ಪೊಲೀಸ್‌ ಇಲಾಖೆ ಜನಸ್ನೇಹಿ ಆಡಳಿತ ನೀಡಲಿ: ಡಿಸಿ ದಿವ್ಯಪ್ರಭು

| Published : Oct 22 2024, 12:24 AM IST

ಸಾರಾಂಶ

ಆಧುನಿಕ ತಂತ್ರಜ್ಞಾನದಿಂದ ಪೊಲೀಸ್‌ ಇಲಾಖೆಯು ಹಲವಾರು ಸೈಬರ್ ಕ್ರೈಂ ಪ್ರಕರಣಗಳನ್ನು ಇತ್ಯರ್ಥಪಡಿಸಿದೆ. ಠಾಣೆಗೆ ಬರುವ ಜನರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು. ಸಮಾಜದಲ್ಲಿ ಮಾದರಿಯಾಗುವ ನಿಟ್ಟಿನಲ್ಲಿ ಬದುಕು ಸಾಗಿಸಬೇಕು.

ಹುಬ್ಬಳ್ಳಿ:

ಜನರಿಗೆ ಉತ್ತಮ ಸೇವೆ, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುವಲ್ಲಿ ಪೊಲೀಸ್ ಇಲಾಖೆಯ ಕಾರ್ಯ ಮಹತ್ವಾಗಿದೆ. ಜನಸ್ನೇಹಿ ಆಡಳಿತ ನೀಡಲು ಇಲಾಖೆ ಮುಂದಾಗಬೇಕಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.ಇಲ್ಲಿನ ಕಾರವಾರ ರಸ್ತೆಯ ಹಳೆಯ ಸಿಎಆರ್ ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1959ರ ಅ. 21ರಂದು ಲಡಾಖ್‌ನಲ್ಲಿ ಚೀನಾ ದಾಳಿ ಮಾಡಿದಾಗ ವೀರಾವೇಶದಿಂದ ಹೋರಾಡಿ 10 ಜನ ಸಿಆರ್‌ಪಿಎಫ್ ಪೊಲೀಸರು ಹುತಾತ್ಮರಾದರು. ಅಲ್ಲದೇ 9 ಜನ ಪೊಲೀಸರನ್ನು ಚೀನಾ ವಶಕ್ಕೆ ಪಡೆಯಿತು. ಈ ಘಟನೆಯನ್ನು ನೆನೆಯುವ ನಿಟ್ಟಿನಲ್ಲಿ ಮತ್ತು ದೇಶ ಹಾಗೂ ರಾಜ್ಯಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ಪೊಲೀಸ್ ಸಿಬ್ಬಂದಿ ಸ್ಮರಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಅ. 21ರಂದು ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತದೆ ಎಂದರು.

ಪ್ರತಿ ವರ್ಷ 300ಕ್ಕೂ ಹಾಗೂ ದೇಶಾದ್ಯಂತ ಈ ವರೆಗೆ 37 ಸಾವಿರಕ್ಕೂ ಅಧಿಕ ಪೊಲೀಸರು ಹುತಾತ್ಮರಾಗಿದ್ದಾರೆ. ಪ್ರತಿದಿನವೂ ಹೊಸ ಸವಾಲು ಎದುರಿಸುವ ಪೊಲೀಸರ ಸೇವೆ ಅನನ್ಯ. ಹಗಲು-ರಾತ್ರಿ, ಬಿಸಿಲು-ಮಳೆ ಲೆಕ್ಕಿಸದೇ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಹೇಳಿದರು.

ಆಧುನಿಕ ತಂತ್ರಜ್ಞಾನದಿಂದ ಪೊಲೀಸ್‌ ಇಲಾಖೆಯು ಹಲವಾರು ಸೈಬರ್ ಕ್ರೈಂ ಪ್ರಕರಣಗಳನ್ನು ಇತ್ಯರ್ಥಪಡಿಸಿದೆ. ಠಾಣೆಗೆ ಬರುವ ಜನರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು. ಸಮಾಜದಲ್ಲಿ ಮಾದರಿಯಾಗುವ ನಿಟ್ಟಿನಲ್ಲಿ ಬದುಕು ಸಾಗಿಸಬೇಕು. ಕೆಲಸ ಕಾರ್ಯಗಳನ್ನು ಗೌರವಿಸಬೇಕು ಎಂದರು

ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಹುಬ್ಬಳ್ಳಿ-ಧಾರವಾಡ ನಗರಗಳನ್ನು ಮಾದಕ ವಸ್ತು ಮುಕ್ತ ನಗರವನ್ನಾಗಿಸಲಾಗುವುದು. ಸಮಾಜದಲ್ಲಿ ಶಾಂತಿ ಸುರಕ್ಷತೆ ಭಾವನೆ ಬಿತ್ತುವ ಹೊಣೆ ನಮ್ಮ ಮೇಲಿದೆ. ಸೈಬರ್ ಕ್ರೈಂ, ವಂಚನೆ, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಪರೇಡ್ ಕಮ್ಯಾಂಡರ್ ಮಾರುತಿ ಹೆಗಡೆ ನೇತೃತ್ವದ ಪೊಲೀಸ್ ಕವಾಯತು ತಂಡ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಹುತಾತ್ಮರಿಗೆ ಗೌರವ ಸಲ್ಲಿಸಿತು. ಗಣ್ಯರು ಹುತಾತ್ಮರಿಗೆ ಹೂಗುಚ್ಛ ಸಮರ್ಪಣೆ ಮಾಡಿದರು.

ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್, ವೈ.ಕೆ. ಕಾಶಪ್ಪನವರ, ಎಸಿಪಿ ಪ್ರಶಾಂತ ಹಿಟ್ಟನಗೌಡರ, ನಿವೃತ್ತ ಡಿಐಜಿ ರವಿಕುಮಾರ್ ನಾಯ್ಕ, ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಸಮಾಜದ ಮುಖಂಡರಾದ ವಿ.ಎಸ್.ವಿ. ಪ್ರಸಾದ್, ಗುರುನಾಥ ಉಳ್ಳಿಕಾಶಿ, ವಿಠ್ಠಲ ಲದ್ವಾ, ಶಿವಾನಂದಪ್ಪ, ಇಂದ್ರವದರ ಓಜಾ, ಟ್ರಾಫಿಕ್ ವಾರ್ಡನ್ ನವೀನ ಕುಲಕರ್ಣಿ, ಛೇಂಬರ್ ಆಫ್ ಕಾಮರ್ಸ್ ನಿರ್ದೇಶಕರಾದ ಶಾಂತರಾಜ ಪೋಳ, ಗೃಹ ರಕ್ಷಕ ದಳದ ಕೃಷ್ಣಾ ಬ್ಯಾಡಗಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಕುಟುಂಬಸ್ಥರು, ಸಾರ್ವಜನಿಕರು ಭಾಗವಹಿಸಿದ್ದರು.