ಸಾರಾಂಶ
ಹುಬ್ಬಳ್ಳಿ:
ಕಾಂಗ್ರೆಸ್ ಸರ್ಕಾರಕ್ಕೆ ರೈತರ, ಮಠಗಳ, ಜನಸಾಮಾನ್ಯರ ಮೇಲೆ ಕಾಳಜಿ ಇದ್ದರೆ ಈ ಕೂಡಲೇ 1974ರ ಗೆಜೆಟ್ ರದ್ದುಗೊಳಿಸುವ ಮೂಲಕ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲಿ. ಇಲ್ಲದಿದ್ದರೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿ ಎಂದು ವಿಪ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಮಂಡಳಿಗೆ ಸಂವಿಧಾನವನ್ನೂ ಮೀರಿದ ಕೆಲವು ಅಧಿಕಾರವನ್ನು ಕಾಂಗ್ರೆಸ್ ನೀಡಿದೆ. ಇದರಿಂದಾಗಿಯೇ ವಕ್ಫ್ ಮಂಡಳಿಯು ಪರಮಾಧಿಕಾರದ ಧೋರಣೆ ತಾಳಿದ್ದು, ನ್ಯಾಯಾಲಯವೂ ಪ್ರಶ್ನೆ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ರೈತರಿಗೆ, ಮಠ-ಮಾನ್ಯಗಳಿಗೆ ಇದು ಮರಣ ಶಾಸನವಾಗಲಿದೆ ಎಂದರು.
ಭೂಮಿ ಕಬಳಿಸುವ ಹುನ್ನಾರ:ವಕ್ಫ್ ಹೆಸರಿನಲ್ಲಿ ರೈತರ ಪಾರಂಪರಿಕ ಭೂಮಿ ಕಬಳಿಸುವ ಕೆಲಸವಾಗುತ್ತಿದೆ. 11-12ನೇ ಶತಮಾನದಲ್ಲೇ ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಮಠ ಮಾನ್ಯಗಳೂ ವಕ್ಫ್‌ಗೆ ಸೇರಿದ್ದು ಎಂದು ಪಹಣಿಯಲ್ಲಿ ನಮೂದಿಸಲಾಗಿದೆ. ದೇವಸ್ಥಾನ, ಸ್ಮಶಾನ, ಗರಡಿ ಮನೆಗಳು ಹಾಗೂ ಸಹಕಾರಿ ಸಂಘದ ಜಮೀನನ್ನೂ ಕಬಳಿಸುವ ಹುನ್ನಾರ ನಡೆದಿರುವುದು ಖಂಡನಾರ್ಹ ಎಂದರು.
ವಕ್ಫ್‌ಗೆ ಜೀವ ತುಂಬಿದ್ದೇ ಕಾಂಗ್ರೆಸ್:1954ರಲ್ಲಿ ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿಗೆ ಜೀವ ತುಂಬಿದೆ. ನಂತರದ ದಿನಗಳಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆದೇಶದ ಮೇರೆಗೆ ಆಧಾರವಿಲ್ಲದೇ ಸಿಕ್ಕ ಸಿಕ್ಕ ಜಮೀನುಗಳ ಸರ್ವೇ ನಂಬರ್‌ಗಳನ್ನು ದಾಖಲಿಸಿ 1974ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ರಾಜ್ಯದಲ್ಲಿ ಉಪ ಚುನಾವಣೆಯ ಹಿನ್ನೆಲೆಯಲ್ಲಿ ರೈತರ ಜಮೀನಿನ ಪಹಣಿಯ ಕಾಲಂ 11ರಲ್ಲಿ ನಮೂದಾಗಿದ್ದ ವಕ್ಫ್ ಹೆಸರನ್ನು ಸಿಎಂ ತೆಗೆದಿದ್ದಾರೆ. ಆದರೆ, ಅದು ತಾತ್ಕಾಲಿಕವಾಗಿದ್ದು, ಜಮೀನು ಸಂಪೂರ್ಣ ರೈತರ ಹೆಸರಿಗೆ ಆಗಿದೆ ಎಂದಲ್ಲ. 1974ರ ಅಧಿಸೂಚನೆಯನ್ನು ರದ್ದುಪಡಿಸಿದಾಗ ಮಾತ್ರ ರೈತರಿಗೆ ನ್ಯಾಯ ದೊರೆಯಲು ಸಾಧ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನರ, ರೈತರ, ಹಾಗೂ ಮಠ-ಮಾನ್ಯ, ಮಂದಿರಗಳ ಬಗ್ಗೆ ಕಾಳಜಿ ಇದ್ದರೆ ಕೂಡಲೇ 1974ರ ಗೆಜೆಟ್ ನೋಟಿಫೇಕೇಷನ್ ರದ್ದುಗೊಳಿಸಬೇಕು. ತಮ್ಮಿಂದ ಆಗದಿದ್ದರೆ ಕೇಂದ್ರಕ್ಕೆ ಪತ್ರ ಬರೆದು ಶಿಫಾರಸು ಮಾಡಲಿ ಎಂದು ಒತ್ತಾಯಿಸಿದರು.
ಈ ವೇಳೆ ವಿಪ ಸದಸ್ಯ ಸಿ.ಟಿ. ರವಿ, ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಮಾಜಿ ಸಂಸದ ಮುನಿಸ್ವಾಮಿ, ಶಾಸಕರಾದ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಮಾಜಿ ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ, ಬಿ.ಸಿ.ಪಾಟೀಲ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಸೇರಿದಂತೆ ಹಲವರಿದ್ದರು.