ಸಿದ್ದು ವಿರುದ್ಧದ ಹೇಳಿಕೆ ಹಿಂಪಡೆಯಲು ವಾರದ ಗಡುವು

| Published : Jan 10 2024, 01:46 AM IST

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಗೌರವಯುತವಾಗಿರಬೇಕೆ ಹೊರತು ರಾಜ್ಯದ ಮುಖ್ಯಮಂತ್ರಿಯನ್ನು ಉಗ್ರರ ಸಂಘಟನೆಗೆ ಹೋಲಿಸುವುದು ತಪ್ಪು. ಜೋಶಿ ಅವರು ತಮ್ಮ ಹೇಳಿಕೆ ವಾಪಸ್‌ ಪಡೆಯುವ ವರೆಗೂ ಅವರ ವಿರುದ್ಧ ಅಭಿಯಾನ ನಡೆಸುತ್ತೇವೆ ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್‌ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನೆ ಎದುರು ಧರಣಿ ನಡೆಸುವುದಾಗಿ ಕಾಂಗ್ರೆಸ್ ಎಚ್ಚರಿಕೆ ಕನ್ನಡಪ್ರಭ ವಾರ್ತೆ ಧಾರವಾಡ

ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ಖಂಡಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್‌ ಮುಖಂಡರು ಪ್ರತಿಭಟಿಸಿ, ಏಳು ದಿನಗಳೊಳಗೆ ತಮ್ಮ ಹೇಳಿಕೆ ಹಿಂಪಡೆಯದೇ ಇದ್ದಲ್ಲಿ ಅವರ ಮನೆ ಎದುರು ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಕೇಂದ್ರ ಸಚಿವರ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್‌ ಮುಖಂಡರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಜೋಶಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದರು. ವೈಯಕ್ತಿಕವಾಗಿ ಪ್ರಹ್ಲಾದ ಜೋಶಿ ಅವರ ಬಗ್ಗೆ ಗೌರವ ಇದೆ. ಅವರೊಬ್ಬ ಕೇಂದ್ರದ ಮಹತ್ವದ ಖಾತೆ ಹೊಂದಿದವರು. ಅದರಲ್ಲೂ ಬುದ್ಧಿಜೀವಿಗಳ, ಪ್ರಗತಿಪರರ ಕ್ಷೇತ್ರವನ್ನು ಪ್ರತಿನಿಧಿಸಿರುವ ಅವರು ಮುಖ್ಯಮಂತ್ರಿಗಳು ತಾಲಿಬಾನ್‌ ಹಾಗೂ ಐಸಿಸ್‌ ರೀತಿ ಸರ್ಕಾರ ನಡೆಸುತ್ತಿದ್ದಾರೆಂಬ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಇದು ಕ್ಷೇತ್ರದ, ರಾಜ್ಯದ ಜನತೆಗೂ ಅಗೌರವ ತೋರಿದಂತಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಗೌರವಯುತವಾಗಿರಬೇಕೆ ಹೊರತು ರಾಜ್ಯದ ಮುಖ್ಯಮಂತ್ರಿಯನ್ನು ಉಗ್ರರ ಸಂಘಟನೆಗೆ ಹೋಲಿಸುವುದು ತಪ್ಪು. ಜೋಶಿ ಅವರು ತಮ್ಮ ಹೇಳಿಕೆ ವಾಪಸ್‌ ಪಡೆಯುವ ವರೆಗೂ ಅವರ ವಿರುದ್ಧ ಅಭಿಯಾನ ನಡೆಸುತ್ತೇವೆ ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್‌ ಎಚ್ಚರಿಕೆ ನೀಡಿದರು.

ಇದಕ್ಕೂ ಮುಂಚೆ ಮಾತನಾಡಿದ ಕಾಂಗ್ರೆಸ್‌ ಮುಖಂಡ ದೀಪಕ ಚಿಂಚೋರೆ, ರಾಜ್ಯದ ಬಡವರ ಪರ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಆಡಳಿತಕ್ಕೆ ಉಗ್ರ ಸಂಘಟನೆಯ ಬಣ್ಣ ಹಚ್ಚುತ್ತಿರುವ ಕೇಂದ್ರ ಸಚಿವರ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಗಳ ಮುಂದೆ ನಿಮ್ಮ ಆಟ ನಡೆಯೋದಿಲ್ಲ. ಜಾತಿ ರಾಜಕಾರಣ ಮಾಡುತ್ತಿರುವ ತಮ್ಮ ವಿರುದ್ಧ ಕ್ಷೇತ್ರದ ಜನರು ರೊಚ್ಚಿಗೇಳುವ ಕಾಲ ಸನಿಹವಾಗಿದೆ. ತಮ್ಮ ಹೇಳಿಕೆಯನ್ನು ಏಳು ದಿನಗಳ ಒಳಗೆ ವಾಪಸ್ಸು ಪಡೆಯದೇ ಇದ್ದಲ್ಲಿ ಧಾರವಾಡದ ಕಡಪಾ ಮೈದಾನದಿಂದ ತಮ್ಮ ಮನೆಯವರೆಗೂ ಸಾವಿರಾರು ಕಾರ್ಯಕರ್ತರು ಪಾದಯಾತ್ರೆ ಮೂಲಕ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಿಕ್ಷಕ ಸಂಘದ ಮುಖಂಡ ಬಸವರಾಜ ಗುರಿಕಾರ ಮಾತನಾಡಿ, ಜನಪರ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿಗಳ ವಿರುದ್ಧ ಜೋಶಿ ಹೇಳಿಕೆ ಖಂಡನೀಯ. ಲೋಕಸಭಾ ಚುನಾವಣೆ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕಾರ್ಯವನ್ನು ಬಿಜೆಪಿ ಮುಖಂಡರು ಬಿಡಬೇಕು ಎಂದರು.

ಕಾಂಗ್ರೆಸ್‌ ಮುಖಂಡರಾದ ಅನಿಲಕುಮಾರ ಪಾಟೀಲ, ಅಲ್ತಾಪ ಹಳ್ಳೂರ ಸೇರಿದಂತೆ ಹತ್ತಾರು ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.