ಎಸ್ಸಿ ಜನರ ಅಭಿವೃದ್ಧಿಗಾಗಿ ಮೀಸಲಾತಿ ಮುಂದುವರೆಯಲಿ

| Published : Sep 26 2024, 11:43 AM IST

ಸಾರಾಂಶ

ಇಂದು ದೇಶದಲ್ಲಿ ಇರುವ ಹಿಂದುಳಿದ ಎಸ್ಸಿ ಜನರ ಅಭಿವೃದ್ಧಿಗಾಗಿ ಮೀಸಲಾತಿ ಮುಂದುವರೆಸುವುದು ಅವಶ್ಯವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಂದು ದೇಶದಲ್ಲಿ ಇರುವ ಹಿಂದುಳಿದ ಎಸ್ಸಿ ಜನರ ಅಭಿವೃದ್ಧಿಗಾಗಿ ಮೀಸಲಾತಿ ಮುಂದುವರೆಸುವುದು ಅವಶ್ಯವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು. ಅವರು ಇಳಕಲ್ಲ ನಗರದ ಅಂಬೇಡ್ಕರ್‌ ಭವನದಲ್ಲಿ ರಾಜ್ಯ ಸತ್ಯಶೋಧಕ ಸಂಘದ ಇಳಕಲ್ಲ ತಾಲೂಕು ಘಟಕದವತಿಯಿಂದ ನಡೆದ ಮೀಸಲಾತಿ ಮುಂದುವರಿಕೆ ಮತ್ತು ಅದರ ಪರಿಣಾಮಗಳು ಎಂಬ ವಿಷಯದ ಮೇಲೆ ನಡೆಸಿದ ವಿಚಾರ ಸಂಕಿರಣ ಉದ್ಘಾಟನೆ ಮಾಡಿ ಮಾತನಾಡಿ, ಎಸ್.ಸಿ ಜನಾಂಗದ ಜನತೆ ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರೆಲ್ಲ ಅತೀವ ತೊಂದರೆಯಿಂದ ಕಡು ಬಡತನದಲ್ಲಿ ಬದಕುತ್ತಿದ್ದಾರೆ. ಅಂತಹ ಜನರ ಅಭಿವೃದ್ಧಿಗಾಗಿ ಮೀಸಲಾತಿ ಮುಂದುವರೆಸುವುದು ಅತೀ ಅವಶ್ಯ ಎಂದರು.

ವಿಚಾರ ಸಂಕಿರಣ ಪ್ರಮುಖ ಉಪನ್ಯಾಸ ನೀಡಿದ ಬಾಗಲಕೋಟೆಯ ಪರುಶರಾಮ ಮಹಾಜನ, ತಲೆ ತಲಾಂತರದಿಂದ ಎಸ್ಸಿ ಜನರನ್ನು ತುಳಿಯುತ್ತಾ ಹೋಗುವ ಪ್ರಕರಣಗಳು ನಡೆಯುತ್ತಲೆ ಇವೆ. ಅದಕ್ಕಾಗಿ ಆ ಜನಾಂಗಕ್ಕೆ ಮೀಸಲಾತಿ ಅಗತ್ಯವಾಗಿದೆ ಎಂದು ಹೇಳಿದರು.

ಇದೇ ಸಮಯದಲ್ಲಿ ವಜ್ಜಲ ಗ್ರಾಮದ ಲೇಖಕ ಸೀತಿಮಾ ವಜ್ಜಲ ಬರೆದ ಜಗವೆತ್ತ ಸಾಗುತ್ತಿದೆ ಎಂಬ ಕೃತಿ ಗಣ್ಯರು ಬಿಡುಗಡೆ ಮಾಡಿದರು. ಅಂಬೇಡ್ಕರ್‌ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಶರಣಪ್ಪ ಆಮದಿಹಾಳ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಮಾರಂಭದ ಸಾನ್ನಿಧ್ಯವನ್ನು ನಂದವಾಡಗಿಯ ಪರಮ ಪೂಜ್ಯ ಚನ್ನಬಸವ ಶ್ರೀಗಳು ವಹಿಸಿದ್ದರು. ವೇದಿಕೆಯಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಉಸ್ಮಾನಗಣಿ ಹುಮನಾಬಾದ, ವಿಜಯ ಗದ್ದನಕೇರಿ, ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ, ಅಮೃತ ಬಿಜ್ಜಳ, ಮೌಲಪ್ಪ ಬಂಡಿವಡ್ಡರ ಇತರರು ಇದ್ದರು.