆಬಾವಿಗಳನ್ನು ತೋಡಿಸಿದರೆ, ದುಡ್ಡು ಕೊಟ್ಟು ಕಂಬ, ಟಿಸಿ ಹಾಕಿಸಿಕೊಳ್ಳಬೇಕಿದೆ ಎಂದು ಸರ್ಕಾರದ ಆಡಳಿತ ಕ್ರಮವನ್ನು ತರಾಟೆಗೆ ತೆಗೆದುಕೊಂಡರು.ರಾಜ್ಯ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸುಮಾರು ೨೦೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೧೩ನೇ ಶತಮಾನದ ವಿರಕ್ತಮಠ, ೬-೭ನೇ ಶತಮಾನದ ಸೋಮೇಶ್ವರ ದೇವಸ್ಥಾನ, ಚಳ್ಳಕೆರೆಯಲ್ಲಿ ದಲಿತರ ಮನೆಗಳು, ವಿವಿಧೆಡೆಯಲ್ಲಿನ ರೈತರ ಜಮೀನುಗಳು ವಕ್ಫ್ ಆಸ್ತಿ ಎಂದು ಘೋಷಿಸಲಾಗುತ್ತಿದೆ. ಇದರಲ್ಲಿ ಬಡ ಮುಸ್ಲಿಮರ ಜಮೀನುಗಳು ಹೋಗುತ್ತಿವೆ. ೬-೭ನೇ ಶತಮಾನದಲ್ಲಿ ದೇಶದಲ್ಲಿ ಮುಸ್ಲೀಮರೆ ಇರಲಿಲ್ಲ. ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ಮುಖಂಡರು ದುರ್ಬಳಕೆ ಮಾಡಿಕೊಂಡಿರುವುದು ವರದಿಯಲ್ಲಿ ಪ್ರಕಟವಾಗಿದೆ. ವಕ್ಫ್ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡಿರುವ ಮುಖಂಡರ ಮೇಲೆ ಕ್ರಮಕೈಗೊಳ್ಳುವ ಧಮ್ಮು ಕಾಂಗ್ರೆಸ್‌ಗೆ ಇಲ್ಲ ಎಂದು ಟೀಕಿಸಿದರು.
ಕ್ಷೇತ್ರದ ಉಪ ಚುನಾವಣೆ ರಾಜಕೀಯದ ದೃಷ್ಟಿಯಿಂದ ಬಹಳ ಮಹತ್ವದ್ದು. ಇದು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಮೇಲೂ ಪರಿಣಾಮ ಬೀರಲಿದೆ. ಉಪ ಚುನಾವಣೆ ಜನ ಹಾಗೂ ಕಾಂಗ್ರೆಸ್ ನಡುವಿನ ಚುನಾವಣೆ. ಇದು ಹಣಬಲ ಹಾಗೂ ಜನಬಲದ ನಡುವಿನ ಚುನಾವಣೆ. ಹಣಬಲದಿಂದ ಸದಾಕಾಲ ಚುನಾವಣೆ ಗೆಲ್ಲಲಾಗದು. ಪಕ್ಷದ ಬೂತ್ ಮಟ್ಟದ ಮುಖಂಡರು ಜನ ಬಲವನ್ನು ಕ್ರೂಢೀಕರಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ವಿವಿಧ ಅಭಿವೃದ್ಧಿ ನಿಗಮಗಳಲ್ಲಿನ ಹಣದ ಲೂಟಿ ಕುರಿತು ಜನಜಾಗೃತಿ ಮೂಡಿಸಬೇಕು. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಪಾತ್ರ ಬಹಳ ಮುಖ್ಯವಾಗಿದೆ. ಬಿಜೆಪಿ ಅಭ್ಯರ್ಥಿಯ ಗೆಲುವು ಬೂತ್ ಮಟ್ಟದ ಕಾರ್ಯಕರ್ತರ ಕೈನಲ್ಲಿದೆ ಎಂದರು.ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಮಾತನಾಡಿ, ವಕ್ಫ್ ಲ್ಯಾಂಡ್ ಜಿಹಾದ್ ಬಳ್ಳಾರಿಗೆ ಬಂದಿದೆ. ಸಂಡೂರಿಗೂ ಬರಬಹುದು. ಜನತೆ ಜಾಗ್ರತರಾಗಬೇಕು. ಬಳ್ಳಾರಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿನ ೫೦ ಎಕರೆ ಜಮೀನು ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಸಂಡೂರು ತಾಲೂಕಿನ ವಿವಿಧೆಡೆ ರಾಜರು ನೀಡಿದ್ದ ಜಮೀನುಗಳನ್ನು ರೈತರು ಉಳುಮೆ ಮಾಡುತ್ತಿದ್ದಾರೆ. ಇದೀಗ ಅವುಗಳನ್ನು ಖರಾಬು ಜಮೀನು ಎಂದು ಘೋಷಿಸಿ, ರೈತರಿಂದ ಅವುಗಳನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆದಿದೆ. ಈ ಕುರಿತು ರೈತರ ಪರವಾಗಿ ಧ್ವನಿ ಎತ್ತಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ನವೀನ್‌ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಕಾರ್ಯದರ್ಶಿ ಎಫ್. ಕುಮಾರನಾಯ್ಕ, ಸಂಡೂರು ಮಂಡಲ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಕೆ. ಹರೀಶ್, ವಾಡಾ ಮಾಜಿ ಅಧ್ಯಕ್ಷ ಕರಡಿ ಯರಿಸ್ವಾಮಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಿರಂಜೀವಿ, ಮುಖಂಡರಾದ ಗುರುಕಾಮ, ಬಪ್ಪಕಾನ್ ಕುಮಾರಸ್ವಾಮಿ, ಆರ್.ಟಿ. ರಘನಾಥ್, ಬೂತ್ ಮಟ್ಟದ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.