ಸಾರಾಂಶ
ಲಕ್ಷ್ಮೇಶ್ವರ: ವಿದ್ಯಾರ್ಥಿಗಳ ಸಾಧನೆಯಿಂದ ಶಿಕ್ಷಕರು ಗೌರವಿಸಲ್ಪಡಬೇಕು. ಅದುವೇ ನಿಜವಾದ ಸಾಧನೆ. ಅಂತಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲು ಶಿಕ್ಷಣ ಇಲಾಖೆಯೇ ಮನೆಯ ಬಾಗಿಲಿಗೆ ಬಂದಿದೆ ಎಂದು ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ ಹೇಳಿದರು.
ಸೋಮವಾರ 2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ಹಾಗೂ ಲಕ್ಷ್ಮೇಶ್ವರ ತಾಲೂಕಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳ ಮನೆಗೆ ಹೋಗಿ ಅವರನ್ನು ಸನ್ಮಾನಿಸಿ ಮಾತನಾಡಿದರು.ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 620 ಅಂಕ(99.20%) ಗಳಿಸಿ ಜಿಲ್ಲೆಗೆ ದ್ವಿತೀಯ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಲಕ್ಷ್ಮೇಶ್ವರ ಪಟ್ಟಣದ ಲಿಟಲ್ ಹಾರ್ಟ್ಸ್ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಪೂಜಾ ಕುರಹಟ್ಟಿ ಹಾಗೂ 619 (99.04%) ಅಂಕ ಗಳಿಸಿ ಜಿಲ್ಲೆಗೆ ತೃತೀಯ ಹಾಗೂ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ ಅಮೃತ ಗಂಗಾಧರ ಶಿರಹಟ್ಟಿ ಹಾಗೂ 617(98.72%) ಅಂಕ ಗಳಿಸಿ ತಾಲೂಕಿಗೆ ತೃತೀಯ ಸ್ಥಾನ ಪಡೆದ ಲಕ್ಷ್ಮೇಶ್ವರದ ಯುನಿಕ್ ಸ್ಕೂಲ್ ನ ವಿದ್ಯಾರ್ಥಿನಿ ರಕ್ಷಿತಾ ಮಂಜುನಾಥ ಸಂಗನಪೇಟ್ ಈ ಮೂರು ವಿದ್ಯಾರ್ಥಿಗಳ ಮನೆಗೆ ಹೋಗಿ ಇಲಾಖೆಯ ಪರ ಸನ್ಮಾನ ಮಾಡಲಾಯಿತು.
ಈ ವೇಳೆ ಎಂ.ಎ.ರಡ್ಡೇರ ಡಿಡಿಪಿಐ ಗದಗ ಫೋನ್ ಕರೆಯ ಮೂಲಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ಜತೆಗೆ ಸಾಧನೆ ಮಾಡಿದ ವಿದ್ಯಾರ್ಥಿಗಳ ಪಾಲಕರು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶಿರಹಟ್ಟಿ ಬ್ಲಾಕ್ ಗದಗ ಜಿಲ್ಲೆಗೆ ಎರಡನೇ ಸ್ಥಾನ ಪಡೆದ ಪ್ರಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ ಅವರನ್ನು ಸನ್ಮಾನಿಸಿದರು.
ಈ ವೇಳೆ ಶಿಕ್ಷಣಾಧಿಕಾರಿಗಳ ಸಂಘ, ಶಿಕ್ಷಕರ ಸಂಘ ಹಾಗೂ ನೌಕರರ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಶಾಲೆಗಳ ಶಿಕ್ಷಕ-ಶಿಕ್ಷಕಿಯರು, ಇಸಿಓ, ಬಿ.ಆರ್.ಪಿ, ಸಿ.ಆರ್.ಪಿಯವರು, ಪಾಲಕರು, ಶಿಕ್ಷಣಾಭಿಮಾನಿಗಳು ಇದ್ದರು.