ಸಾರಾಂಶ
ಶಿಗ್ಗಾಂವಿ: ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡೆಂಘೀ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅವಶ್ಯವಿದ್ದು, ತಮ್ಮ ಸುತ್ತಲಿನ ವಾತಾವರಣದಲ್ಲಿ ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸಲು ಶಕ್ತಿಮೀರಿ ಪ್ರಯತ್ನಿಸಿ ಎಂದು ಜಿಲ್ಲಾ ಆಸ್ಪತ್ರೆಯ ಡಿಎಚ್‌ಒ ಡಾ. ಜಯಾನಂದ ಸಾರ್ವಜನಿಕರಿಗೆ ಕರೆ ನೀಡಿದರು. ಪಟ್ಟಣದ ಎಂಪಿಎಂ ಶಿಕ್ಷಣ ಸಂಸ್ಥೆಯ ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಡೆಂಘೀ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ನಿಮ್ಮ ಮನೆಯಲ್ಲಿ ಯಾರಿಗಾದರೂ ಡೆಂಘೀ ಜ್ವರ ಬಂದರೆ, ನಿಮ್ಮನ್ನು ಮತ್ತು ಇತರ ಕುಟುಂಬದ ಸದಸ್ಯರನ್ನು ಸೊಳ್ಳೆಗಳಿಂದ ರಕ್ಷಿಸುವ ಪ್ರಯತ್ನಗಳ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಿ. ಸೋಂಕಿತ ಕುಟುಂಬದ ಸದಸ್ಯರನ್ನು ಕಚ್ಚುವ ಸೊಳ್ಳೆಗಳು ನಿಮ್ಮ ಮನೆಯಲ್ಲಿ ಇತರರಿಗೆ ಸೋಂಕನ್ನು ಹರಡಬಹುದು. ಡೆಂಘೀ ಜ್ವರದ ತೀವ್ರ ಪ್ರಕರಣಗಳು ಗರ್ಭಿಣಿಯರು ಮತ್ತು ನವಜಾತ ಶಿಶುಗಳಲ್ಲಿ ಹೆಚ್ಚಿನ ಅಪಾಯವನ್ನು ತರುತ್ತವೆ. ಎರಡನೇ ಬಾರಿ ಪೀಡಿತ ರೋಗಿಗಳಿಗೆ ತೀವ್ರವಾದ ಡೆಂಘೀ ಬರುವ ಸಾಧ್ಯತೆಗಳು ಹೆಚ್ಚು ಇದ್ದು, ಶಾಲೆಗಳು ಮಕ್ಕಳಿಗೆ ಡೆಂಘೀ ಕುರಿತು ಹೆಚ್ಚಿನ ಅರಿವನ್ನು ಮೂಡಿಸಬೇಕು ಎಂದರು.
ಟಿಹೆಚ್‌ಒ ಸತೀಶ ಎ.ಆರ್. ಮಾತನಾಡಿ, ಡೆಂಘೀ ಜ್ವರದ ಹರಡುವಿಕೆಯನ್ನು ತಡೆಗಟ್ಟಲು ಸೊಳ್ಳೆಗಳ ನಿಯಂತ್ರಣ ಬಹಳ ಮುಖ್ಯ. ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಲು ಎಲ್ಲಿಯೂ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು ಅಥವಾ ನೀರು ನಿಲ್ಲುವಂತಹ ಯಾವುದೇ ರೀತಿಯ ವಸ್ತುಗಳನ್ನು ಹೊರಗೆ ಎಸೆಯದೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯ ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಬಳಸಿ. ಸೊಳ್ಳೆ ನಿವಾರಕವನ್ನು ವೈದ್ಯರ ಸಲಹೆ ಮತ್ತು ತಯಾರಕರ ಸೂಚನೆ ಮೇರೆಗೆ ಬಳಸಬಹುದು. ಮೈ ಮುಚ್ಚುವಂತಹ ಬಟ್ಟೆಗಳನ್ನು ಧರಿಸಬೇಕು. ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸುವುದು ಉತ್ತಮ. ಪ್ರತಿಯೊಬ್ಬರೂ ಡೆಂಘೀ ಎಂಬ ಮಾರಕ ಜ್ವರ ಹರಡುವ ರೀತಿ ಮತ್ತು ಡೆಂಘೀ ಹರಡದಂತೆ ತಡೆಗಟ್ಟುವ ವಿಧಾನಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಎಂಪಿಎಂ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ದೇವರಾಜ ಸುಣಗಾರ, ಡಾ. ಗೈಗೋ ನಾಯಕ, ಹಿರಿಯ ಆರೋಗ್ಯ ನಿರಿಕ್ಷಣಾ ಅಧಿಕಾರಿ ಕೆ.ಎಸ್. ಕುಂದಗೋಳ, ಶಾಲಾ ಉಸ್ತುವಾರಿ ಮುಖ್ಯೋಪಾಧ್ಯಾಯಿನಿ ಸವಿತಾ ಗೌರಿಮಠ, ಸಿಎಚ್‌ಒ ಸಂತೋಷ ಎಸ್.ಕೆ., ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಚೆನ್ನಬಸಪ್ಪಾ ಹೆಡೆಯಾಲ, ಗುರು ಹಗಲೂರ, ಎಸ್.ಕೆ. ಜಗನ್ನಾಥ, ಸರೋಜಾ ಎಚ್., ಕಟ್ಟಿಮನಿ, ಶಂಕರ ಕೋರಿ ಶೆಟ್ಟರ, ಶಾಲಾ ಶಿಕ್ಷಕಿಯರು ವಿದ್ಯಾರ್ಥಿಗಳು ಆಶಾ ಕಾರ್ಯಕರ್ತರು ಇದ್ದರು.
ಜಾಥಾಕ್ಕೆ ಚಾಲನೆ: ಜಿಲ್ಲಾ ಪಂಚಾಯತ ಹಾವೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ತಾಲೂಕು ಆರೂಗ್ಯ ಅಧಿಕಾರಿಗಳ ಕಾರ್ಯಾಲಯ ಶಿಗ್ಗಾಂವಿ ಸಂಯುಕ್ತ ಆಶ್ರಯದಲ್ಲಿ ಶಿಗ್ಗಾಂವಿ ತಾಲೂಕು ಮಟ್ಟದ ರಾಷ್ಟ್ರೀಯ ಡೆಂಘೀ ದಿನಾಚರಣೆಯ ಅಂಗವಾಗಿ ಡೆಂಘೀ ನಿಯಂತ್ರಣದಲ್ಲಿ ಸಮುದಾಯದ ಪಾತ್ರದ ಮಹತ್ವ ಘೋಷವಾಕ್ಯದಡಿಯಲ್ಲಿ ನಡೆದ ಜಾಥಾ ಕಾರ್ಯಕ್ರಮಕ್ಕೆ ಡಾ. ಅಂಬೇಡ್ಕರ್ ಸರ್ಕಾರಿ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ತಹಸೀಲ್ದಾರ್ ಸಂತೋಷ ಹಿರೇಮಠ ಚಾಲನೆ ನೀಡಿದರು.