ಕನ್ನಡಪ್ರಭ ವಾರ್ತೆ ಸಕಲೇಶಪುರ
ದೇವಲಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಬೆಟ್ಟದ ಭೈರವೇಶ್ವರ ದೇವಾಲಯದ ಪಾವಿತ್ರ್ಯ ಹಾಗೂ ಧಾರ್ಮಿಕ ವಾತಾವರಣಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ದೇವಾಲಯಕ್ಕೆ ಭೇಟಿ ನೀಡಿ ತಹಸೀಲ್ದಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯರು ಹಾಗೂ ಭಕ್ತರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಬೆಟ್ಟದ ಭೈರವೇಶ್ವರ ದೇವಾಲಯವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಎಂಟು ಗ್ರಾಮಗಳ ಜನರ ಆರಾಧ್ಯ ದೈವವಾಗಿದೆ. ಪ್ರಕೃತಿ ಸೌಂದರ್ಯದ ಮಧ್ಯೆ ಇರುವ ಈ ಕ್ಷೇತ್ರಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸೋದ್ಯಮವನ್ನು ಸ್ವಾಗತಿಸಿದರೂ, ದೇವಾಲಯದ ಪಾವಿತ್ರ್ಯ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.ಇತ್ತೀಚೆಗೆ ದೇವಾಲಯದ ಆವರಣದಲ್ಲಿ ಜೋರಾಗಿ ಸಂಗೀತ ಹಾಕಿ ನೃತ್ಯ ಮಾಡಿದ ಘಟನೆ ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ. ದೇವಾಲಯಗಳು ಮನರಂಜನೆಯ ತಾಣಗಳಲ್ಲ; ಭಕ್ತಿ, ಶ್ರದ್ಧೆ ಮತ್ತು ಸಂಸ್ಕೃತಿಯ ಕೇಂದ್ರಗಳಾಗಿವೆ. ಆದ್ದರಿಂದ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.ದೇವಾಲಯದ ಅಭಿವೃದ್ಧಿಗೆ ಈಗಾಗಲೇ 8 ಲಕ್ಷ ಅನುದಾನ ಮೀಸಲಿಡಲಾಗಿದ್ದು, ಎರಡು- ಮೂರು ದಿನಗಳೊಳಗೆ ಪ್ರವೇಶ ದ್ವಾರ (ಗೇಟ್), ವಾಚ್‌ಮನ್ ಕೊಠಡಿ, ಚೈನ್‌ಲಿಂಕ್ ಬೇಲಿ, ಶೌಚಾಲಯ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯೂ ಪೂರ್ಣಗೊಂಡಿದ್ದು, ಉಳಿದ ಅಗತ್ಯ ಸೌಲಭ್ಯಗಳನ್ನು ಶೀಘ್ರದಲ್ಲೇ ಕಲ್ಪಿಸಲಾಗುವುದು ಎಂದರು.ದೇವಾಲಯದ ಸುರಕ್ಷತೆಗಾಗಿ ತಡೆಗೋಡೆ (ರಿಟೈನಿಂಗ್ ವಾಲ್) ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಣ್ಣು ಕುಸಿತದ ಅಪಾಯವಿರುವ ಹಿನ್ನೆಲೆಯಲ್ಲಿ ಈ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ದೇವಾಲಯದ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ಚಪ್ಪಲಿಗಳನ್ನು ಹೊರಗಡೆ ಬಿಡುವುದು, ದೇವಾಲಯದ ಕಟ್ಟೆಯ ಮೇಲೆ ಏರದಿರುವುದು, ಅಸಭ್ಯ ವರ್ತನೆ ಮಾಡದಿರುವುದು ಸೇರಿದಂತೆ ಪಾಲಿಸಬೇಕಾದ ನಿಯಮಗಳನ್ನು ಸೂಚಿಸುವ ಫಲಕಗಳನ್ನು ಅಳವಡಿಸಲಾಗುವುದು. ಅಗತ್ಯವಿದ್ದರೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ನಿರಂತರ ನಿಗಾ ವಹಿಸಲಾಗುವುದು ಎಂದರು.ದೇವಾಲಯದ ಆಡಳಿತ ಮತ್ತು ಸಂರಕ್ಷಣೆಗೆ ತಾತ್ಕಾಲಿಕ ಸಮಿತಿ ರಚಿಸುವಂತೆ ಸ್ಥಳೀಯರು ಮನವಿ ಸಲ್ಲಿಸಿದ್ದು, ಈ ಕುರಿತು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರೊಂದಿಗೆ ಚರ್ಚಿಸಿ ಸರ್ಕಾರದ ಮಾರ್ಗಸೂಚಿಯಂತೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಪ್ರಿತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಾಧರನ್, ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಪಾಟೀಲ್, ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.* ಬಾಕ್ಸ್:
ಪ್ರವಾಸಿಗರಿಗೆ ಶಾಸಕ ಮಂಜು ಮನವಿಬೆಟ್ಟದ ಭೈರವೇಶ್ವರ ದೇವಾಲಯದ ಪ್ರಕೃತಿ ಸೌಂದರ್ಯವನ್ನು ಎಲ್ಲರೂ ಸವಿಯಲಿ. ಆದರೆ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ಕೃತ್ಯ, ಅಸಭ್ಯ ವರ್ತನೆ, ಜೋರಾಗಿ ಸಂಗೀತ ಹಾಕುವುದು, ನೃತ್ಯ ಮಾಡುವುದು ಅಥವಾ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಚಟುವಟಿಕೆಗಳಿಂದ ದೂರವಿರಬೇಕು. ಹಿಂದೂ ದೇವಾಲಯಗಳು ನಮ್ಮ ಸಂಸ್ಕೃತಿ, ನಂಬಿಕೆ ಮತ್ತು ಪರಂಪರೆಯ ಸಂಕೇತಗಳಾಗಿದ್ದು, ಅವುಗಳ ಗೌರವ ಮತ್ತು ಪಾವಿತ್ರ್ಯ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶಾಸಕ ಸಿಮೆಂಟ್ ಮಂಜು ಮನವಿ ಮಾಡಿದರು.