ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ಲಾಭ ಪಡೆಯಲಿ: ಕುಲಪತಿ ಡಾ. ಬಿ.ಕೆ. ರವಿ

| Published : Jun 10 2024, 02:00 AM IST

ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ಲಾಭ ಪಡೆಯಲಿ: ಕುಲಪತಿ ಡಾ. ಬಿ.ಕೆ. ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮಾ ಗಾಂಧೀಜಿ ಅವರ ಕನಸಿನಂತೆ ಪ್ರತಿಯೊಬ್ಬರೂ ದೇಶಭಕ್ತಿ ಅಳವಡಿಸಿಕೊಂಡು ಶಿಕ್ಷಣವಂತರಾಗಿ, ಸಮರ್ಥ ನಾಯಕತ್ವ ಗುಣ ಬೆಳೆಸಿಕೊಂಡು ದೇಶ ಕಟ್ಟುವ ಕೆಲಸಕ್ಕೆ ಅಣಿಯಾಗಬೇಕು.

ಕೊಪ್ಪಳ ವಿಶ್ವವಿದ್ಯಾಲಯದ ಎನ್ನೆಸ್ಸೆಸ್‌ ಕೋಶದ ಸಲಹಾ ಸಮಿತಿ ಸಭೆಕನ್ನಡಪ್ರಭ ವಾರ್ತೆ ಯಲಬುರ್ಗಾ

ಮಹಾತ್ಮಾ ಗಾಂಧೀಜಿ ಅವರ ಕನಸಿನಂತೆ ಪ್ರತಿಯೊಬ್ಬರೂ ದೇಶಭಕ್ತಿ ಅಳವಡಿಸಿಕೊಂಡು ಶಿಕ್ಷಣವಂತರಾಗಿ, ಸಮರ್ಥ ನಾಯಕತ್ವ ಗುಣ ಬೆಳೆಸಿಕೊಂಡು ದೇಶ ಕಟ್ಟುವ ಕೆಲಸಕ್ಕೆ ಅಣಿಯಾಗಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಕೆ. ರವಿ ಹೇಳಿದರು.

ಪಟ್ಟಣದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗುರುವಾರ ಕೊಪ್ಪಳ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ೨೦೨೩-೨೪ನೇ ಸಾಲಿನ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ ಅವರ ಸ್ವಚ್ಛ ಭಾರತದ ಕನಸು ನನಸಾಗಲು ಎಲ್ಲರೂ ಸ್ವಚ್ಛತೆಗೆ ಹೆಚ್ಚು ಗಮನ ಹರಿಸಬೇಕಿದೆ ಎಂದರು.

ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಜತೆಗೆ ಮಹಾತ್ಮಾ ಗಾಂಧೀಜಿ ಅವರ ಜೀವನ ಶೈಲಿಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂಬುದು ವಿವಿಯ ಸಂಕಲ್ಪವಾಗಿದೆ. ಇಂತಹ ಶಿಬಿರದಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಭಾಗವಹಿಸಿ, ಸಾಕಷ್ಟು ವಿಷಯಜ್ಞಾನ ಪಡೆದುಕೊಂಡು, ಆದರ್ಶ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ಬಳಿಕ ಈ ಸಭೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ೨೦೨೩-೨೪ನೇ ಸಾಲಿನಲ್ಲಿ ವಿವಿಧ ಕಾಲೇಜು ಘಟಕಗಳಿಗೆ ಅನುದಾನ ಹಂಚಿಕೆ, ವಿಶ್ವವಿದ್ಯಾಲಯ ಮತ್ತು ವಿವಿಧ ಪದವಿ ಮಹಾವಿದ್ಯಾಲಯಗಳಲ್ಲಿ ೧೦೦ ಜನ ವಿದ್ಯಾರ್ಥಿಗಳನ್ನೊಳಗೊಂಡ ಹೊಸ ಘಟಕಗಳನ್ನು ಸ್ಥಾಪಿಸುವುದು, ಕೋಶಕ್ಕೆ ಸಹಾಯಕರನ್ನು ನೇಮಿಸಿ ಸಹಾಯಧನ ನೀಡುವುದು, ೨೦೨೩-೨೪ನೇ ಸಾಲಿನ ೧೩೦೦ ಸ್ವಯಂ ಸಹಾಯಕರುಗಳಿಗೆ ಬ್ಯಾಡ್ಜಸ್ ಮತ್ತು ಪ್ರಮಾಣ ಪತ್ರಗಳನ್ನು ಖರೀದಿಸಲು ಅನುಮೋದನೆ ಕೋರುವುದು ಮತ್ತು ವಿಶ್ವವಿದ್ಯಾಲಯ ಮಟ್ಟದ ಅತ್ಯುತ್ತಮ ಸ್ವಯಂ ಸೇವಕ, ಸೇವಕಿ, ಅತ್ಯುತ್ತಮ ಅಧಿಕಾರಿ ಪ್ರಶಸ್ತಿಯನ್ನು ಪರಿಚಯಿಸುವುದು ಈ ವಿಷಯಗಳ ಕುರಿತು ಚರ್ಚಿಸಲಾಯಿತು.ರಾಷ್ಟ್ರೀಯ ಸೇವಾ ಯೋಜನೆ ಪ್ರಾಂತೀಯ ನಿರ್ದೇಶಕ ಡಿ. ಕಾರ್ತಿಕೇಯನ್, ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಪ್ರತಾಪ್ ಲಿಂಗಯ್ಯ, ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ.ವಿ. ಪ್ರಸಾದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಪ್ಪಣ್ಣ ಶಿರಸಗಿ, ಸಿಡಿಪಿಒ ಬಿ.ಎಂ. ಮಾಳೇಕೊಪ್ಪ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಪ್ರಕಾಶ ಯಳವಟ್ಟಿ, ಕೊಪ್ಪಳ ವಿಶ್ವವಿದ್ಯಾಲಯ ಕೋಶಾಧಿಕಾರಿ ಬಸವರಾಜ ಈಳಿಗನೂರ, ಸಹಾಯಕ ಪ್ರಾಧ್ಯಾಪಕ ಡಾ. ಸಾಧು ಸೂರ್ಯಕಾಂತ, ಡಾ. ಅಶ್ವಿನ್ ಕುಮಾರ, ಸರಸ್ವತಿ ಮತ್ತು ಸಲಹಾ ಸಮಿತಿ ಸಭೆಯ ಸದಸ್ಯರು ಹಾಗೂ ನಾನಾ ಪದವಿ ಮಹಾವಿದ್ಯಾಲಯಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.