ಜನರ ಮಧ್ಯೆ ಕಾರ್ಯಕ್ರಮ ನಡೆಯುವಂತಾಗಲಿ: ಶೋಭಾ ಮೇಟಿ

| Published : Apr 10 2025, 01:16 AM IST

ಸಾರಾಂಶ

ಮುಂಡರಗಿ ಪಟ್ಟಣದ ಚೈತನ್ಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ಶರಣ ಚಿಂತನ ಮಾಲಿಕೆ 14ರ ಕಾರ್ಯಕ್ರಮವನ್ನು ಸಾಹಿತಿ ಶೋಭಾ ಮೇಟಿ ಉದ್ಘಾಟಿಸಿದರು.

ಮುಂಡರಗಿ: ಶರಣರ ಚಿಂತನೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವಂತಹ, ಜನತೆಗೆ ಸಾಮಾಜಿಕ ಕಾಳಜಿಯನ್ನು ಮೂಡಿಸುವಂತ ಕಾರ್ಯಕ್ರಮಗಳು ಯಾವುದೇ ಕಟ್ಟಡ, ಭವನಗಳಿಗೆ ಸೀಮಿತವಾಗದೇ ಪಟ್ಟಣದಲ್ಲಿನ ಆಯಾ ವಾರ್ಡುಗಳಿಗೆ ಹೋಗಿ ಅಲ್ಲಿನ ಜನತೆಯ ಮಧ್ಯದಲ್ಲಿ ಜರುಗುವಂತಾಗಬೇಕು. ಅಂದಾಗ ಅವು ಯಶಸ್ವಿಯಾಗುತ್ತವೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ, ಸಾಹಿತಿ ಶೋಭಾ ಮೇಟಿ ಹೇಳಿದರು.

ಪಟ್ಟಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಚೈತನ್ಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಶರಣ ಚಿಂತನ ಮಾಲಿಕೆ 14ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾವು ದೊಡ್ಡವರನ್ನು ಕೂಡಿಸಿ ಕಾರ್ಯಕ್ರಮ ಮಾಡುವ ಜತೆಗೆ ಆಯಾ ವಾರ್ಡ್‌ಗಳಿಗೆ ತೆರಳಿದರೆ ಅಲ್ಲಿ ಪಾಲಕರ ಜತೆಗೆ ಮಕ್ಕಳೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶರಣರ ಚಿಂತನೆ, ಆಚಾರ ವಿಚಾರಗಳು ಹಾಗೂ ವಚನಗಳ ಕುರಿತು ತಿಳಿದುಕೊಳ್ಳುತ್ತಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ಕುರಿತು ಚಿಂತನೆ ಮಾಡುವುದು ಅವಶ್ಯವಾಗಿದೆ ಎಂದು ಹೇಳಿದರು.

ಸ್ವಾನುಭವದ ಸ್ವತಂತ್ರ ಶರಣೆ ಬೊಂತಾದೇವಿ ಕುರಿತು ಪ್ರತಿಭಾ ಹೊಸಮನಿ ಉಪನ್ಯಾಸ ನೀಡಿ, ಕಾಶ್ಮೀರದ ರಾಜನಾಗಿದ್ದ ಮಹಾದೇವ ಭೂಪಾಲನ ಸಹೋದರಿ ನಿಜದೇವಿ ವಾಸ್ತವದಲ್ಲಿ ಅತ್ಯಂತ ಕರುಣಾಮಯಿಯಾಗಿದ್ದರು. ಸ್ವಂತ ಅನುಭವಗಳಿಂದ ಪರಿಪಕ್ವವಾಗಿದ್ದ, ವೀರ ವಿರಾಗಿಣಿಯೂ ಆಗಿದ್ದ ಬೊಂತಾದೇವಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದ ಅನುಭವ ಮಂಟಪದ ಅಧ್ಯಕ್ಷ ಅಲ್ಲಮಪ್ರಭುದೇವರು ಕದಳಿಯ ಕರ್ಪೂರ ಅಕ್ಕಮಹಾದೇವಿಯಷ್ಟೇ ಆತ್ಮಿಕ ಬಲ, ಶರಣ ತತ್ವ ಗಳನ್ನು ಬೊಂತಾದೇವಿಯೂ ಕೂಡಾ ಹೊಂದಿದ್ದಾಳೆ ಎಂದು ಘೋಷಿಸಿದ್ದರು ಎನ್ನುವುದನ್ನು ಕೇಳಿದರೆ ನಮಗೆ ಅವರ ಮಹತ್ವ ತಿಳಿಯುತ್ತದೆ ಎಂದರು. ಅವರ ಕೆಲವು ವಚನಗಳನ್ನು ವಿಶ್ಲೇಷಿಸಿದರು.

ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ವೀಣಾ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೊಂತಾದೇವಿಯು ಸರ್ವಜೀವಿಗಳಲ್ಲಿಯೂ ಶಿವನ ಅಂಶವಿದೆ ಎಂಬ ಪರಮ ಸತ್ಯವನ್ನು ತನ್ನ ವಚನಗಳಲ್ಲಿ ಪ್ರಸ್ತುತಪಡಿಸಿದ್ದಾರೆ ಎಂದರು.

ತಾಲೂಕು ಶ.ಸಾ.ಪ. ಗೌರವಾಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ರತ್ನಾ ಕಾಗನೂರಮಠ, ಜಯಶ್ರೀ ಅಳವಂಡಿ, ಅಕ್ಕಮಹಾದೇವಿ ಕೊಟ್ಟೂರಶೆಟ್ಟರ್, ಉಮಾ ದೊಡ್ಡಮನಿ, ಪಾರ್ವತಿ ಕುಬಸದ, ಎಸ್.ಬಿ. ಕರಿಭರಮಗೌಡ್ರ, ಆರ್.ಕೆ. ರಾಯನಗೌಡ್ರ, ವೀರನಗೌಡ ಗುಡದಪ್ಪನವರ, ಹನುಮರಡ್ಡಿ ಇಟಗಿ, ಶಂಕರ ಕುಕನೂರ, ಮಂಜುನಾಥ ಮುಧೋಳ, ಕೃಷ್ಣ ಸಾಹುಕಾರ, ಎಂ.ಎಸ್. ಶೀರನಹಳ್ಳಿ, ಎನ್. ಎನ್. ಕಲಕೇರಿ, ಎಂ.ಐ. ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.