ಶಾಲೆಗಳು ದೇಶ ಭವಿಷ್ಯ ನಿರ್ಮಿಸುವ ವ್ಯಕ್ತಿ ನಿರ್ಮಾಣ ಕೇಂದ್ರವಾಗಲಿ: ಶಾಸಕ ಜ್ಞಾನೇಂದ್ರ

| Published : Jan 10 2024, 01:46 AM IST

ಸಾರಾಂಶ

ಶಾಲೆಗಳು ಶಿಕ್ಷಣ ನೀಡಿ, ನೌಕರಿ ಸೃಷ್ಟಿಸುವ ಕಾರ್ಖಾನೆಗಳಾಗದೇ, ದೇಶದ ಭವಿಷ್ಯವನ್ನು ನಿರ್ಮಿಸುವ ವ್ಯಕ್ತಿ ನಿರ್ಮಾಣದ ಕೇಂದ್ರಗಳಾಗಬೇಕು, ನೈತಿಕತೆ, ಮಾನವೀಯ ಮೌಲ್ಯ ಮೂಡಿಸುವ ಹೊಣೆಗಾರಿಕೆ ಶಿಕ್ಷಕರು ಹೊಂದಿರಬೇಕು ಎಂದು ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ತೀರ್ಥಹಳ್ಳಿ: ಶಾಲೆಗಳು ಶಿಕ್ಷನ ನೀಡಿ, ನೌಕರಿ ಸೃಷ್ಟಿಸುವ ಕಾರ್ಖಾನೆಗಳಾಗದೇ, ದೇಶದ ಭವಿಷ್ಯವನ್ನು ನಿರ್ಮಿಸುವ ವ್ಯಕ್ತಿ ನಿರ್ಮಾಣದ ಕೇಂದ್ರಗಳಾಗಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಮಂಗಳವಾರ ಸಂಜೆ ತಾಲೂಕಿನ ನೊಣಬೂರು ಸರ್ಕಾರಿ ಪ್ರೌಢಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕದ ವಿಚಾರಗಳಲ್ಲದೇ, ನೈತಿಕತೆ, ಮಾನವೀಯ ಮೌಲ್ಯ ಮೂಡಿಸುವ ಹೊಣೆಗಾರಿಕೆ ಶಿಕ್ಷಕರು ಹೊಂದಿರಬೇಕು ಎಂದರು.

ಕೇವಲ ನೌಕರಿಗಾಗಿ ಶಿಕ್ಷಣ ಎಂಬ ಮನೋಭಾವ ಪೋಷಕರಲ್ಲಿ ಬದಲಾಗಬೇಕಿದೆ. ಇಂಥ ಶಿಕ್ಷಣದ ಫಲವಾಗಿ ಮನುಷ್ಯತ್ವವನ್ನೇ ಕಳೆದುಕೊಂಡು ಹೆತ್ತವರನ್ನು ಬೀದಿಗೆ ಬಿಡುವ ಅಥವಾ ವೃದ್ಧಾಶ್ರಮಕ್ಕೆ ತಳ್ಳುವ ಮನಃಸ್ಥಿತಿ ನಿರ್ಮಾಣ ಆಗುತ್ತಿರುವುದು ಕಾಣುತ್ತಿದ್ದೇವೆ. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ರೂಪಿಸಲು ಶಿಕ್ಷಣದಲ್ಲಿ ಆದರ್ಶಪ್ರಾಯವಾದ ವ್ಯಕ್ತಿಗಳ ಅನುಕರಣೆ ಮತ್ತು ಮಾನವೀಯ ಮೌಲ್ಯಗಳು ಅಗತ್ಯ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಹಮದ್ ರಫಿಕ್ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ನಾಗರಾಜ್, ಬಿಇಒ ವೈ.ಗಣೇಶ್, ತಾಪಂ ಮಾಜಿ ಸದಸ್ಯರಾದ ಚಂದವಳ್ಳಿ ಸೋಮಶೇಖರ್, ಲಕ್ಷ್ಮೀ ಉಮೇಶ್, ಪ್ರಶಾಂತ್ ಕುಕ್ಕೆ, ಮುಖ್ಯಶಿಕ್ಷಕಿ ಮಂಜುಳಾ, ಶಶಿರೇಖಾ ಇದ್ದರು.

- - - -09ಟಿಟಿಎಚ್03:

ತೀರ್ಥಹಳ್ಳಿ ತಾಲೂಕು ನೊಣಬೂರು ಸರ್ಕಾರಿ ಪ್ರೌಢಶಾಲೆ ವಾರ್ಷಿಕೋತ್ಸವವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.