ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಾಕಿಕೊಂಡ ಕ್ರಿಯಾಯೋಜನೆಗಳಿಗೆ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಕ್ರಮವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಮಖಂಡಿ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಜಮಖಂಡಿ ಮತ್ತು ರಬಕವಿ-ಬನಹಟ್ಟಿ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯೋಜನೆಗಳಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳು ಆಧುನಿಕ ತಂತ್ರಜ್ಞಾನ ಬಳಸಿ ಬಳಸಿಕೊಂಡು ನಿಖರವಾದ ಮಾಹಿತಿ ನೀಡಬೇಕು. ನಿಯಮಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕು ಯಾವುದೇ ರೀತಿಯಲ್ಲಿ ವಿಳಂಬಕ್ಕೆ ಅವಕಾಶ ನೀಡಬಾರದು ಎಂದರು.
ಗ್ರಾಮಸ್ಥರ ಭಾಗವಹಿಸುವಿಕೆ ಮತ್ತು ಸಾಮೂಹಿಕ ಹೊಣೆಗಾರಿಕೆ ಮೂಲಕ ಆಡಳಿತವನ್ನು ಬಲಪಡಿಸಬೇಕು. ಕಾಮಗಾರಿಗಳ ಗುಣಮಟ್ಟ, ಸ್ಥಳೀಯರ ಜವಾಬ್ದಾರಿತ್ವ ಹಾಗೂ ಪಾರದರ್ಶಕತೆ ಮುಖ್ಯವಾಗಿದೆ. ಸ್ಥಳೀಯ ಆದಾಯ ಹೆಚ್ಚಳಕ್ಕೆ ಗಮನ ಹರಿಸಬೇಕು. ಗ್ರಾಮ ಪಂಚಾಯಿತಿಯಲ್ಲಿ ತೆರಿಗೆ ನೂರಕ್ಕೆ ನೂರರಷ್ಟು ಸಂಗ್ರಹಕ್ಕೆ ಕ್ರಮವಹಿಸಬೇಕು. ಅಂದಾಗ ಮಾತ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು. ನಿಗದಿ ಪಡಿಸಿದ ಗುರಿಗಳ ಪ್ರಗತಿ ಪರಿಶೀಲಿಸಿದ ಅವರು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದರು.ವಸೂಲಿ ಪ್ರಕ್ರಿಯೆಯ ನೈಜ ಆಧಾರಗಳು, ಡಿಜಿಟಲ್ ಲೈಬ್ರರಿಗಳ ಸ್ಥಾಪನೆ ಮತ್ತು ಬಳಕೆ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಲಭ್ಯವಿರುವ ಡಿಜಿಟಲ್ ಮೂಲಸೌಕರ್ಯ, ಲೈಬ್ರರಿ ಬಳಕೆಯ ಪ್ರಮಾಣ ಮತ್ತು ನಿರ್ವಹಣೆ, ಗ್ರಾಪಂ ಕಟ್ಟಡಗಳು, ಕಚೇರಿಗಳ ಮೂಲಭೂತ ಸೌಕರ್ಯಗಳು, ಸೇವಾ ಪೂರೈಕೆಗಾಗಿ ಅನುಕೂಲವಿರುವ ಪರಿಸರ ನಿರ್ಮಾಣ, ಜಲ ಜೀವನ ಮಿಷನ್, ಎಲ್ಲ ಮನೆಗಳಿಗೆ ನಲಿನ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದರು. ಸಂವಹನ ಕೊಠಡಿಗಳು, ಟ್ಯಾಂಕ್‌ಗಳು, ಪೈಪ್ಲೈನ್ ವಿಸ್ತರಣೆ ಬಗ್ಗೆ ಪರಿಶೀಲಿಸಿದರು. ಜನಸಾಮಾನ್ಯರಿಗೆ ಸೇವೆಯ ಲಭ್ಯತೆ, ಸ್ವಚ್ಛ ಭಾರತ ಮಿಷನ್, ಶೌಚಾಲಯಗಳ ನಿರ್ಮಾಣ ಮತ್ತು ಶೇಕಡಾವಾರು ಬಳಕೆ, ದೈನಂದಿನ ತ್ಯಾಜ್ಯ ನಿರ್ವಹಣೆ, ಒಪ್ಪಂದಿತ ವಾಸ್ತವಿಕತೆ, ಗ್ರಾಮೀಣ ಸ್ವಚ್ಛತೆಯ ಮಟ್ಟದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಜಮಖಂಡಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಎಂ, ರಬಕವಿ-ಬನಹಟ್ಟಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಾಟಿಹಾಳ, ಎರಡು ತಾಲೂಕುಗಳ ಸಹಾಯಕ ನಿರ್ದೇಶಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.