ಸಾರಾಂಶ
- ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದಿಂದ ಸಂತಾಪ ಕಾರ್ಯಕ್ರಮ । ವಕ್ಫ್ ಮಂಡಳಿ ಕಾಯ್ದೆ ಜನಜಾಗೃತಿ ಸಂವಾದ ಅಭಿಯಾನ- - -
ಕನ್ನಡಪ್ರಭ ವಾರ್ತೆ ದಾವಣಗೆರೆ ಪಹಲ್ಗಾಂನಲ್ಲಿ ಅಮಾಯಕ ಪ್ರವಾಸಿಗರನ್ನು ಗುಂಡಿಟ್ಟುಕೊಂಡ ಉಗ್ರರು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮಟ್ಟಹಾಕುವ ಜೊತೆಗೆ ಭಯೋತ್ಪಾದಕರಿಗೆ ಅತ್ಯಂತ ಕಠಿಣ ಶಿಕ್ಷೆ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಒತ್ತಾಯಿಸಿದರು.ನಗರದ ವಿರಕ್ತ ಮಠದ ಸಭಾಂಗಣದಲ್ಲಿ ಮಂಗಳವಾರ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಹಮ್ಮಿಕೊಂಡಿದ್ದ ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ಗುಂಡಿಗೆ ಬಲಿಯಾದವರಿಗೆ ಸಂತಾಪ ಕಾರ್ಯಕ್ರಮ ಹಾಗೂ ಜಿಲ್ಲಾಮಟ್ಟದ ಕೇಂದ್ರ ಸರ್ಕಾರದ ವಕ್ಫ್ ಮಂಡಳಿ ಕಾಯ್ದೆ ಕುರಿತ ಜನಜಾಗೃತಿ ಸಂವಾದ ಅಭಿಯಾನದಲ್ಲಿ ಅವರು ಮಾತನಾಡಿದರು. ಕೌಶ್ಮೀರದಲ್ಲಿ ಉಗ್ರರು ದಿನದಿನಕ್ಕೂ ಕ್ರೌರ್ಯ ಮೆರೆಯುತ್ತಿದ್ದಾರೆ. ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದರು.
ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಹಿನ್ನೆಲೆಯಲ್ಲಿ ಉಗ್ರರು, ಉಗ್ರಗಾಮಿ ಸಂಘಟನೆಗಳನ್ನು ಬೇರು ಮಟ್ಟದಿಂದ ಕಿತ್ತು ಹಾಕುವ ಕೆಲಸಕ್ಕೆ ಪ್ರಧಾನಿ ನರೇಂದ್ರಮೋದಿ ಮುಂದಾಗಬೇಕು. ಮನುಷ್ಯನದಲ್ಲಿ ಮಾನವೀಯ ಮೌಲ್ಯಗಳಿದ್ದಾಗ ಮಾತ್ರ ಆತ ಯಾವುದೇ ಹಿಂಸಾತ್ಮಕ ಕ್ರೌರ್ಯಕ್ಕೆ ಮುಂದಾಗುವುದಿಲ್ಲ. ಆದರೆ, ಉಗ್ರರಿಗೆ ಮನುಷ್ಯತ್ವವೇ ಇಲ್ಲ. ಅಂತಹವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಡಾ.ನಸೀರ್ ಅಹಮ್ಮದ್ ಮಾತನಾಡಿ, ಭಯೋತ್ಪಾದಕರನ್ನು ಅಂತಹವರ ಮೂಲದಿಂದಲೇ ನಿರ್ಮೂಲನೆ ಮಾಡಬೇಕಾದುದು ಪ್ರತಿಯೊಬ್ಬ ಭಾರತೀಯನ ಹಕ್ಕು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ 11 ವರ್ಷದಿಂದ ದೇಶದ ಅಭಿವೃದ್ಧಿ, ಬೆಳವಣಿಗೆ, ವಿಶೇಷವಾಗಿ ಮುಸ್ಲಿಂ ಸಮುದಾಯದ ಮಹಿಳಾ ಕಲ್ಯಾಣಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. ತ್ರಿವಳಿ ತಲಾಖ್ ನಿಷೇಧಿಸುವಂತಹ ದಿಟ್ಟ ಕ್ರಮ ಕೈಗೊಂಡಿದೆ. ಇದರಿಂದ ಮುಗ್ದ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಸಿಕ್ಕಿದೆ ಎಂದರು.
ವಕ್ಫ್ ತಿದ್ದುಪಡಿ ಮಸೂದೆ ಕಾರ್ಯಶೈಲಿಯು ಪಾರದರ್ಶಕತೆ ತರುತ್ತಿದೆ. ವಕ್ಫ್ ಭೂಮಿಯಲ್ಲಿ ಏಕಸ್ವಾಮ್ಯ ಹೊಂದಿರುವ ಕೆಲ ನಾಯಕರು ಇದನ್ನು ವಿರೋಧಿಸುತ್ತಿದ್ದಾರೆ. ವಕ್ಫ್ ಆಸ್ತಿಗಳ ಅರ್ಥ ಮುಸ್ಲಿಂ ಸಮುದಾಯದ ಬಡವಲಯಕ್ಕೆ ಸಹಾಯ ಮಾಡುವುದು. ಇದನ್ನು ಈವರೆಗೆ ಮಾಡಿಲ್ಲ. ಹೊಸ ಕಾಯ್ದೆ ಮೂಡವರ ಬಡವರಿಗೆ ಅನುಕೂಲವಾಗುವ ವಿಶ್ವಾಸವಿದೆ. ಇಂತಹ ಕಾಯ್ದೆ ಬಗ್ಗೆ ಅಪಪ್ರಚಾರ ಸಲ್ಲದು. ಕಾಯ್ದೆಯಿಂದ ಯಾರಿಗೂ ಅನ್ಯಾಯವಾಗದು. ವಕ್ಫ್ ಆಸ್ತಿಯ ಶೇ.90ರಷ್ಟು ಭಾಗವನ್ನು ನಾಯಕರು ಒತ್ತುವರಿ ಮಾಡಿಕೊಂಡಿದ್ದು, ಅಂತಹವರಿಂದ ವಕ್ಫ್ ಆಸ್ತಿ ಉಳಿಯಲಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಮಾತನಾಡಿ, ನರೇಂದ್ರ ಮೋದಿ ಸರ್ಕಾರ ಯಾವುದೇ ಸಮುದಾಯದ ವಿರೋಧಿಯಲ್ಲ. ಆದರೆ, ಮುಸ್ಲಿಂ ವಿರೋಧಿಯೆಂದು ಅಪಪ್ರಚಾರ ಮಾಡಲಾಗಿದೆ. ಮೋದಿಯಾಗಲೀ, ಕೇಂದ್ರ ಸರ್ಕಾರವಾಗಲೀ ಮುಸ್ಲಿಮರ ವಿರೋಧಿಯಲ್ಲ. ಭಯೋತ್ಪಾದನೆಯನ್ನು ಕೇಂದ್ರವು ಶೀಘ್ರವೇ ಕೊನೆಗಾಣಿಸುತ್ತದೆಂಬ ವಿಶ್ವಾಸವಿದೆ. ವಕ್ಫ್ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಪಕ್ಷವು ಮುಸ್ಲಿಮರ ದಾರಿ ತಪ್ಪಿಸುತ್ತಿದ್ದು, ಅದೇ ಕಾಂಗ್ರೆಸ್ಸಿನ ನಾಯಕರು ವಕ್ಫ್ ಆಸ್ತಿಯನ್ನು ಮೇಲಿನಿಂದ ಕೆಳ ಹಂತದವರೆಗೂ ಅನುಭವಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಮಹಿಳಾ ಕಲ್ಯಾಣವನ್ನು ಮುಸ್ಲಿಂ ಸಮುದಾಯದ ಬಡವರಿಗೆ ಅಂತಹವರು ಮಾಡಿಲ್ಲ ಎಂದರು.
ಬಿಜೆಪಿ ಮುಸ್ಲಿಮರ ವಿರೋಧಿಯಲ್ಲ. ವಿರೋಧಿಸುವುದಕ್ಕೆ ಕಾರಣವೂ ಇಲ್ಲ. ಭಯೋತ್ಪಾದನಯನ್ನು ಯಾವತ್ತೂ ಒಪ್ಪುವುದಿಲ್ಲ. ಇದು ಬಿಜೆಪಿಯ ಧ್ಯೇಯ. ಕೇಂದ್ರವು ಅಲ್ಪಸಂಖ್ಯಾತರ ಪರನಿಲ್ಲಲಿದೆ. ಆದರೆ, ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತಕರ ಅಮಾಯಕತೆಯನ್ನು ತಮ್ಮ ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಓಟು ಬ್ಯಾಂಕ್ ಮಾಡಿಕೊಂಡು, ತನ್ನ ಬುದ್ಧಿವಂತಿಕೆಗೆ ಮುಸ್ಲಿಮರ ಅಮಾಯಕತೆಯನ್ನು ಬಲಿ ಕೊಡದೇ, ಅಂತಹವರ ಅಭಿವೃದ್ಧಿ, ರಾಷ್ಟ್ರದ ಉನ್ನತಿ ಬಗ್ಗೆ ಆಲೋಚಿಸಲಿ ಎಂದು ಅವರು ಹೇಳಿದರು.ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ನಾಯ್ಕ, ಗೌತಮ್ ಜೈನ್, ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಟಿಪ್ಪು ಸುಲ್ತಾನ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಸಮೀರ್ ಆಲಂ, ಇಕ್ಬಾಲ್ ಅಹಮ್ಮದ್, ಶಾಮೀರ್ ಆಲಂ ಖಾನ್ ಇತರರು ಇದ್ದರು.
- - --29ಕೆಡಿವಿಜಿ7:
ದಾವಣಗೆರೆ ಶಿವಯೋಗಿ ಮಂದಿರದಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಹಮ್ಮಿಕೊಂಡಿದ್ದ ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ಗುಂಡಿಗೆ ಬಲಿಯಾದವರಿಗೆ ಸಂತಾಪ ಕಾರ್ಯಕ್ರಮ ಹಾಗೂ ಜಿಲ್ಲಾಮಟ್ಟದ ಕೇಂದ್ರ ಸರ್ಕಾರದ ವಕ್ಫ್ ಮಂಡಳಿ ಕಾಯ್ದೆ ಕುರಿತ ಜನಜಾಗೃತಿ ಸಂವಾದ ಅಭಿಯಾನ ನಡೆಯಿತು.