ಸಾರಾಂಶ
- ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭ ಉದ್ಘಾಟಿಸಿ ಸಂಸದೆ ಡಾ.ಪ್ರಭಾ
- - - ಕನ್ನಡಪ್ರಭ ವಾರ್ತೆ ದಾವಣಗೆರೆವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಜೀವನದಲ್ಲಿ ಸದಾ ಬೆಳೆಸಿಕೊಂಡರೆ, ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ನೆರವಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಸ್ವಿಲರ್ ಜ್ಯೂಬಿಲಿ ಶಾಖಾ ಗ್ರಂಥಾಲಯದಲ್ಲಿ ಗುರುವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ವತಿಯಿಂದ ಆಯೋಜಿಸಲಾಗಿದ್ದ. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಪೋಷಕರು ಮಕ್ಕಳನ್ನು ಪುಸ್ತಕ ಹಾಗೂ ಕಥೆಗಳನ್ನು ಕಲಿಯಲು ಪ್ರೋತ್ಸಾಹಿಸಬೇಕು. ಅದು ಒತ್ತಡಮುಕ್ತ ಜೀವನ ಹೊಂದಲು ಪ್ರೇರೇಪಿಸುತ್ತದೆ. ಅವರಿಗೆ ಸಕಾರಾತ್ಮಕ ಶಕ್ತಿಯನ್ನು ಸಹ ನೀಡುತ್ತದೆ. ಗ್ರಂಥಾಲಯದಲ್ಲಿ ಗಣಕ ಯಂತ್ರಗಳನ್ನು ಹಾಗೂ ಇನ್ನೂ ಹೆಚ್ಚಿನ ಪುಸ್ತಕಗಳನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ, ಅಂತಹ ಮಾರ್ಗದಲ್ಲಿ ಅವರಿಗೆ ಕಲಿಯಲು ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಅಲ್ಪಸಮಯ ಬಿಡುವು ಮಾಡಿಕೊಂಡು ಇತಿಹಾಸಕಾರರು, ಸಾಹಿತಿಗಳು ಹಾಗೂ ಸಂವಿಧಾನದ ಬಗ್ಗೆ ಓದುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕರಿಗಾಗಿ ಎಸ್.ಎಸ್. ಕೇರ್ ಟ್ರಸ್ಟ್‌ನಿಂದ ಡಯಾಬಿಟಿಸ್ ಬಗ್ಗೆ ಉಚಿತವಾಗಿ ಪರೀಕ್ಷೆ ಮಾಡಲಾಗುವುದು. ಚೈಲ್ಡ್ ಕೇರ್ ಟ್ರಸ್ಟ್‌ನಿಂದ ಮಕ್ಕಳ ಮಧುಮೇಹ ಉಚಿತವಾಗಿ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಗ್ರಂಥಾಲಯ ಇಲಾಖೆಯವರು ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲು ಜಾಗ ಕೇಳಿದರೆ ನಿವೇಶನ ನೀಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಯಾರು ಕಷ್ಟಪಟ್ಟು ಓದುತ್ತಾರೋ, ಅಂಥವರು ಮುಂದೆ ಬರುತ್ತಾರೆ. ಓದಿ ಒಳ್ಳೆಯ ನಾಗರೀಕರಾಗುತ್ತಾರೆ. ನಮ್ಮ ಜಿಲ್ಲೆಗೆ ವಿದ್ಯಾರ್ಥಿಗಳಿಂದ ಇನ್ನೂ ಮಹತ್ತರ ಹೆಸರು ಬರುವಂತಾಗಲಿ ಎಂದು ಆಶಿಸಿದರು.
ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ್ ಉಪನ್ಯಾಸ ನೀಡಿದರು. ಪಾಲಿಕೆ ಮೇಯರ್ ಕೆ.ಚಮನ್ ಸಾಬ್, ಸದಸ್ಯ ಎಸ್.ಟಿ.ವೀರೇಶ್, ಮಂಜುನಾಥ ಗಡಿಗುಡಾಳ, ಎ.ನಾಗರಾಜ, ಸಾಹಿತಿ ಟಿ.ಎಸ್.ಶೈಲಜಾ, ಜಿಲ್ಲಾ, ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಪಿ.ಆರ್.ತಿಪ್ಪೇಸ್ವಾಮಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.- - - -14ಕೆಡಿವಿಜಿ37:
ದಾವಣಗೆರೆಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.-14ಕೆಡಿವಿಜಿ38:
ದಾವಣಗೆರೆಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಮೇಯರ್ ಕೆ.ಚಮನ್ ಸಾಬ್, ಗಣ್ಯರು ಗ್ರಂಥಾಲಯ ಸಂಸ್ಥಾಪಕರು, ಜವಹರಲಾಲ್ ನೆಹರು ಭಾವಚಿತ್ರಗಳು, ಗ್ರಂಥಗಳಿಗೆ ಪುಷ್ಪವೃಷ್ಟಿ ಅರ್ಪಿಸಿ, ನಮಿಸಿದರು.