ಕನ್ನಡಪರ ಕಾರ್ಯಕ್ರಮಗಳು ಗಡಿ ಭಾಗದಲ್ಲಿ ಹೆಚ್ಚಾಗಲಿ

| Published : Mar 01 2025, 01:00 AM IST

ಕನ್ನಡಪರ ಕಾರ್ಯಕ್ರಮಗಳು ಗಡಿ ಭಾಗದಲ್ಲಿ ಹೆಚ್ಚಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಲೆ, ಕಲಾವಿದರನ್ನು ಬೆಳೆಸಿ ಅವರಿಗೆ ಸ್ಫೂರ್ತಿ ನೀಡಿ ಕನ್ನಡ ನಾಡಿನ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಗಡಿ ಭಾಗದಲ್ಲಿ ಸರ್ಕಾರ ಹೆಚ್ಚು ಕನ್ನಡಪರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಗ್ರಾಮೀಣ ಭಾಗದ ಜಾನಪದ ಕಲೆಗಳು ಮೊದಲಿನಿಂದ ತನ್ನ ಅಸ್ಥಿತ್ವ ಉಳಿಸಿಕೊಂಡು ಬಂದಿವೆ. ಕಲೆ, ಕಲಾವಿದರನ್ನು ಬೆಳೆಸಿ ಅವರಿಗೆ ಸ್ಫೂರ್ತಿ ನೀಡಿ ಕನ್ನಡ ನಾಡಿನ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಗಡಿ ಭಾಗದಲ್ಲಿ ಸರ್ಕಾರ ಹೆಚ್ಚು ಕನ್ನಡಪರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕೆಂದು ಖಡಕಲಾಟ ಗ್ರಾಪಂ ಅಧ್ಯಕ್ಷ ರಾಕೇಶ ಚಿಂಚಣೆ ಹೇಳಿದರು.

ಖಡಕಲಾಟದ ವಿರಕ್ತಮಠದ ಅನುಭವ ಮಂಟಪದಲ್ಲಿ ಧುಳಗನವಾಡಿ ರಂಗಕಲಾಶ್ರೀ ಗ್ರಾಮೀಣ ಸೇವಾ ಸಂಘ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಗ್ರಾಪಂ ಖಡಕಲಾಟ ಸಹಯೋಗದಲ್ಲಿ ನಡೆದ ಶಿವರಾತ್ರಿ ಸಾಂಸ್ಕೃತಿಕ ಮೇಳ ಉದ್ಘಾಟಿಸಿ ಮಾತನಾಡಿದರು. ಸಾಹಿತಿ ಆರ್.ಎಸ್.ಜೋಡಟ್ಟಿ ಅತಿಥಿಗಳಾಗಿ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಕರ್ನಾಟಕದ ಗತವೈಭವ ಮರುಕಳಿಸಲು ಕಲಾವಿದರು ಹಾಡುವ ಹಾಡುಗಳು ನಮ್ಮೆಲ್ಲರಿಗೆ ಅದರ ಚರಿತ್ರೆ ತಿಳಿಸುತ್ತವೆ. ಅಂತಹ ನಮ್ಮ ಕಲಾವಿದರು ನಾಡಿನ ಸಾಂಸ್ಕೃತಿಕ ರಾಯಭಾರಿಗಳು ಎಂದರು. ವಿರಕ್ತಮಠ ಟ್ರಸ್ಟ್‌ ಅಧ್ಯಕ್ಷ ಸತೀಶ ಪಾಟೀಲ, ಚಂದ್ರಕಾಂತ ಬಡಗಾಂವೆ, ಚಂದ್ರಕಾಂತ ಖೂಟ, ಶಂಕರ ಖೋತ, ಸಾಗರ ಖೂಟ, ಪ್ರಶಾಂತ ಮಾಳಿ, ವಿಜಯ ವಾಘಮಾರೆ, ವಿನೋದ ಮಾಳಗೆ ಇದ್ದರು.

ಯುವ ಪ್ರತಿಭಾವಂತ ಕಲಾ ಸಾಧಕ ಅಖಿಲೇಶ ವಿಟೇಕರ- ಚಿಕ್ಕೋಡಿ, ವಿಠ್ಠಲ ಮಾನೆ- ವಾಳಕಿ, ಅಜೀತ ಖೊಡೆ- ಖಡಕಲಾಟ, ರಾಧಾ ಪೂಜೇರಿ-ಭೆಂಡವಾಡಗೆ ಶಾಲು ಹೊದಿಸಿ ಫಲಪುಪ್ಷ ನೀಡಿ ಸನ್ಮಾನಿಸಲಾಯಿತು. ಕಲಾತಂಡದವರು ಸುಗಮ ಸಂಗೀತ, ಜಾನಪದ ಗಾಯನ, ತತ್ವಪದ, ಚೌಡಕಿ ಪದ, ಭರತನಾಟ್ಯ, ಜಾನಪದ ನೃತ್ಯ, ಸಣ್ಣಾಟ ಪದಗಳು, ಕಿರು ನಾಟಕ ಕಲಾಪ್ರರ್ಶನ ನೀಡಿ ನೋಡುಗರಿಗೆ ಮನರಂಜನೆ ನೀಡಿದರು. ಸಂಘದ ಅಧ್ಯಕ್ಷ ಸುಜಾತಾ ಮಗದುಮ್ಮ ಸ್ವಾಗತಿಸಿ, ಸುಪ್ರೀಯಾ ಕಲಾಚಂದ್ರ ನಿರೂಪಿಸಿ, ಮಾರುತಿ ಕಾಮಗೌಡ ವಂದಿಸಿದರು.