ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂದು ವಿವಿಧ ವೇದಿಕೆಗಳ ನಿರ್ವಹಣೆ ಕೆಲಸ ಕಾರ್ಯಗಳು ಮಾದರಿಯಾಗಿ ನಡೆಯಬೇಕು ಎಂದು ವೇದಿಕೆ ನಿರ್ವಹಣಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಮಂಡ್ಯ ವಿವಿ ಕುಲ ಸಚಿವರಾದ ಬಿ.ಎನ್.ವೀಣಾ ತಿಳಿಸಿದರು.ಮಂಡ್ಯ ವಿಶ್ವ ವಿದ್ಯಾನಿಲಯದ ಬೋರ್ಡ್ ಮೀಟಿಂಗ್ ಸಭಾಂಗಣದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಎಲ್ಲಾ ಸಮಿತಿಯವರು ಜವಾಬ್ದಾರಿಯಿಂದ ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡದೆ ಕಾರ್ಯ ನಿರ್ವಹಿಸಬೇಕು ಎಂದರು.
ಸಮ್ಮೇಳನ ಯಶಸ್ವಿಯಾಗಲು ಆಯಾ ವೇದಿಕೆಗಳಿಗೆ ನಿಯೋಜನೆ ಮಾಡಲಾಗಿರುವ ಅಧಿಕಾರಿಗಳ ಮಾರ್ಗದರ್ಶನದಂತೆ ಶಿಸ್ತು ಬದ್ಧತೆ, ಸಂಯಮ, ಸಮಯ ಪ್ರಜ್ಞೆ ಹಾಗೂ ಸೌಹಾರ್ದಯುತವಾಗಿ ನಡೆದುಕೊಳ್ಳುವುದು ಅಗತ್ಯ. ಅವಶ್ಯಕತೆಗೆ ಅನುಗುಣವಾಗಿ, ವೇದಿಕೆ ನಿರ್ವಹಣಾ ಜವಾಬ್ದಾರಿಯನ್ನು ಸಮಿತಿ ಮಾರ್ಗಸೂಚಿಯಂತೆ ಎಲ್ಲಾ ಸದಸ್ಯರು ನಡೆದುಕೊಳ್ಳಬೇಕು ಎಂದರು.ಅಧಿಕಾರಿಗಳ ತಂಡದ ಜೊತೆಗೆ ಸಮಿತಿ ಇತರೆ ಸದಸ್ಯರನ್ನು ಸೇರ್ಪಡೆಗೊಳಿಸಿ ವಿವಿಧ ವೇದಿಕೆಗಳಿಗೆ ಸದಸ್ಯರನ್ನು ವಿಂಗಡಿಸಿ ಮಾಹಿತಿ ನೀಡಲಾಗುವುದು. ಸಮ್ಮೇಳನ ಪ್ರಾರಂಭವಾಗುವ ಹಿಂದಿನ ದಿನ, ವೇದಿಕೆ ನಿರ್ವಹಣೆ ಬಗ್ಗೆ ಪ್ರಾಯೋಗಿಕವಾಗಿ ತಿಳಿಸುವ ಪ್ರಯತ್ನ ಮಾಡಲಾಗುವುದು. ಆ ದಿನವೂ ತಪ್ಪದೇ ಸಮಿತಿಯ ಸದಸ್ಯರು ಭಾಗವಹಿಸಬೇಕು. ಜೊತೆಗೆ ಸಮ್ಮೇಳನದ ದಿನಗಳಲ್ಲಿ 2 ಗಂಟೆ ಮುಂಚಿತವಾಗಿ ಸಂಬಂಧಪಟ್ಟ ವೇದಿಕೆಗಳಲ್ಲಿ ಹಾಜರಿರಬೇಕೆಂದು ತಿಳಿಸಿದರು.
ಕಸಾಪ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ ಮಾತನಾಡಿ, ವೇದಿಕೆ ನಿರ್ವಹಣಾ ಸಮಿತಿಯು ಸಮ್ಮೇಳನದಲ್ಲಿ ಅತ್ಯಂತ ಮಹತ್ತರವಾದ ಸಮಿತಿ. ಯಶಸ್ವಿಗೆ ಸಮಿತಿಯ ಸಹಕಾರ ಅತ್ಯಮೂಲ್ಯವಾಗಿದೆ. ಎಲ್ಲರೂ ಸಮಿತಿಯ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿ ಅವರ ಮಾರ್ಗದರ್ಶನದಂತೆ ನಡೆದುಕೊಂಡು ಸಮ್ಮೇಳನ ಯಶಸ್ಸಿಗೆ ಅತ್ಯಂತ ಸೇವಾಮನೋಭಾವದಿಂದ ಜವಾಬ್ದಾರಿಯನ್ನು ನಿರ್ವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಸಭೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ವಿ.ಹರ್ಷ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೂಪಶ್ರೀ, ಸಮಿತಿ ಸಂಚಾಲಕ ವ.ನಂ.ಶಿವರಾಮು, ಸದಸ್ಯರಾದ ಹೊಳಲು ಶ್ರೀಧರ್, ಜಿ.ಧನಂಜಯ ದರಸಗುಪ್ಪೆ, ಎಂ.ಸಿ.ಭಾಸ್ಕರ್, ಎಲ್.ಕೃಷ್ಣ, ಸುಜಾತ ಕೃಷ್ಣ, ಲಿಂಗೇಗೌಡ, ಕುಮಾರ್ ಸೇರಿದಂತೆ ಹಲವು ಅಧಿಕಾರಿ-ಅಧಿಕಾರೇತರ ಸದಸ್ಯರು ಉಪಸ್ಥಿತರಿದ್ದರು.
ಸಮ್ಮೇಳನ ಸ್ಥಳ ವೀಕ್ಷಣೆ:ಸಭೆ ಮುಗಿದ ನಂತರ ವೇದಿಕೆ ನಿರ್ವಹಣೆ ಸಮಿತಿಯ ಸದಸ್ಯ ಕಾರ್ಯದರ್ಶಿ ಬಿ.ಎನ್.ವೀಣಾ ಅಧಿಕಾರಿಗಳ ತಂಡ ಮತ್ತು ಸಮಿತಿಯ ಸದಸ್ಯರ ಜೊತೆ ಸಮ್ಮೇಳನ ವೇದಿಕೆಯ ಸ್ಥಳಗಳ ಮಾಹಿತಿ ಪಡೆದು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಗತ್ಯ ಸೂಚನೆ ನೀಡಿದರು.