ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ವಿಶೇಷಚೇತನರ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಹಲವು ಅಭಿವೃದ್ಧಿ ಯೋಜನೆಗಳಡಿ ವಿವಿಧ ಸೌಲಭ್ಯ ಕಲ್ಪಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.ತಾಲೂಕಿನ ಭೀಮರಾಯನಗುಡಿ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಮತಕ್ಷೇತ್ರದ ವ್ಯಾಪ್ತಿಯ ವಿಶೇಷಚೇತನರಿಗೆ 2023-24ನೇ ಸಾಲಿನ ತಾಪಂ ಅನಿರ್ಬಂಧಿತ ಅಭಿವೃದ್ಧಿ ಅನುದಾನದಡಿ ವಿಶೇಷಚೇತನರಿಗೆ ತ್ರಿಚಕ್ರ ಮೋಟಾರು ವಾಹನ ವಿತರಿಸಿ ಮಾತನಾಡಿದರು.
ವಿಶೇಷಚೇತನರು ಎಂದರೇ ಅಸಮರ್ಥರು ಎನ್ನುವ ತಪ್ಪು ಕಲ್ಪನೆ ಬೇಡ. ಅವರಲ್ಲಿಯೂ ವಿಶೇಷ ಸಾಮರ್ಥ್ಯವಿದೆ. ನಿರಂತರ ಶ್ರಮವಹಿಸುವ ಮೂಲಕ ಸಾಧನೆ ಹಾದಿ ಹಿಡಿಯಬೇಕು. ತ್ರಿಚಕ್ರ ಮೋಟಾರು ವಾಹನಗಳು ಅಂಗವಿಕಲರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಿವೆ ಎಂದರು.2023-24ನೇ ಸಾಲಿನ ಶೇ.5ರಷ್ಟು ಮಿಸಲಾತಿ ಅನುದಾನದಡಿ ಶಹಾಪುರ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಆಯ್ದ 6 ಜನ ವಿಶೇಷಚೇತನರಿಗೆ ತ್ರಿಚಕ್ರ ಮೋಟಾರು ವಾಹನ ವಿತರಿಸಿ, ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಲು ಸರಕಾರ ವಿವಿಧ ಅಭಿವೃದ್ಧಿ ಯೋಜನೆ ರೂಪಿಸಿ ಪ್ರತ್ಯೇಕ ಅನುದಾನ ಮೀಸಲಿರಿಸಿದೆ. ಅಂಗವಿಕಲರು ತಮ್ಮ ದೈಹಿಕ ನ್ಯೂನ್ಯತೆ ಬಗ್ಗೆ ಮಾನಸಿಕವಾಗಿ ಕುಗ್ಗದೇ ಆತ್ಮಸ್ಥೈರ್ಯ ರೂಡಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಅವರು, ಶಹಾಪುರ ತಾಪಂ ಆವರಣದಲ್ಲಿ 4 ಜನ ವಿಶೇಷಚೇತನರಿಗೆ ತ್ರಿಚಕ್ರ ಮೋಟಾರು ವಾಹನ ವಿತರಿಸಿದರು.ತಾಪಂ ಇಒ ಸೋಮಶೇಖರ ಬಿರಾದಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಣ್ಣ ದೇಸಾಯಿ, ಸಹಾಯಕ ನಿರ್ದೇಶಕ ಭೀಮಣ್ಣಗೌಡ ಬಿರಾದಾರ್, ಸಹಾಯಕ ಲೆಕ್ಕಾಧಿಕಾರಿ ತಿರುಮಲರಡ್ಡಿ, ವ್ಯವಸ್ಥಾಪಕ ರಾಯಪ್ಪಗೌಡ ಹುಡೇದ್ ಸೇರಿ ಇತರರಿದ್ದರು.