ಸಾರಾಂಶ
ಗದಗ: ಶಿಕ್ಷಣ ನಿಂತ ನೀರಲ್ಲ, ವಿದ್ಯಾರ್ಥಿಗಳು ನೂತನ ಆವಿಷ್ಕಾರಗಳನ್ನು ತಮ್ಮ ಶೈಕ್ಷಣಿಕ ಅಧ್ಯಯನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವೈಜ್ಞಾನಿಕ ಮನೋಭಾವನೆ, ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್. ಪಾಟೀಲ ಹೇಳಿದರು.ಅವರು ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್ಸೆಸ್ಸೆಲ್ಸಿಯಲ್ಲಿ ಮೊದಲ ಮೂರು ಸ್ಥಾನ ಪಡೆದ ಗದಗ ತಾಲೂಕಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪುರಸ್ಕಾರ ನೀಡಿ ಮಾತನಾಡಿದರು.
ಮೊದಲ ಮೂರು ಸ್ಥಾನ ಪಡೆದುಕೊಂಡ ವಿದ್ಯಾರ್ಥಿ,ವಿದ್ಯಾರ್ಥಿನಿಗೆ ಕ್ರಮವಾಗಿ ಪ್ರಶಸ್ತಿ ಪತ್ರ,ಕಾಲೇಜ್ ಬ್ಯಾಗ್ ನಗದು ಪುರಸ್ಕಾರ ನೀಡುವ ಕಾರ್ಯಕ್ರಮ ಕಳೆದ ವಾರದಿಂದ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಮೂಲಕ ಮುಕ್ತಾಯಗೊಳ್ಳಲಿದೆ ಎಂದರು.ಕಳೆದ 10 ವರ್ಷಗಳಿಂದ ಪ್ರತಿಷ್ಠಾನವು ಪ್ರತಿಭಾ ಪುರಸ್ಕಾರ ನೀಡುತ್ತ ಬಂದಿದ್ದು, ದಾನಿಯೊಬ್ಬರು ಈ ಕಾರ್ಯಕ್ಕೆ ಕೈ ಜೋಡಿಸಿದ್ದರಿಂದ ಪ್ರತಿಷ್ಠಾನಕ್ಕೆ ಬಲ ಬಂದಿದೆ. 30 ಶಾಲೆಗಳಲ್ಲಿ ತಲಾ ಐವರು ಪ್ರತಿಭಾನ್ವಿತರನ್ನು ಸನ್ಮಾನಿಸಿದ್ದು, ಪ್ರತಿಭಾ ಪುರಸ್ಕಾರಕ್ಕಾಗಿ ಒಟ್ಟು ₹1 ಲಕ್ಷ 20 ಸಾವಿರಕ್ಕೂ ಹೆಚ್ಚು ನಗದು, ಸುಮಾರು ₹60 ಸಾವಿರ ಮೌಲ್ಯದ ಬ್ಯಾಗ ಪ್ರಮಾಣ ಪತ್ರ ಹಾಗೂ ಸಿಹಿ ವಿತರಿಸಲಾಗಿದೆ ಎಂದರು.
ಪ್ರತಿಷ್ಠಾನದ ಉಪಾಧ್ಯಕ್ಷ ಶಂಕ್ರಪ್ಪ ಅಣ್ಣಿಗೇರಿ, ಪ್ರತಿಷ್ಠಾನದ ಕಾರ್ಯದರ್ಶಿ ಶಿವಪ್ಪ ಕತ್ತಿ, ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ವಿನಾಯಕ ಬಂಡಾ ಮುಂತಾದವರು ಮಾತನಾಡಿದರು.ಕೋಟುಮಚಗಿ ಸರ್ಕಾರಿ ಪ್ರೌಢ ಶಾಲೆಯ ಲಲಿತಾ ಸಂಕನಗೌಡ್ರ, ಜೀವನಸಾಬ್ ವಡ್ಡಟ್ಟಿ, ಶಿಲ್ಪಾ ಸಿಂಗಟಾಲಕೇರಿ, ಅನಿತಾ ವಾಲ್ಮೀಕಿ, ತೇಜಸ್ವಿನಿ ತಳವಾರ ಪುರಸ್ಕಾರ ನೀಡಿ ಗೌರವಿಸಲಾಯಿತು.