ಪ್ರಚಲಿತ ಸಮಸ್ಯೆಗಳಿಗೆ ಕವಿಗಳು ಕನ್ನಡಿಯಾಗಲಿ

| Published : Feb 24 2025, 12:35 AM IST

ಸಾರಾಂಶ

ಕಾವ್ಯಗಂಗೆ ಕವನ ಸಂಕಲನ ಲೋಕಾರ್ಪಣೆ ಹಾಗೂ ಕವಿಗೋಷ್ಠಿಯನ್ನು ಉದ್ಘಾಟಿಸಿ ಡಾ. ಬಾಳಾಸಾಹೇಬ ಲೋಕಾಪುರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಕವಿ, ಸಾಹಿತಿಗಳಿಗೆ ನಮ್ಮ ನಾಡಿನ ಮತ್ತು ದೇಶದ ವಿವಿಧ ಪರಂಪರೆ, ಇತಿಹಾಸದ ಅರಿವು ಅಗತ್ಯ. ಪ್ರಚಲಿತ ವಿದ್ಯಮಾನ, ಸಮಸ್ಯೆಗಳಿಗೆ ಕನ್ನಡಿಯಾಗುವ ಮೂಲಕ ಜನಮಾನಸದ ಕವಿತೆಗಳನ್ನು ರಚಿಸಬೇಕು ಎಂದು ಹಿರಿಯ ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಾಳಾಸಾಹೇಬ ಲೋಕಾಪುರ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಸಭಾಂಗಣದಲ್ಲಿ ಭಾನುವಾರ ವಿಶ್ವಚೇತನ ಪ್ರಕಾಶನ ಹಾಗೂ ಸೃಜನಶೀಲ ಕನ್ನಡ ಸಾಹಿತ್ಯ ಬಳಗದಿಂದ ಆಯೋಜಿಸಿದ್ದ ಸಾಹಿತಿ ಎಸ್.ಕೆ.ಹೊಳೆಪ್ಪನವರ ಸಂಪಾದಿಸಿದ ಕಾವ್ಯಗಂಗೆ ಕವನ ಸಂಕಲನ ಲೋಕಾರ್ಪಣೆ ಹಾಗೂ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕವಿಗಳು ಪ್ರಚಾರಪ್ರಿಯರಾಗದೆ ಸಹಜತೆಯನ್ನು ರೂಢಿಸಿಕೊಳ್ಳಬೇಕು. ವೈಚಾರಿಕತೆಯ ಅಹಂಭಾವ ಹೊಂದಿರಬಾರದು. ತಮ್ಮ ಜೀವನದ ಅನುಭವಗಳನ್ನು ಕವಿತೆಗಳನ್ನಾಗಿ ಕಟ್ಟಿಕೊಡುವ ಸಾಹಿತ್ಯ ರೂಢಿಸಿಕೊಳ್ಳಬೇಕು. ಭಾರತದ ಇತಿಹಾಸದಲ್ಲಿ ಗಂಗಾ ನದಿ ಅತ್ಯಂತ ಪವಿತ್ರವಾಗಿದೆ. ಇಂತಹ ಗಂಗಾ ನದಿಯ ಕುರಿತು ಎಸ್.ಕೆ.ಹೊಳೆಪ್ಪನವರ ಅವರು ವಿಶೇಷ ಆಸಕ್ತಿ ಮತ್ತು ಭಕ್ತಿ ಭಾವದಿಂದ ಈ ಕೃತಿಯನ್ನು ಸಂಪಾದಿಸಿದ್ದಾರೆ. ದೇಶದ ಐತಿಹಾಸಿಕ 77 ದೇವಾಲಯಗಳ ಕುರಿತು ಮಾಹಿತಿ ಒದಗಿಸಿದ್ದಾರೆ. ಈ ಕವನ ಸಂಕಲನ ಗಂಗಾ ನದಿಯ ಮಹತ್ವ ಸಾರುವ ಮಹತ್ವದ ಕೃತಿಯಾಗಿದೆ ಎಂದು ಹೇಳಿದರು.

ಬನಹಟ್ಟಿಯ ಹಿರಿಯ ಸಾಹಿತಿ, ವಿಮರ್ಶಕ ಸಿದ್ದರಾಜ ಪೂಜಾರಿ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ, ಭಾರತೀಯ ಧರ್ಮ ಗ್ರಂಥಗಳಲ್ಲಿ ಮತ್ತು ಮಹಾಕಾವ್ಯಗಳಲ್ಲಿ ಪ್ರಸ್ತಾಪವಾಗಿರುವ ದೇವಗಂಗೆಯ ಮಹಿಮೆಯನ್ನು ಹಾಗೂ ಆಕೆ ಸೃಷ್ಟಿಸಿದ ಪ್ರಕೃತಿ ಸೊಬಗನ್ನು ಇಲ್ಲಿ ಎಲ್ಲ ಕವಿಗಳು ಭಕ್ತಿ ಭಾವದಿಂದ ತಮ್ಮ ಕವನಗಳಲ್ಲಿ ವರ್ಣಿಸಿದ್ದಾರೆ. ಈ ಕವನ ಸಂಕಲನದ ಮುನ್ನುಡಿ ಬರೆಯುವ ಅವಕಾಶ ನನಗೆ ದೊರೆತಿದ್ದು ಸಂತಸ ತಂದಿದೆ. ಕವಿ, ಲೇಖಕ ಎಸ್.ಕೆ.ಹೊಳೆಪ್ಪನವರ ಕ್ರಿಯಾಶೀಲ ವ್ಯಕ್ತಿತ್ವ ಉಳ್ಳವರು. ಅವರ ಸಾಹಿತ್ಯಿಕ ಚಟುವಟಿಕೆಗಳು ಹೀಗೇ ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಕೆ.ಎ.ಲೋಕಾಪುರ ಪದವಿ ಮಹಾವಿದ್ಯಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಅರವಿಂದರಾವ್‌ ದೇಶಪಾಂಡೆ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಗಂಗಾ ನದಿಯು ಅತ್ಯಂತ ಪವಿತ್ರವಾದ ನದಿಯಾಗಿದೆ. ಈ ನದಿ ನೀರು ಅತ್ಯಂತ ಶುದ್ಧ ಹಾಗೂ ಪವಿತ್ರವಾಗಿವೆ. ಆದ್ದರಿಂದಲೇ 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕೋಟ್ಯಂತರ ಜನರು ಭಾಗವಹಿಸಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ನಾನು ಕೂಡ ಇತ್ತೀಚೆಗೆ ಪ್ರಯಾಗರಾಜಗೆ ಭೇಟಿ ನೀಡಿ ಪುಣ್ಯ ಸ್ನಾನದಲ್ಲಿ ಭಾಗವಹಿಸಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿ ರವಿ ಕೋಟಾರಗಸ್ತಿ, ಧಾರವಾಡದ ಕವಿವಿ ಕನ್ನಡ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಎಸ್.ಕೆ.ಮೇಲಕಾರ, ಸಾಹಿತಿ ನಾರಾಯಣ ಆನಿಖಿಂಡಿ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಆರ್.ಎಸ್.ದೊಡ್ಡನಿಂಗಪ್ಪ ಗೋಳ, ವಿನೂತನ ವಿಚಾರ ವೇದಿಕೆಯ ಅಧ್ಯಕ್ಷ ಅಪ್ಪಾಸಾಹೇಬ ಅಲಿಬಾದಿ, ಬೀದರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಜೆ.ಪಾರ್ವತಿ ಸೋನಾರೆ ಇನ್ನಿತರರು ಉಪಸ್ಥಿತರಿದ್ದರು. ನಂತರ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ 40 ಕವಿಗಳು ಭಾಗವಹಿಸಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಎಸ್.ಕೆ.ಹೊಳೆಪ್ಪನವರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಹಿಣಿ ಯಾದವಾಡ ಹಾಗೂ ನೀಲಾಂಬಿಕಾ ಹೊನ್ನಳ್ಳಿ ನಿರೂಪಿಸಿದರು. ಚಿದಾನಂದ ಗೋಟೆ ವಂದಿಸಿದರು.