ಸಾರಿಗೆ ವ್ಯವಸ್ಥೆಯ ಸುಗಮ ಕಾರ್ಯಾಚರಣೆ ಕುರಿತ ಉನ್ನತ ಮಟ್ಟದ ಪೂರ್ವಸಿದ್ಧತಾ ಸಭೆಯಲ್ಲಿ ಡಿಸಿ ಸೂಚನೆ

ಕನ್ನಡಪ್ರಭ ವಾರ್ತೆ ಕೋಲಾರಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿ ಮುಂಬರುವ ಮೇ ೨೦ ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಸಾರ್ವಜನಿಕರಿಗೆ ಯಾವುದೇ ರೀತಿಯ ಸಾರಿಗೆ ತೊಂದರೆಯಾಗದಂತೆ ಕಟ್ಟುನಿಟ್ಟಿನ ಪರ್ಯಾಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದ್ದಾರೆ.ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಾರಿಗೆ ವ್ಯವಸ್ಥೆಯ ಸುಗಮ ಕಾರ್ಯಾಚರಣೆ ಕುರಿತ ಉನ್ನತ ಮಟ್ಟದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.ಪ್ರಸ್ತುತ ತೀವ್ರ ಬೇಸಿಗೆ ಕಾಲವಾಗಿರುವುದರಿಂದ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಸಾರಿಗೆ ಸೌಕರ್ಯ ಒದಗಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಅದರಲ್ಲೂ ಮುಖ್ಯವಾಗಿ, ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಯಶಸ್ವಿ ಅನುಷ್ಠಾನದ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕೋಲಾರ ವಿಭಾಗದ ಸಾರಿಗೆ ಸಿಬ್ಬಂದಿ ಮುಷ್ಕರದ ನೆಪದಲ್ಲಿ ತಮ್ಮ ಕರ್ತವ್ಯಗಳಿಗೆ ಗೈರುಹಾಜರಾಗಬಾರದು. ಸಾರ್ವಜನಿಕ ಸೇವೆ ಆದ್ಯತೆಯಾಗಿ ಪರಿಗಣಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲೆಯ ಗ್ರಾಮೀಣ ಭಾಗಗಳ ಜನರಿಗೆ, ಹಳ್ಳಿಗಳ ವ್ಯಾಪ್ತಿಯಿಂದ ಮತ್ತು ವಿವಿಧ ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಬರುವವರಿಗೆ ಹಾಗೂ ಕೋಲಾರದಿಂದ ಬೆಂಗಳೂರಿಗೆ ಪ್ರಯಾಣಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಈಗಾಗಲೇ ನಿಗಮದ ವತಿಯಿಂದ ಹೆಚ್ಚಿನ ಟ್ರಿಪ್‌ಗಳನ್ನು ಒದಗಿಸಲಾಗಿದೆ. ಈ ಮಾರ್ಗಗಳಲ್ಲಿ ಬಸ್‌ಗಳ ಸುಗಮ ಕಾರ್ಯಾಚರಣೆಗೆ ಯಾವುದೇ ಅಡ್ಡಿಯಾಗದಂತೆ ಸಾರಿಗೆ ಸಂಸ್ಥೆಯು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.ಮುಷ್ಕರದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದ್ದು ಜಿಲ್ಲೆಯ ಎಲ್ಲಾ ತಾಲೂಕು ಬಸ್ ಘಟಕಗಳಿಗೆ ಮತ್ತು ಪ್ರಮುಖ ಬಸ್ ನಿಲ್ದಾಣಗಳಿಗೆ ಸೂಕ್ತ ಪೊಲೀಸ್ ಭದ್ರತೆ ಹಾಗೂ ಪೂರ್ಣ ಸಹಕಾರ ನೀಡಲು ಸೂಚಿಸಿದೆ, ಇದರೊಂದಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಹ ಸಾರ್ವಜನಿಕ ಪ್ರಯಾಣಿಕರ ಸುಗಮ ಸಂಚಾರಕ್ಕೆ ಪೂರಕವಾಗಿ ತಮ್ಮ ವ್ಯಾಪ್ತಿಯಲ್ಲಿ ಅಗತ್ಯವಿರುವ ಎಲ್ಲಾ ಪರ್ಯಾಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.ಸಭೆಯಲ್ಲಿ ಕೋಲಾರ ಎಸ್‌ಪಿ ಕನ್ನಿಕಾ ಸಿಕ್ರಿವಾಲ್, ಎಡಿಸಿ ಎಸ್.ಎಂ.ಮಂಗಳ, ಕರಾರಸಾ ನಿಗಮದ ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವೇಣುಗೋಪಾಲ್ ಇದ್ದರು.