ಹಾವೇರಿ: ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಿ ನಿಮ್ಮ ಬದುಕನ್ನು ಸದೃಢಗೊಳಿಸಬೇಕಿದೆ. ಬಡವರ ಭಾವನೆಗಳನ್ನು ಅರ್ಥ ಮಾಡಿಕೊಂಡಿರುವ ನಾವು ನಿಮ್ಮೊಂದಿಗೆ ಸದಾ ಜೊತೆಗಿರುತ್ತೇವೆ ಎಂದು ವಿಧಾನಸಭೆ ಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ಸ್ಥಳೀಯ ನಗರಸಭೆಯಲ್ಲಿ ಜರುಗಿದ ಗೃಹಲಕ್ಷ್ಮಿ ಯೋಜನೆಯ ಮೂರನೇ ವರ್ಷದ ಯಶಸ್ವಿ ಸಂಭ್ರಮಾಚರಣೆ ವೇಳೆ ಫಲಾನುಭವಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದಾಗ ವಿರೋಧ ಪಕ್ಷಗಳು ವಿರೋಧಿಸಿದವು. ಇದೊಂದು ಆರ್ಥಿಕ ದಿವಾಳಿ ಮಾಡುವ ಯೋಜನೆ ಎಂದು ಆರೋಪಿಸಿದವು. ಇದನ್ನು ಲೆಕ್ಕಿಸದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯೋಜನೆ ಜಾರಿಗೊಳಿಸಿದರು. ಇಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಯೋಜನೆ ಮುಂದುವರೆಸಿದರು. ನಮ್ಮ ಹಾವೇರಿ ತಾಲೂಕಿನ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ 33 ಕೋಟಿ ರು. ಪಾವತಿಸಲಾಗಿದೆ. ಇದರಿಂದ ಎಷ್ಟೋ ಕುಟುಂಬಗಳು ಸ್ವಾವಲಂಬಿ ಬದುಕು ಕಟ್ಟಿಕೊಂಡಿವೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ ಮಾತನಾಡಿ, ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ನಮ್ಮ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದೆ. ಸರ್ಕಾರ ಮಾತು ಕೊಟ್ಟಂತೆ ಈ ಯೋಜನೆಯನ್ನು ಮುಂದುವರೆಸುತ್ತದೆ. ತಾಂತ್ರಿಕ ಕಾರಣಗಳಿಂದ ಎರಡು ತಿಂಗಳ ಹಣ ಪಾವತಿಯಾಗಿಲ್ಲ. ಸಮಸ್ಯೆ ನಿವಾರಿಸಿ ಮತ್ತಷ್ಟು ಶಕ್ತಿಶಾಲಿ ಮಾಡಲಾಗುವುದು ಎಂದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ಪೋತಿ ಆದವರು, ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಫಲಾನುಭವಿಗಳನ್ನು ಗುರುತಿಸಲಾಗುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಸಿದವರು ಮತ್ತೆ ಸಲ್ಲಿಸಬೇಕಿಲ್ಲ. ವಿದ್ಯಾರ್ಥಿಗಳಿಗೂ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಿ ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದರು.ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ, ನಗರಸಭೆ ಆಶ್ರಯ ಸಮಿತಿ ಅಧ್ಯಕ್ಷ ಜಗದೀಶ ಬೆಟಗೇರಿ, ನಗರಸಭೆ ಪೌರಾಯುಕ್ತ ಎಚ್.ಕಾಂತರಾಜು, ಪಕ್ಷದ ಮುಖಂಡರಾದ ಲಲಿತಾ ಹುಗ್ಗಿ, ಶಿಲ್ಪಾ ಬಡೆಮ್ಮನವರ, ಶೋಭಾ ಭಜಂತ್ರಿ, ರಾಧಾ ಸವಣೂರ, ಮಹಾಲಿಂಗಯ್ಯ ಹಿರೇಮಠ, ಬಾಬು ಮೋಮಿನಗಾರ, ಉಮರ್ ಇನಾಮದಾರ, ಅತಾವುಲ್ಲಾ ಖಾಜಿ, ನಗರಸಭೆ ಮಾಜಿ ಸದಸ್ಯರು ಹಾಗೂ ಗೃಹಲಕ್ಷ್ಮಿ ಫಲಾನುಭವಿಗಳು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನಗರಸಭೆ ಆವರಣದಲ್ಲಿ ಸಸಿ ನೆಡಲಾಯಿತು. ಪ್ರಸನ್ನ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.
ಮುಂದಿನ ಎರಡು ವರ್ಷಗಳಲ್ಲಿ ಹಾವೇರಿ ನಗರವನ್ನು ಶುದ್ಧ ಮತ್ತು ಸ್ವಚ್ಛ ನಗರವನ್ನಾಗಿಸಬೇಕಿದೆ. ಇಜಾರಿ ಲಕಮಾಪುರ ಹಾಗೂ ಮುಲ್ಲಾನ ಕೆರೆ ಸುತ್ತ ನಿರ್ಮಿಸಿಕೊಂಡಿರುವ ಮನೆಗಳನ್ನು ತೆರವುಗೊಳಿಸಿ ಅಲ್ಲಿನ ನಿವಾಸಿಗಳಿಗೆ ಪ್ರತ್ಯೇಕ ಮನೆ ವಿತರಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತುಂಗಭದ್ರಾ ನದಿಗೆ ಚೆಕ್ ಡ್ಯಾಮ್ ನಿರ್ಮಿಸಲು 150 ಕೋಟಿ ರು.ಗಳ ಅನುದಾನ ಬಿಡುಗಡೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದು ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.