ಹರಪನಹಳ್ಳಿ: ಹೋರಾಟಗಳು ಕೇವಲ ಸಾಂಕೇತಿಕವಾಗಿರದೇ ರೈತರು, ಬಡವರು, ಕಾರ್ಮಿಕರು, ದೀನ ದಲಿತರು, ಶೋಷಿತರ ಪರ ಧ್ವನಿಯಾಗಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ಸಂತೋಷ್ ಹೇಳಿದರು.

ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಅಖಿಲ ಭಾರತ ಕಿಸಾನ್ ಸಭಾದ 6ನೇ ತಾಲೂಕು ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಇಂತಹ ಸಮ್ಮೇಳನಗಳು ನಡೆದಾಗ ಮಾತ್ರ ನೈಜ ಸಮಸ್ಯೆಗಳು ತಿಳಿಯುತ್ತವೆ. ಜನರು ಕೂಡ ಸಂಘಟಿತರಾಗುತ್ತಾರೆ. ಈ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಇದರ ವಿರುದ್ಧ ನಾವು ನಿರಂತರ ಹೋರಾಟ ಮಾಡಬೇಕಿದೆ ಎಂದರು.

ಭಾರತ ಕಮ್ಯುನಿಸ್ಟ್ ಪಕ್ಷದ ತಾಲೂಕು ಕಾರ್ಯದರ್ಶಿ ರಮೇಶ್ ನಾಯ್ಕ್ ಮಾತನಾಡಿ, ದೇಶದಲ್ಲಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ. ಸಮರ್ಪಕ ನೀರಾವರಿ ಯೋಜನೆ ಇಲ್ಲ. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ನೀಡಿಲ್ಲ. ಇದರ ವಿರುದ್ಧ ನಮ್ಮ ಕಿಸಾನ್ ಸಭಾದಿಂದ ನಿರಂತರ ಮಾಡಿಕೊಂಡು ಬಂದಿದ್ದೇವೆ. ಆದರೂ ಆಳುವ ಸರ್ಕಾರಗಳು ಇವುಗಳ ಬಗ್ಗೆ ನಿರ್ಲಕ್ಷ್ಯ ವಹಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ್ ಮಾತನಾಡಿ, ಅನೇಕ ಹೋರಾಟಗಳ ಮೂಲಕ ನಮ್ಮ ಕಿಸಾನ್ ಸಭಾ ಆಡಳಿತದ ಗಮನ ಸೆಳೆದಿದೆ. ಜನರ ಸಮಸ್ಯೆಗಳ ವಿರುದ್ಧ ಹೋರಾಡುವುದೇ ಕಿಸಾನ್ ಸಭಾ ಮೂಲ ಉದ್ದೇಶ ಎಂದು ಹೇಳಿದರು.


ಅಖಿಲ ಭಾರತ ಕಿಸಾನ್ ಸಭಾ ಸಂಘಟನೆ ಇತರೆ ಎಲ್ಲ ಸಂಘಟನೆಗಳ ಜೊತೆಯಲ್ಲಿ ಸರ್ಕಾರಗಳ ವಿರುದ್ಧ ಮೂರು ದಶಕಗಳ ಕಾಲ ಹೋರಾಟ ಮಾಡಿಕೊಂಡು ಬಂದಿದೆ. ಇದರ 6ನೇ ತಾಲೂಕು ಸಮ್ಮೇಳನ ಯಶಸ್ವಿಯಾಗಿ ನಡೆದು ಬಂದಿದೆ ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೂದಿಹಾಳು ಸಿದ್ದಣ್ಣ, ಡಿಎಸ್‌ಎಸ್ ಮುಖಂಡ ಕಬ್ಬಳ್ಳಿ ಮೈಲಪ್ಪ, ಕಿಸಾನ್ ಸಭಾದ ಗೌರವಾಧ್ಯಕ್ಷರಾಗಿ ಮಸಲವಾಡ ಹನುಮಂತಪ್ಪ, ಹೊಸಹಳ್ಳಿ ಮಲ್ಲೇಶ್ ಮಾತನಾಡಿದರು.

ಮುಖಂಡರಾದ ಬೊಮ್ಮಲಿಂಗಪ್ಪ, ಹನುಮಂತನಾಯ್ಕ್, ಶಿವರಾಮ್, ಬಳಿಗನೂರು ಕೊಟ್ರೇಶ್, ಎಚ್.ಹಾಲಪ್ಪ, ಎ.ಬಿ.ನಾಗರಾಜ್ ಗೌಡ, ಟಿ.ಬಸಮ್ಮ, ವಿಶಾಲಮ್ಮ, ದೇವಿಕಾ, ಕರಿಬಸಮ್ಮ, ದ್ವಾರಕೀಶ್ ಇದ್ದರು.

ಪದಾಧಿಕಾರಿಗಳ ಆಯ್ಕೆ: ಇದೇ ವೇಳೆ ಕಿಸಾನ್ ಸಭಾದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಿಸಾನ್ ಸಭಾದ ತಾಲೂಕು ಗೌರವಾಧ್ಯಕ್ಷರಾಗಿ ರಾಗಿ ಮಸಲವಾಡದ ಹನುಮಂತಪ್ಪ, ಅಧ್ಯಕ್ಷರಾಗಿ ಹನುಮಂತ ನಾಯ್ಕ್, ಉಪಾಧ್ಯಕ್ಷರಾಗಿ ಬೊಮ್ಮಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಶಿವರಾಮ್, ಸಹ ಕಾರ್ಯದರ್ಶಿ ಹರಿಯಮ್ಮನಹಳ್ಳಿ ಬಸವರಾಜ್, ತಾಲೂಕು ಸಮಿತಿ ಸದಸ್ಯರಾಗಿ ಮತ್ತಿಹಳ್ಳಿ ಭರಮಪ್ಪ, ಶಿವಕುಮಾರ್, ಚಿದಾನಂದಪ್ಪ, ಬೊಮ್ಮಪ್ಪ, ಬಸವರಾಜ್ ಅವರನ್ನು ಆಯ್ಕೆ ಮಾಡಲಾಯಿತು.