ಮಡಿವಾಳ ಸಮಾಜದವರು ಒಳ್ಳೆ ಹುದ್ದೆ ಅಲಂಕರಿಸಲಿ

| Published : Feb 02 2025, 01:01 AM IST

ಮಡಿವಾಳ ಸಮಾಜದವರು ಒಳ್ಳೆ ಹುದ್ದೆ ಅಲಂಕರಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿವಾಳ ಸಮಾಜ ಕುಲಕಸುಬಿನ ಜೊತೆಗೆ, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ, ಅವರು ಸಹ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಮಾಡಬೇಕೆಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಮಡಿವಾಳ ಸಮಾಜ ಕುಲಕಸುಬಿನ ಜೊತೆಗೆ, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ, ಅವರು ಸಹ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಮಾಡಬೇಕೆಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ತಿಳಿಸಿದ್ದಾರೆ.ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕಸಾಪ ಹಾಗೂ ಜಿಲ್ಲಾ ಮಡಿವಾಳ ಸಂಘ ಹಾಗೂ ವಿವಿಧ ಮಡಿವಾಳ ಸಮುದಾಯದ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರ ಗಣಾಚಾರಿ ಶ್ರೀಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಶ್ರೀಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಮಡಿವಾಳ ವೃತ್ತಿಯಲ್ಲಿಯೂ ಒಳ್ಳೆಯ ಆದಾಯವಿದೆ. ಇದನ್ನು ಮಾಡುವವರು ಮಾಡಲಿ, ಭಿನ್ನ ಕೆಲಸಗಳಿಗೆ ಹೋಗಬೇಕೆಂಬ ಯುವಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒತ್ತು ನೀಡಿ, ನಿಮ್ಮದೇ ಹಾಸ್ಟಲ್ ಜಾಗದಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಿ, ಮೊದಲಿನಿಂದಲೂ ನಮ್ಮ ಕುಟುಂಬ ಮಡಿವಾಳ ಸಮಾಜದ ಜೊತೆಗಿದೆ. ಮುಂದೆಯೂ ನಿಮ್ಮ ಜೊತೆಗೆ ಇರಲಿದ್ದೇನೆ ಎಂಬ ಭರವಸೆಯನ್ನು ನೀಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,೧೨ನೇ ಶತಮಾನದಲ್ಲಿ ಸಮ ಸಮಾಜದ ಕನಸು ಕಂಡಿದ್ದ ಶಿವಶರಣರು ಅನುಭವ ಮಂಟಪದ ಮೂಲಕ ಜಾತಿ, ಧರ್ಮ, ಲಿಂಗ ತಾರತಮ್ಯ ವಿಲ್ಲದೆ ಎಲ್ಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದರು. ಅಂತಹವರಲ್ಲಿ ಶಿವಶರಣರ ದಂಡನಾಯಕ ಮಡಿವಾಳ ಮಾಚಿದೇವರು ಒಬ್ಬರು. ತುನು ಶುದ್ದಿ, ಮನಶುದ್ದಿ ಉಳ್ಳವರ ಬಟ್ಟೆಗಳನ್ನು ಮಾತ್ರ ಮಡಿ ಮಾಡುತ್ತೇನೆ ಎಂಬ ತತ್ವದ ಅಡಿಯಲ್ಲಿ ಬಿಜ್ಜಳ ರಾಜನ ಅರಿವೆಗಳನ್ನೇ ಶುದ್ದಿ ಮಾಡಲು ಒಪ್ಪದ, ಆತ್ಮವಿಶ್ವಾಸದಿಂದ ನಡೆದುಕೊಂಡು ಮಹಾನ್‌ ಸ್ವಾಭಿಮಾನಿ. ಅನುಭವ ಮಂಟಪದಲ್ಲಿ ಎಲ್ಲಾ ಕಾಯಕದವರಿಗೆ ಅವಕಾಶವಿತ್ತು. ಆದರೆ ಅವರು ಒಳ ಬರುವ ಮುನ್ನ ಮಡಿವಾಳ ಮಾಚೀದೇವರಿಂದ ಶುದ್ದ ಮನಸ್ಸಿನವ ಎಂದು ಸರ್ಟಿಪಿಕೇಟ್ ಪಡೆದುಕೊಳ್ಳಬೇಕಾಗಿತ್ತು. ಡಾಂಭಿಕ ಭಕ್ತಿಗಿಂತ ಅಂತರಂಗದ ಭಕ್ತಿಗೆ ಹೆಚ್ಚು ಮೌಲ್ಯಯುತ ಎಂಬುದನ್ನು ಅರಿತಿದ್ದ ಮಾಚಿದೇವರು, ಕಾಯಕವನ್ನೇ ದೇವರೆಂದು ನಂಬಿದ್ದವರು ಎಂದರು.ತುಮಕೂರು ತಾಲೂಕು ತಹಸೀಲ್ದಾರ್ ರಾಜೇಶ್ವರಿ ಮಾತನಾಡಿ, 12ನೇ ಶತಮಾನದ ಶಿವಶರಣರ ಪಡೆಯ ಅಂಗರಕ್ಷಕನಾಗಿ, ಕಲ್ಯಾಣ ಕ್ರಾಂತಿಯ ಕೊನೆಯವರಗೂ ತಾವು ನಂಬಿದ್ದ ಕಾಯಕಕ್ಕೆ ದ್ರೋಹ ಬಗೆಯದೇ ಭಕ್ತಿಯಿಂದ ನಡೆಸಿದವರು ಮಡಿವಾಳ ಮಾಚಿದೇವರು ಎಂದರು. ಉಪನ್ಯಾಸ ನೀಡಿದ ಡಾ.ಪಿ.ಎಸ್.ಪ್ರಸಾದ್, 2013ರಲ್ಲಿ ಅಂದಿನ ಸರಕಾರ ಮಡಿವಾಳ ಮಾಚಿದೇವರ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸುವ ನಿರ್ಧಾರ ಕೈಗೊಂಡಿತ್ತು. 12ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಎಲ್ಲಾ ಬಗೆಯ ಕಾಯಕದಲ್ಲಿ ತೊಡಗಿದ್ದ ಸುಮಾರು 720 ಜನ ಶಿವಶರಣರಿದ್ದರು ಎಂಬ ಮಾತಿದೆ. ಶರಣರ ವಚನಗಳನ್ನು ರಕ್ಷಿಸುವ ಮಹಾಕಾಯಕದಲ್ಲಿ ತೊಡಗಿದ ಮಾಚಿದೇವರು. ಬಹು ನಿಷ್ಠೆಯಿಂದ ಆ ಕೆಲಸವನ್ನು ಮಾಡಿದರು ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಮಾತನಾಡಿ,ತುಮಕೂರು ನಗರದಲ್ಲಿ ಸುಮಾರು 7-8 ಸಾವಿರ ಮಡಿವಾಳ ಸಮಾಜದ ಬಂಧುಗಳಿದ್ದಾರೆ.ಒಂದು ವಾರದಿಂದ 1500ಕ್ಕು ಹೆಚ್ಚು ಕರಪತ್ರಗಳನ್ನು ಹಂಚಲಾಗಿದೆ. ಆದರೆ ಮಾಚಿದೇವರ ಜಯಂತಿಗೆ ಆಗಮಿಸಿದ ಸಮುದಾಯದ ಜನರ ಸಂಖ್ಯೆ ತೀರ ಕಡಿಮೆ.ನಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಸರಕಾರದ ಯಾವ ಸವಲತ್ತು ಸಿಗುವುದಿಲ್ಲ. ಸರಕಾರದ ಸೌಲಭ್ಯ ದೊರೆಯಬೇಕಾದರೆ ನಾವೆಲ್ಲರೂ ಒಗ್ಗೂಡಿ ನಮ್ಮ ಶಕ್ತಿ ಪ್ರದರ್ಶನ ಮಾಡಿದರೆ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಾದರೂ ಎಲ್ಲರು ಒಗ್ಗೂಡಿ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿದರು.

ಎಂ.ಎ.ಚೈತ್ರ ವಿನೋದ್, ಬೆಳ್ಳಾವಿ ವಿ.ಎಸ್.ಎಸ್.ಎನ್ ಉಪಾಧ್ಯಕ್ಷರಾದ ನರಸಮ್ಮ ಬಿ.ಕೆಂಪನರಸಯ್ಯ, ಶಿಕ್ಷಕರಾದ ಗೋಪಾಲ್.ಡಿ.ಎಸ್, ಧಾರ್ಮಿಕ ದತ್ತಿ ಇಲಾಖೆ ಗೋಪಾಲ್.ಆರ್, ಅವರುಗಳನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್‌ ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ, ಜಿಲ್ಲಾ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟರಾಮಯ್ಯ,ಉಪಾಧ್ಯಕ್ಷರಾದ ಆರ್.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಕೆಂಪನರಸಯ್ಯ, ಉಪಾಧ್ಯಕ್ಷ ಕೆ.ಎ.ಗೋವಿಂದ ರಾಜು, ಬಿ.ಚಿಕ್ಕಣ್ಣ, ಎಚ್.ದೇವೇಂದ್ರ, ಶಾಂತಕುಮಾರ್, ಆರ್.ಕೆಂಪರಾಮಯ್ಯ, ಬಿ.ಆರ್.ಚನ್ನಬಸವಣ್ಣ, ಟಿ.ಎಸ್.ಲೋಕೇಶ್, ಎಂ.ಎ.ಆನಂದಮೂರ್ತಿ, ಎಸ್.ಕಾರಿಯಪ್ಪ, ಯದುಕುಮಾರ್, ಅಂಬಿಕ, ಮಂಜುಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.