ಸಾರಾಂಶ
ಬಳ್ಳಾರಿ: ಗ್ರಂಥಾಲಯದ ಪುಸ್ತಕಗಳು ಮತ್ತು ಅವುಗಳ ಮಾಹಿತಿಯು ಬಹಳ ಉಪಯುಕ್ತವಾಗಿದ್ದು, ಮಕ್ಕಳು, ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2024ರ ಅಂಗವಾಗಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2024ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಡಾ.ಎಸ್.ಆರ್. ರಂಗನಾಥನ್ ಹಾಗೂ ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬಳ್ಳಾರಿಯಲ್ಲಿ ಅತ್ಯುತ್ತಮ ಗ್ರಂಥಾಲಯ ಸೌಕರ್ಯವಿದ್ದು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅತ್ಯಂತ ಅನುಕೂಲವಿದೆ. ಸಾರ್ವಜನಿಕರು ಸಹ ನಿತ್ಯ ಕೇಂದ್ರ ಗ್ರಂಥಾಲಯಕ್ಕೆ ಆಗಮಿಸಿ ತಮಗೆ ಬೇಕಾದ ಪುಸ್ತಕದ ಓದಿನಲ್ಲಿ ತೊಡಿಗಿಸಿಕೊಳ್ಳಬೇಕು ಎಂದರಲ್ಲದೆ, ಕೇಂದ್ರ ಗ್ರಂಥಾಲಯಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಮಹಾನಗರ ಪಾಲಿಕೆಯಿಂದ ಒದಗಿಸಲಾಗುವುದು ಎಂದು ತಿಳಿಸಿದರು.
ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರು ಹಾಗೂ ಮಹಾನಗರ ಪಾಲಿಕೆಯ ಸದಸ್ಯೆ ಬಿ.ಜಾನಕಿ ಅವರು ಮಾತನಾಡಿದರು.ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕಿ ಬಿ.ಕೆ. ಲಕ್ಷ್ಮಿ ಕಿರಣ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರು ಹಾಗೂ ನಿವೃತ್ತ ಉಪನ್ಯಾಸಕ ಎನ್.ಬಸವರಾಜ “ಆಧುನಿಕ ಯುಗದಲ್ಲಿ ಓದುವ ಸಂಸ್ಕೃತಿ” ಕುರಿತು ವಿಶೇಷ ಉಪನ್ಯಾಸ ನೀಡಿದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2024ರ ನಿಮಿತ್ತ ನಗರದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ “ಆಧುನಿಕ ಯುಗದಲ್ಲಿ ಗ್ರಂಥಾಲಯಗಳ ಮಹತ್ವ” ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.ಗ್ರಂಥಾಲಯದ ಉತ್ತಮ ಓದುಗರಲ್ಲಿ ಇಬ್ಬರಿಗೆ ಉತ್ತಮ ಓದುಗರ ಪ್ರಶಸ್ತಿಯನ್ನು ಹಾಗೂ ಗ್ರಂಥಾಲಯದ ಸದುಪಯೋಗ ಪಡೆದು ಸಾಧನೆ ಮಾಡಿದ ಇಬ್ಬರಿಗೆ ಸಾಧನೆಗೈದ ಉತ್ತಮ ಓದುಗ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು. ಸಮಾರಂಭದಲ್ಲಿ ಹಾಜರಿದ್ದ ಅನೇಕರು ಗ್ರಂಥಾಲಯದ ಬಗೆಗಿನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಶ್ರೀಮೇಧ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಸುಮಾ.ವೈ., ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಹುಸೇನ್ ಸಾಬ್, ಗ್ರಂಥಾಲಯ ಸಹಾಯಕ ಸಿದ್ದಪ್ಪ ಕೆ., ಸಂತೋಷ್ ಕುಮಾರ್.ಎಸ್., ಸಹ ಗ್ರಂಥಪಾಲಕ ಎಸ್.ಟಿ.ಪ್ರಭಾಕರ್, ಗ್ರಂಥಪಾಲಕ ಆರ್.ಶಾರದ, ದ್ವಿದಸ ಡೊಳ್ಳಿನ ಮಹೇಂದ್ರ, ವಾಹನ ಚಾಲಕ ಶ್ರೀನಿವಾಸ, ಬೆರಳಚ್ಚುಗಾರ ಸಂತೋಷ್ ಸೇರಿದಂತೆ ವಿವಿಧ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಜಿಲ್ಲಾ, ನಗರ ಕೇಂದ್ರ ಗ್ರಂಥಾಲಯದ ಇತರೆ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕ ಓದುಗರು ಉಪಸ್ಥಿತರಿದ್ದರು.ಬಳ್ಳಾರಿಯ ಕೇಂದ್ರ ಗ್ರಂಥಾಲಯದಲ್ಲಿ ಜರುಗಿದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮಕ್ಕೆ ಮೇಯರ್ ಮುಲ್ಲಂಗಿ ನಂದೀಶ್ ಚಾಲನೆ ನೀಡಿದರು.