ಯೇಸುಸ್ವಾಮಿಯ ಪುನರುತ್ಥಾನ ಹೊಸ ಭರವಸೆಯನ್ನು ಮೂಡಿಸಲಿ: ಬಿಷಪ್ ಜೆರಾಲ್ಡ್ ಲೋಬೋ

| Published : Mar 31 2024, 02:01 AM IST

ಯೇಸುಸ್ವಾಮಿಯ ಪುನರುತ್ಥಾನ ಹೊಸ ಭರವಸೆಯನ್ನು ಮೂಡಿಸಲಿ: ಬಿಷಪ್ ಜೆರಾಲ್ಡ್ ಲೋಬೋ
Share this Article
  • FB
  • TW
  • Linkdin
  • Email

ಸಾರಾಂಶ

ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡು ನರಳುವವರಿಗೆ ಯೇಸುಸ್ವಾಮಿಯ ಪುನರುತ್ಥಾನದ ಹಬ್ಬವು ಒಂದು ಹೊಸ ಆಶಾಕಿರಣ. ಜೀವನವು ಎಷ್ಟೇ ಸಂಕೀರ್ಣ ಹಾಗೂ ನಿರಾಶಾದಾಯಕವಾಗಿದ್ದರೂ, ಕಷ್ಟಗಳು ಕಳೆದು ಸಂತೋಷದ ಕ್ಷಣಗಳು ಬಂದೇ ಬರುತ್ತವೆ ಎಂಬುದನ್ನು ತಿಳಿಹೇಳುವುದು ನಮ್ಮ ಭರವಸೆ.

ಕನ್ನಡಪ್ರಭ ವಾರ್ತೆ ಉಡುಪಿ

ಆಚರಣೆಯಲ್ಲಿ ಯೇಸುಸ್ವಾಮಿಯ ಜನನದ ಮಹೋತ್ಸವ ಕ್ರಿಸ್ಮಸ್ ಅತ್ಯಂತ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ನಡೆಸಿದರೂ, ಕ್ರೈಸ್ತ ವಿಶ್ವಾಸದ ಬಲಿಷ್ಠ ಬುನಾದಿಯ ಆಚರಣೆಯ ಮೂಲ ಕ್ರಿಸ್ತರ ಪುನರುತ್ಥಾನದ ಈಸ್ಟರ್ ಮಹೋತ್ಸವ.

ದೇವಪುತ್ರರಾದ ಯೇಸುಕ್ರಿಸ್ತರು ಈ ಜಗಕ್ಕೆ ಆಗಮಿಸಿ ಮನುಷ್ಯ ಜೀವನದಲ್ಲಿ ಮಿಳಿತಗೊಂಡು, ಪಾಪವೊಂದನ್ನು ಬಿಟ್ಟು ಎಲ್ಲದರಲ್ಲೂ ಮಾನವರಂತೆ ಜೀವಿಸಿ, ಸತ್ಯ ಸ್ಥಾಪನೆಗಾಗಿ ಯಾತನೆಗೆ ಒಳಗಾಗಿ ಶಿಲುಬೆಯಲ್ಲಿ ಮೃತಪಟ್ಟರು. ಆದರೆ, ತಾವು ಮುಂಚಿತವಾಗಿ ಹೇಳಿದಂತೆ ಮೂರನೇಯ ದಿನ ಮೃತರ ಮಧ್ಯದಿಂದ ಜೀವಂತವಾಗಿ ಎದ್ದರು. ಇದೇ ಸತ್ಯವನ್ನು ಸಂಭ್ರಮದಿಂದ ಆಚರಿಸುವ ಹಬ್ಬ ಈಸ್ಟರ್ ಮಹೋತ್ಸವ.

ಈಸ್ಟರ್ ಮಹೋತ್ಸವಕ್ಕೆ ಮುಂಚಿತವಾಗಿ ನಲ್ವತ್ತು ದಿನಗಳು ಪ್ರಾರ್ಥನೆ, ಉಪವಾಸ ಹಾಗೂ ದಾನ-ಧರ್ಮಗಳಿಂದ ಕಳೆದು ಎಲ್ಲ ಕ್ರೈಸ್ತ ವಿಶ್ವಾಸಿಗಳು ಈ ಮಹೋತ್ಸವಕ್ಕೆ ಸಿದ್ಧತೆಯನ್ನು ನಡೆಸುತ್ತಾರೆ. ಈ ಕಾಲದಲ್ಲಿ ವಿಶೇಷವಾಗಿ ತಮ್ಮ ಪಾಪಮಯ ಜೀವನಕ್ಕಾಗಿ ಪಶ್ಚಾತ್ತಾಪಪಟ್ಟು, ಪಾಪನಿವೇದನೆಯನ್ನು ಮಾಡಿ, ಪಾಪಮಯ ಜೀವನವನ್ನು ತೊರೆಯುವ ಸಂಕಲ್ಪವನ್ನು ಮಾಡುತ್ತಾರೆ. ಈ ಕಾರಣದಿಂದ, ಈಸ್ಟರ್ ಮಹೋತ್ಸವ ನವಜೀವನದ ಉದಯ - ಕತ್ತಲೆಯಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ, ಮರಣದಿಂದ ನವಜೀವನದೆಡೆಗೆ ನಡೆವ ಪಯಣ.

ಮನುಷ್ಯ ಜೀವನದಲ್ಲಿ ಕಟ್ಟಕಡೆಯವರೆಗೆ ಬದುಕಿ ಉಳಿಯುವುದು ನಿರೀಕ್ಷೆ ಅಥವ ಭರವಸೆ. ಭರವಸೆಯನ್ನು ಕಳೆದುಕೊಂಡವನು ಜೀವಂತವಿದ್ದರೂ ಸತ್ತಂತೆ. ಇಂದಿನ ಪ್ರಪಂಚದಲ್ಲಿ ಅನೇಕರು ವಿವಿಧ ಕಾರಣಗಳಿಂದ ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡು ನಿರಾಶರಾಗುತ್ತಾರೆ - ಬಡತನ, ನಿರುದ್ಯೋಗ, ಅಶಾಂತಿ, ಜಗಳ, ಮುರಿದುಹೋದ ಸಂಬಂಧಗಳು, ಇನ್ನಿತರ ಕಾರಣಗಳಿಂದ ಭರವಸೆಯನ್ನು ಕಳೆದುಕೊಂಡು ಆತ್ಮಹತ್ಯೆಗೆ ಬಲಿಯಾಗುತ್ತಾರೆ. ಅನೇಕ ಬಾರಿ ಅಂತಹವರಿಗೆ ಭರವಸೆಯ ಒಂದು ಮಾತೂ ಸಿಗುವುದು ದುರ್ಲಭ.

ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡು ನರಳುವವರಿಗೆ ಯೇಸುಸ್ವಾಮಿಯ ಪುನರುತ್ಥಾನದ ಹಬ್ಬವು ಒಂದು ಹೊಸ ಆಶಾಕಿರಣ. ಜೀವನವು ಎಷ್ಟೇ ಸಂಕೀರ್ಣ ಹಾಗೂ ನಿರಾಶಾದಾಯಕವಾಗಿದ್ದರೂ, ಕಷ್ಟಗಳು ಕಳೆದು ಸಂತೋಷದ ಕ್ಷಣಗಳು ಬಂದೇ ಬರುತ್ತವೆ ಎಂಬುದನ್ನು ತಿಳಿಹೇಳುವುದು ನಮ್ಮ ಭರವಸೆ. ಯೇಸುಸ್ವಾಮಿಯೇ ಹೇಳಿದಂತೆ, ‘ಗೋಧಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದ ಹೊರತು ಅದು ಫಲ ನೀಡುವುದಿಲ್ಲ’. ಅಪ್ಪಟ ಚಿನ್ನವಾಗಲು ಅದು ಕುಲುಮೆಯಲ್ಲಿ ಬೆಂದು ಶುದ್ಧವಾಗಲೇ ಬೇಕು. ಜೀವನದ ಕಷ್ಟ-ನಷ್ಟ, ಸಾವು-ನೋವುಗಳು ನಿರಂತರವಲ್ಲ. ಸಾವಿನ ಆಚೆಗೆ ನವಜೀವನ ಕಾದಿದೆ ಎಂಬ ಭರವಸೆ ಜೀವನವನ್ನು ಸ್ಥಿತಪ್ರಜ್ಞತೆಯಿಂದ ಜೀವಿಸಲು ಪ್ರೇರಣೆ ನೀಡಬಲ್ಲುದು.

ಪುನರುತ್ಥಾನಿ ಯೇಸು ಸ್ವಾಮಿ ಇಡೀ ಮನುಜಕುಲಕ್ಕೆ ಹೊಸಜೀವನದ ಭರವಸೆಯನ್ನು ನೀಡಿದ್ದಾರೆ. ಅದನ್ನು ಸಂತೋಷದಿಂದ ಸ್ವೀಕರಿಸಿ ಜೀವನ. ನಮ್ಮ ಜೀವನದ ಕಷ್ಟ-ಕಾರ್ಪಣ್ಯಗಳೆಲ್ಲ ಯೇಸುಸ್ವಾಮಿಯ ಪುನರುತ್ಥಾನದ ಸೂರ್ಯ ರಶ್ಮಿಯ ಪ್ರಭಾವದಿಂದ ಕರಗಿಹೋಗಲಿ. ನಮ್ಮೆಲ್ಲರ ಜೀವನದಲ್ಲಿ ಹೊಸ ಜೀವನದ ಹುಮ್ಮಸ್ಸು ಹಾಗೂ ಪ್ರೇರಣೆ ಕಂಡು ಬರಲಿ.

ನನ್ನೆಲ್ಲಾ ಸೋದರ ಸೋದರಿಯರಿಗೆ ಈಸ್ಟರ್ ಹಬ್ಬದ ಶುಭಾಷಯಗಳನ್ನು ಕೋರಿ, ಜೀವನದಲ್ಲಿ ಸಕಲ ಒಳಿತನ್ನು ಬಯಸುತ್ತೇನೆ. ಮೃತ್ಯುಂಜಯ ಯೇಸುಸ್ವಾಮಿ ನಮ್ಮೆಲ್ಲರನ್ನೂ ಆಶೀರ್ವದಿಸಿ ಕಾಪಾಡಲಿ.। ಜೆರಾಲ್ಡ್ ಲೋಬೊ, ಉಡುಪಿಯ ಧರ್ಮಾಧ್ಯಕ್ಷರು