ಸಾರಾಂಶ
ಕನ್ನಡ ಪ್ರಭ ವಾರ್ತೆ ಮುಧೋಳ
ಮಾಧ್ಯಮಗಳ ನಿಜವಾದ ಮಾಲೀಕರು ಯಾರು ಎಂದರೆ ಓದುಗರು, ನೋಡುಗರು, ಕೇಳುಗರು ಮತ್ತು ವೀಕ್ಷಕರಾಗಿದ್ದಾರೆ. ಇದನ್ನು ಅರಿತುಕೊಂಡು ಪತ್ರಕರ್ತರು ಸಾರ್ವಜನಿಕರ ಸಮಸ್ಯೆಗಳಿಗೆ ಮತ್ತು ಬೇಕು ಬೇಡಿಕೆಗಳಿಗೆ ಸ್ಪಂದಿಸಿ ನ್ಯಾಯ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಮಾಧ್ಯಮದ ಮಿತ್ರರು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ ಹೇಳಿದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮುಧೋಳ ವತಿಯಿಂದ ಭಾನುವಾರ ಸ್ಥಳೀಯ ರನ್ನ ಗ್ರಂಥಾಲಯದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ-2024ರ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬದಲಾದ ಕಾಲದಲ್ಲಿ ಸುದ್ದಿಗಳ ಹರಿವು ಹೆಚ್ಚಾಗಿದ್ದು, ಅವುಗಳಲ್ಲಿನ ವಾಸ್ತವಾಂಶ ಗುರುತಿಸಿ ಪ್ರಕಟಿಸುವ ಮೂಲಕ ಸಾಮಾಜಿಕ ಕಳಕಳಿ ಮತ್ತು ವಿವೇಚನೆಯಿಂದ ಹೆಜ್ಜೆಯಿಡಬೇಕು. ಮೊದಲು ಪತ್ರಕರ್ತರು ಸುದ್ದಿಗಳನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿಯಿತ್ತು. ಸದ್ಯ ಕಾಲ ಬದಲಾಗಿದೆ. ಸುದ್ದಿಗಳು ಹರಿವು ಹೆಚ್ಚಾಗಿದೆ. ಅವುಗಳ ಸತ್ಯಾಸತ್ಯತೆ ಪರಿಶೀಲಿಸಿ ಪ್ರಕಟಿಸುವ ಕಾಲ ಬಂದಿದೆ. ಇತ್ತೀಚಿನ ದಿನಗಳಲ್ಲಿ ಮುದ್ರಣ ಮಾಧ್ಯಮಗಳು ಕ್ಷೀಣಿಸುತ್ತಿದೆ. ಡಿಜಿಟಲ್, ವೆಬ್ ಮಿಡಿಯಾ, ಇಂಟರ್ನೆಟ್ ಮಿಡಿಯಾ ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ. ಇದರಿಂದ ವರದಿಗಾರರ ಸಂಖ್ಯೆ ಕಡಿಮೆಯಾಗಿ ನಾಗರಿಕ ಪತ್ರಿಕೋದ್ಯಮ ಬೆಳೆಯಲು ಕಾರಣವಾಗುತ್ತಿದೆ. ಕಾರಣ ಪತ್ರಕರ್ತರು ವೃತ್ತಿ ಬದ್ಧತೆ ಜೊತೆಗೆ ಸಾಮಾಜಿಕ ಜವಾಬ್ದಾರಿ ಅರಿತು ಸುದ್ದಿಗಳನ್ನು ಮಾಡಿದರೆ ಜನ ಮೆಚ್ಚುಗೆ ಪಡೆಯಲು ಸಾದ್ಯ ಎಂದರು.
ಕನ್ನಡ ಪ್ರಭ ಜಿಲ್ಲಾ ವರದಿಗಾರ ಈಶ್ವರ ಶೆಟ್ಟರ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ, ಪತ್ರಿಕೋದ್ಯಮ ಜನರ ಧ್ವನಿಯಾಗಿದೆ. ಸಾರ್ವಜನಿಕರ ಸಮಸ್ಯೆಗೆ ಜೀವಂತಿಕೆ ಕೊಟ್ಟು ಸಮಸ್ಯೆ ಪರಿಹರಿಸುವ ಕಾಯಕ ವರದಿಗಾರನದ್ದಾಗಿದೆ. ಆದರೆ ವಿದ್ಯುನ್ಮಾನ ಮಾಧ್ಯಮದ ಪ್ರಭಾವದಿಂದ ವರದಿಗಾರರು ಒತ್ತಡ ಅನುಭವಿಸುತ್ತಿದ್ದಾರೆ. ತಂತ್ರಜ್ಞಾನ ಬೆಳವಣಿಗೆಯಿಂದ ಸುದ್ದಿಗಳ ಹರಿವು ಹೆಚ್ಚಾಗಿವೆ. ಪತ್ರಕರ್ತರು ಸುದ್ದಿಯ ವಾಸ್ತವ ಅಂಶವನ್ನು ಗುರುತಿಸಿ ಪ್ರಕಟಿಸುವ ಮೂಲಕ ಸಾಮಾಜಿಕ ಕಳಕಳಿ ಹೊಂದಬೇಕು. ಪತ್ರಕರ್ತರು ಸಮಾಜದ ಕನ್ನಡಿಯಿದ್ದಂತೆ ಎಂದರು.ಕಾನಿಪ ಸಂಘದ ಅಧ್ಯಕ್ಷ ಬಿ.ರತ್ನಾಕರಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡದ ಪ್ರಪ್ರಥಮ ಪತ್ರಿಕೆ ಮಂಗಳೂರು ಸಮಾಚಾರ 1843ರ ಜುಲೈ 1ರಂದು ಮಂಗಳೂರಿನಲ್ಲಿ ಬಾಸೆಲ್ ಮಿಷನ್ ನವರ ಮುದ್ರಣಾಲಯದಿಂದ ಪ್ರಕಟವಾಯಿತು. ರೆವರೆಂಡ್ ಹರ್ಮನ್ ಮೋಗ್ಲಿಂಗ್ ಅವರು ಸಂಪಾದಕರಾಗಿದ್ದರು, ಜರ್ಮನ್‍ನ ಮತ ಪ್ರಚಾರಕರಾದ ಮೊಗ್ಲಿಂಗ್ ಅವರನ್ನು ಕನ್ನಡ ಪತ್ರಿಕೋದ್ಯಮದ ಮೂಲಪುರುಷ. ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದು ಅವರನ್ನು ಕರೆಯಲಾಗುತ್ತದೆ ಎಂದು ಹೇಳಿ ಪತ್ರಿಕಾ ದಿನಾಚರಣೆಯ ಮಹತ್ವವನ್ನು ತಿಳಿಸಿಕೊಟ್ಟರು.
ಕಾನಿಪ ಸಂಘದ ವತಿಯಿಂದ ವೇದಿಕೆ ಮೇಲೆ ಉಪಸ್ಥಿತರಿದ್ದ ಅತಿಥಿ ಗಣ್ಯರನ್ನು ಮತ್ತು ಪ್ರತಿಭಾವಂತ ಪತ್ರಕರ್ತರ ಮಕ್ಕಳನ್ನು ಹಾಗೂ ಪತ್ರಿಕಾ ವಿತರಕರನ್ನು ಸನ್ಮಾನಿಸಿ, ಗೌರವಿಸಲಾಯಿತು.ಕಾನಿಪ ಸಂಘದ ಜಿಲ್ಲಾಧ್ಯಕ್ಷ ಆನಂದ ಧಲಬಂಜನ ಕಾರ್ಯಕ್ರಮಕ್ಕೆ ಶುಭಾಶಯ ಕೋರಿ ನಿರ್ಗಮಿಸಿದರು. ಎಮ್.ಎಚ್.ನದಾಪ ಸ್ವಾಗತಿಸಿದರು. ವೆಂಕಟೇಶ ಗುಡೆಪ್ಪನವರ ಅತಿಥಿಗಳನ್ನು ಪರಿಚಯಿಸಿದರು. ಎ.ಜಿ.ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದು ಹೂಗಾರ ನಿರೂಪಿಸಿದರು. ಬಿ.ಎಚ್. ಬೀಳಗಿ ವಂದಿಸಿದರು. ತಾಲೂಕು ಕಾನಿಪ ಸಂಘದ ಪದಾಧಿಕಾರಿಗಳು ಮತ್ತು ವಿವಿಧ ಕ್ಷೇತ್ರದ ಗಣ್ಯರು, ವರದಿಗಾರರು, ಏಜೆಂಟರು, ವಿತರಕರು ಉಪಸ್ಥಿತರಿದ್ದರು.