ಸಾರಾಂಶ
ಗದಗ: ಪೊಲೀಸ್ ಇಲಾಖೆ ಅಪರಾಧ ನಡೆಯುವುದಕ್ಕೂ ಮುನ್ನ ಅವುಗಳ ಸಂಪೂರ್ಣ ನಿಯಂತ್ರಣಕ್ಕೆ ಮುಂದಾಗಬೇಕು ಜತೆಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ಜಾರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಭಾನುವಾರ ಪೊಲೀಸ್ ವಾಹನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಹೇಳಿದಂತೆ ಪೊಲೀಸ್ ಇಲಾಖೆಯ ತುರ್ತು ಈ ಆರ್ ಎಸ್ ಎಸ್ ಸೇವೆ 15 ನಿಮಿಷದಿಂದ 9 ನಿಮಿಷಕ್ಕೆ ಸೇವೆ ಒದಗಿಸುವ ಮಟ್ಟಿಗೆ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ ಎಂದರು.ತುರ್ತು ಈ ಆರ್ ಎಸ್ ಎಸ್ ಸೇವೆ 9 ರಿಂದ 5ನಿಮಿಷದ ಒಳಗೆ ಸಾರ್ವಜನಿಕರಿಗೆ ತಲುಪಬೇಕು.ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಗದಗ ಜಿಲ್ಲೆಯ ಥರ್ಡ್ ಐ ಯೋಜನೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಇದು ಗದಗ ಜಿಲ್ಲಾ ಪೊಲೀಸರಿಗೆ ಹೆಮ್ಮೆಯ ತರುವ ಕಾರ್ಯವಾಗಿದೆ ಎಂದರು.
ದೂರುಗಳು ನಿಮ್ಮ ಮೇಲೆ ಇರದಂತೆ ಪೊಲೀಸ್ ಇಲಾಖೆ ಪಾರದರ್ಶಕವಾಗಿ ಪ್ರಕರಣ ತನಿಖೆ ಕೈಗೊಳ್ಳಬೇಕು, ಗದಗ ಜಿಲ್ಲಾ ಪೊಲೀಸ್ ಸುಸಂಸ್ಕೃತ ಪೊಲೀಸ್ ಆಗಿದೆ. ಪ್ರಕರಣಗಳು ಆಗದಂತೆ ಮುಂಜಾಗ್ರತೆಯಾಗಿ ನಿಗಾ ವಹಿಸಬೇಕು. ಗದಗ ಜಿಲ್ಲೆಯಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ. ಥರ್ಡ್ ಐ ಜಾರಿ ಮೂಲಕ ನಗರದಾದ್ಯಂತ ಸಿಸಿ ಟಿವಿ ಅಳವಡಿಸಿದ್ದರಿಂದ ಪ್ರಕರಣಗಳ ಬೇಧಿಸಲು ಪೊಲೀಸ್ ಇಲಾಖೆಗೆ ಸಹಕಾರಿಯಾಗಿದೆ. ಗದಗ ಉತ್ತಮ ಪೊಲೀಸ್ ಇಲಾಖೆ ಎಂದು ಹೆಸರಾಗಿದೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮಾತನಾಡಿ, ಪೊಲೀಸ್ ಇಲಾಖೆಗೆ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ ವಾಹನ ಒದಗಿಸಿದ್ದು ಇಲಾಖೆಗೆ ಸಹಾಯಕವಾಗಿದೆ. ಸರ್ಕಾರದ ನಿಯಮಾನುಸಾರ 15ವರ್ಷ ಮೀರಿದ ವಾಹನಗಳನ್ನು ಬಳಸುವಂತಿಲ್ಲ ಹಾಗಾಗಿ ಇಲಾಖೆಗೆ ಇನ್ನೂ ಹೆಚ್ಚಿನ ವಾಹನಗಳ ಅಗತ್ಯ ಇದೆ ಎಂದರು.
ಪೊಲೀಸ್ ಇಲಾಖೆ ಜನಸ್ನೇಹಿಯಾಗಿಸಲು ಇಲಾಖೆ ಅಧಿಕಾರಿಗಳು ಸರ್ವ ಸಿದ್ಧವಾಗಿದ್ದೇವೆ, ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.ರೋಣ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೋಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಎಸ್.ಎನ್. ಬಳ್ಳಾರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಪಂ ಸಿಇಒ ಭರತ್.ಎಸ್., ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಡಿ.ವೈ.ಎಸ್.ಪಿ ವಿದ್ಯಾನಂದ ನಾಯ್ಕ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಇದ್ದರು.