ಸಾರಾಂಶ
ವಾಸ್ತವ್ಯದ ಹಕ್ಕು ಎಲ್ಲರಿಗೂ ಅಗತ್ಯವಾಗಿ ದೊರಕಬೇಕು. ಹಲವು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸವಾಗಿದ್ದರೂ ಕೂಡ ಹಕ್ಕುಪತ್ರ ಇಲ್ಲದೆ ಜನರು ಪರದಾಡುತ್ತಿದ್ದರು. ಸರ್ಕಾರದ ಯಾವುದೇ ಸೌಲಭ್ಯ ಪಡೆಯದೇ ಇರುವ ಕುಟುಂಬಗಳು ಕಳೆದ ಹಲವು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವುದನ್ನು ಕಂಡಿದ್ದೇವೆ.
ಕಾರಟಗಿ:
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ವಿವಿಧ ಯೋಜನೆಗಳ ಮೂಲಕ ಜನರಿಗೆ ಸರ್ಕಾರದಿಂದ ನೀಡುವ ಅನುದಾನದೊಂದಿಗೆ ತಾವು ಕೂಡ ಶ್ರಮವಹಿಸಿ ಉತ್ತಮ ಮನೆ ನಿರ್ಮಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಫಲಾನುಭವಿಗಳಿಗೆ ಹೇಳಿದರು.ತಾಲೂಕಾಡಳಿತ ಹಾಗೂ ತಾಲೂಕು ಪಂಚಾಯಿತಿ ಮತ್ತು ಕಾರಟಗಿ ಪುರಸಭೆ ಸಹಯೋಗದಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ ೧೯೬೪ರ ಕಲಂ ೯೪ ಸಿಸಿ ಅಡಿಯಲ್ಲಿ ಪಟ್ಟಣ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ವಾಸವಾಗಿರುವ ಫಲಾನುಭವಿಗಳಿಗೆ ಹಮ್ಮಿಕೊಂಡ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ವಾಸ್ತವ್ಯದ ಹಕ್ಕು ಎಲ್ಲರಿಗೂ ಅಗತ್ಯವಾಗಿ ದೊರಕಬೇಕು. ಹಲವು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸವಾಗಿದ್ದರೂ ಕೂಡ ಹಕ್ಕುಪತ್ರ ಇಲ್ಲದೆ ಜನರು ಪರದಾಡುತ್ತಿದ್ದರು. ಸರ್ಕಾರದ ಯಾವುದೇ ಸೌಲಭ್ಯ ಪಡೆಯದೇ ಇರುವ ಕುಟುಂಬಗಳು ಕಳೆದ ಹಲವು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವುದನ್ನು ಕಂಡಿದ್ದೇವೆ. ಇಂದು ೨೫ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದ ಸಚಿವರು, ಪಟ್ಟಣ ಪ್ರದೇಶದ ವ್ಯಾಪ್ತಿಯಲ್ಲಿ ೯೪ ಸಿಸಿ ಅರ್ಜಿದಾರರು ಹಕ್ಕುಪತ್ರ ಸಿಗದೆ ವಂಚಿತರಾಗಿ ಉಳಿದುಕೊಳ್ಳಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಹಕ್ಕುಪತ್ರ ಒದಗಿಸಲಾಗಿದೆ. ಬಾಕಿ ಉಳಿದ ಅರ್ಹ ಫಲಾನುಭವಿಗಳಿಗೂ ಯಾವುದೇ ರೀತಿಯ ತಾರತಮ್ಯ ಮಾಡದೇ ತ್ವರಿತವಾಗಿ ೯೪ಸಿ ಯಡಿ ಹಕ್ಕುಪತ್ರ ಮಂಜೂರಾತಿಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಹಕ್ಕುಪತ್ರ ವಿತರಣೆ:
ತಾಲೂಕಿನ ಹುಳ್ಕಿಹಾಳ ಗ್ರಾಪಂ ವ್ಯಾಪ್ತಿಯ ದುಂಡಗಿ ಕ್ಯಾಂಪ್, ಉಸಿಕಿನ ಕ್ಯಾಂಪ್, ಯರ್ರಮ್ ಕ್ಯಾಂಪ್‌ನಲ್ಲಿ ೯೪ ಸಿಸಿ ಅಡಿಯಲ್ಲಿ ಸಹ ಸಚಿವ ತಂಗಡಗಿ ಹಕ್ಕುಪತ್ರ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ವಾಸವಾಗಿರುವ ಒಟ್ಟು ೧೪೪ ಫಲಾನುಭವಿಗಳಿಗೆ ಹಕ್ಕುಪತ್ರ ಮಂಜೂರಾಗಿದ್ದು ಅವುಗಳಲ್ಲಿ ೮೦ ಜನರಿಗೆ ವಿತರಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಅನುದಾನ ನೀಡುತ್ತಿದೆ. ಪಂಚಾಯಿತಿಯವರು ತಾರತಮ್ಯ ಮಾಡದೆ ಅರ್ಹರಿಗೆ ಮನೆ ಮಂಜೂರು ಮಾಡಬೇಕು ಎಂದು ಸ್ಥಳದಲ್ಲಿದ್ದ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು.ಭೂಮಿಪೂಜೆ:
ಕ್ಷೇತ್ರದ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು. ಕನಕಗಿರಿ ಮುಖ್ಯ ರಸ್ತೆಯಿಂದ ಮೈಲಾಪೂರ ಬೈಪಾಸ್ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ ₹ ೩೦೦ ಲಕ್ಷ ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಾಣಕ್ಕೆ ಹಾಗೂ ಕಾರಟಗಿ ಪಟ್ಟಣದ ರಾಜೀವ್ ಗಾಂಧಿ ನಗರದಲ್ಲಿ ಕೆಕೆಆರ್‌ಡಿಬಿ ವತಿಯಿಂದ ₹ ೪೦ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.ಈ ವೇಳೆ ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸುರ, ಉಪಾಧ್ಯಕ್ಷೆ ದ್ಯಾವಮ್ಮ ಗಂಗಪ್ಪ ಚಲವಾದಿ, ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಅರಳಿ, ಪುರಸಭೆ ಸದಸ್ಯರಾದ ದೊಡ್ಡಬಸವ ಬೂದಿ, ಹಿರೇಬಸಪ್ಪ ಸಜ್ಜನ, ಮಂಜುನಾಥ ಮೆಗೂರ, ಶರಣಪ್ಪ ಪರಕಿ, ಬಸವರಾಜ ಅರಳಿ, ಸಾಗರ ಕುಲಕರ್ಣಿ, ಅಯ್ಯಪ್ಪ ಉಪ್ಪಾರ ನಾಗರಾಜ ಈಡಿಗೇರ ಸೇರಿದಂತೆ ಉಭಯ ಗ್ರಾಮಗಳ ಗ್ರಾಮಸ್ಥರು, ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ, ಸದಸ್ಯರು ಇದ್ದರು.