ಜಿಲ್ಲಾ ಪೊಲೀಸ್ ಇಲಾಖೆ ಸಂಪೂರ್ಣ ನಿರ್ಲಿಪ್ತವಾಗಿದೆ. ಸವಣೂರಿನಲ್ಲಿ ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಥಳಿಸಿದ ಘಟನೆ ಖಂಡನಾರ್ಹವಾದದ್ದು. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅಧಿಕಾರ ಇಲ್ಲ, ಸ್ಥಳೀಯ ಪೊಲೀಸರನ್ನು ಹೊರಗಿಟ್ಟು ಸಿಐಡಿ ಪೊಲೀಸರಿಂದ ನಿಷ್ಪಕ್ಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆಗ್ರಹಿಸಿದರು.
ಹಾವೇರಿ: ಜಿಲ್ಲಾ ಪೊಲೀಸ್ ಇಲಾಖೆ ಸಂಪೂರ್ಣ ನಿರ್ಲಿಪ್ತವಾಗಿದೆ. ಸವಣೂರಿನಲ್ಲಿ ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಥಳಿಸಿದ ಘಟನೆ ಖಂಡನಾರ್ಹವಾದದ್ದು. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅಧಿಕಾರ ಇಲ್ಲ, ಸ್ಥಳೀಯ ಪೊಲೀಸರನ್ನು ಹೊರಗಿಟ್ಟು ಸಿಐಡಿ ಪೊಲೀಸರಿಂದ ನಿಷ್ಪಕ್ಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆಗ್ರಹಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸವಣೂರು ಪ್ರಕರಣದಲ್ಲಿ ಬೇಜವಾಬ್ದಾರಿಯಿಂದ ಕೆಲಸ ಮಾಡಿದರೆ ಮುಂದೆ ದೊಡ್ಡ ತಪ್ಪು ನಡೆಯುತ್ತದೆ. ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿರುವುದರಿಂದಲೇ ಇಂಥ ಘಟನೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಇಸ್ಪಿಟ್, ಮಟ್ಕಾ ಹಾವಳಿ, ಗಾಂಜಾ ಮಾರಾಟ ವಿಪರೀತವಾಗಿದೆ. ಸಣ್ಣಪುಟ್ಟ ಪ್ರಕರಣಗಳಿಗೂ ಎಫ್‌ಐಆರ್ ದಾಖಲಿಸಲು ಪ್ರಭಾವ ಬೀರುವುದು ಅನಿವಾರ್ಯ ಎಂಬಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.ಬೆಳಗಾವಿ ಅಧಿವೇಶನದಲ್ಲಿ ನಡೆಯುತ್ತಿರುವ ಸಿಎಂ ಕುರ್ಚಿ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಕುರ್ಚಿ ಅಲುಗಾಡುತ್ತಿದೆ. ಕುರ್ಚಿಯ ಕ್ರಾಂತಿ ನಡೆಯುತ್ತಿದೆ. ನಾಲ್ಕೈದು ತಿಂಗಳಿಂದ ಸರ್ಕಾರ ಸಂಪೂರ್ಣ ಸತ್ತು ಹೋಗಿದೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಯಾವ ಅಧಿಕಾರಿಗಳು ಮಂತ್ರಿಗಳ ಮಾತು ಕೇಳುತ್ತಿಲ್ಲ. ಇದೊಂದು ಬ್ರೇಕ್ ಪಾಸ್ಟ್, ನಾಟಿಕೋಳಿ ಸರ್ಕಾರ ಎಂದು ವ್ಯಂಗ್ಯವಾಡಿದರು.ಕಾಂಗ್ರೆಸ್ ಸರ್ಕಾರದ ಮೇಲೆ ಗುತ್ತಿಗೆದಾರರಿಂದ ಶೇ. 63 ಕಮೀಷನ್ ಆರೋಪ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ಸರ್ಕಾರ ಮೇಲೆ ಶೇ.40 ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ಸಿಗರು ಸುಳ್ಳು ಆರೋಪ ಮಾಡಿದ್ದರು. ಚುನಾವಣಾ ವೇಳೆಯೂ ಅಪಪ್ರಚಾರ ಮಾಡಿದರು. ಇವತ್ತು ಅದೇ ಗುತ್ತಿಗೆದಾರರು ಸ್ವಯಂಪ್ರೇರಣೆಯಿಂದ ಈ ಸರ್ಕಾರದಲ್ಲಿ ಶೇ.60 ಕಮೀಷನ್ ದಂಧೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಈ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಯಥಾ ರಾಜಾ, ಥತಾ ಪ್ರಜಾ ಎಂಬಂತೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತಲ್ಲೀನರಾಗಿದ್ದಾರೆ ಎಂದು ಆರೋಪಿಸಿದರು.ಬಿಜೆಪಿಯ ರಸ್ತೆ ಗ್ಯಾರಂಟಿ ಕೊಡಿ ಎಂಬ ಅಭಿಯಾನಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ರೈತರಿಗೆ ಆತ್ಮಹತ್ಯೆ ಗ್ಯಾರಂಟಿ ಕೊಟ್ಟಿದೆ. ಈ ಸರ್ಕಾರ ಬಂದ ಮೇಲೆ ಹೆಚ್ಚು ರೈತರ ಆತ್ಮಹತ್ಯೆಯಾಗಿದೆ. ಅದರಲ್ಲೂ ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ ವೈಪಲ್ಯಗಳನ್ನ ಜನರಿಗೆ ನಾವೇ ತಿಳಿಸುತ್ತೇವೆ ಎಂದರು.ಮುಂಬರುವ ಜಿಪಂ, ತಾಪಂ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಮುಂಬರುವ ಜಿಪಂ, ತಾಪಂ, ಗ್ರಾಪಂ, ಸ್ಥಳೀಯ ಸಂಸ್ಥೆಗಳು, ಎಂಎಲ್‌ಎ ಸೇರಿದಂತೆ ಯಾವುದೇ ಚುನಾವಣೆ ಎದುರಿಸಲು ನಾವು ತಯಾರಿದ್ದೇವೆ ಎಂದರು. ದ್ವೇಷ ಭಾಷಣ ಬಿಲ್ ಪಾಸ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ಸಿಗರು ಏನೂ ಮಾತಾಡೋದೇ ಇಲ್ವಾ ಹಾಗಾದ್ರೆ..?, ಗೊತ್ತಿಲ್ಲದೆ ಬಾಂಬ್ ಹಾಕುವವರ ಬಗ್ಗೆ ಏನ್ ಹೇಳುತ್ತಾರೆ. ವಿರೋಧ ಪಕ್ಷ, ಹಿಂದೂಪರ ಸಂಘಟನೆಗಳನ್ನು ಹತ್ತಿಕ್ಕಲು ಈ ಕುತಂತ್ರ. ಇನ್ನೊಬ್ಬರ ಓಲೈಕೆಗಾಗಿ ಈ ಮಸೂದೆ ತಂದಿದ್ದಾರೆ ಎಂದರು.ಈ ವೇಳೆ ಮಾಜಿ ಶಾಸಕ ಅರುಣಕುಮಾರ ಪೂಜಾರ, ಬಸವರಾಜ ಅರಬಗೊಂಡ, ಗಿರೀಶ ತುಪ್ಪದ, ನಾಗೇಂದ್ರ ಕಟಕೋಳ, ಸುರೇಶ ಹೊಸಮನಿ, ವೆಂಕಟೇಶ ನಾರಾಯಣಿ, ರಾಜಶೇಖರ ಕಟ್ಟೇಗೌಡ್ರ, ಎಂ.ಎಸ್. ಪಾಟೀಲ, ಲಲಿತಾ ಗುಂಡೇನಹಳ್ಳಿ ಇದ್ದರು.ಆಸ್ಪತ್ರೆಗಳು ಕೆಳದರ್ಜೆಗೆ: ಹಿರೇಕೆರೂರು ಕ್ಷೇತ್ರದ ಮಾಸೂರು, ಕೋಡ, ರಟ್ಟೀಹಳ್ಳಿಯ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಬದಲು ಈ ಸರ್ಕಾರ ಕೆಳದರ್ಜೆಗೆ ಇಳಿಸಲು ಮುಂದಾಗಿದೆ. ನಾನು ಶಾಸಕನಾಗಿದ್ದಾಗ ಮಾಸೂರು ಆಸ್ಪತ್ರೆಯನ್ನು 32 ಬೆಡ್‌ಗೆ ಮೇಲ್ದರ್ಜೆಗೆ ಏರಿಸಿದ್ದೆ. ರಟ್ಟೀಹಳ್ಳಿ ಆಸ್ಪತ್ರೆಯನ್ನು 100 ಬೆಡ್‌ಗೆ ಮೇಲ್ದರ್ಜೆಗೆ ಏರಿಸಿದ್ದೆ. ಇಲ್ಲಿ ಹೆರಿಗೆಗಳು ಆಗುತ್ತಿಲ್ಲ ಎಂಬ ಕಾರಣವೊಡ್ಡಿ ಕೆಳದರ್ಜೆಗೆ ಇಳಿಸಲು ಸರ್ಕಾರ ನಿರ್ಧರಿಸಿದೆ. ಹೆರಿಗೆ ಆಗಬೇಕಾದರೆ ಸರಿಯಾದ ವೈದ್ಯರು, ಸೌಲಭ್ಯ ಬೇಕಾಗುತ್ತೆ. ಆದರೆ, ಸೌಲಭ್ಯಗಳನ್ನೇ ಕೊಟ್ಟಿಲ್ಲ, ಹೀಗೆ ರಾಜ್ಯದಲ್ಲಿ 242 ಆಸ್ಪತ್ರೆಗಳನ್ನು ಕೆಳದರ್ಜೆಗೆ ಇಳಿಸಲು ಸರ್ಕಾರ ಮುಂದಾಗಿದೆ. ಇದರಿಂದ ಸರ್ಕಾರಕ್ಕೆ 1500 ಕೋಟಿ ರು. ಉಳಿತಾಯ ಆಗುತ್ತೆ ಎಂಬ ಲೆಕ್ಕ ಹಾಕಿದ್ದಾರೆ. ಇದಕ್ಕಿಂತ ದುರಂತ ಇನ್ನೊಂದಿಲ್ಲ, ಕ್ಷೇತ್ರದ ಶಾಸಕರು ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ, ಇದು ಸರ್ಕಾರದ ದಿವಾಳಿಯಾಗಿರುವುದಕ್ಕೆ ಸಾಕ್ಷಿ ಎಂದು ಬಿ.ಸಿ. ಪಾಟೀಲ ಕಿಡಿಕಾರಿದರು.