ಸಾರಾಂಶ
ಶಿರಹಟ್ಟಿ: ಶಿಕ್ಷಣ ಹರಿಯುವ ನೀರಿನಂತೆ ನಿತ್ಯ ನೂತನವಾಗಿರುತ್ತದೆ. ವಿದ್ಯಾರ್ಥಿಗಳು ಪ್ರತಿದಿನ ಶೈಕ್ಷಣಿಕ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಸಂಶೋಧನೆ, ಅನ್ವೇಷಣೆ ಕುರಿತು ತಿಳಿದುಕೊಂಡು ಜ್ಞಾನದ ಹರಿವು ಹೆಚ್ಚಿಸಿಕೊಳ್ಳಬೇಕು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ಪಟ್ಟಣದ ವಿದ್ಯಾನಗರದ ತಮ್ಮ ನಿವಾಸದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನಂತರ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆಗೈಯಲು ವಿದ್ಯಾರ್ಥಿಗಳಿಗೆ ಬೇಕಿರುವುದು ಅಚಲ ವಿಶ್ವಾಸ, ದೃಢ ನಂಬಿಕೆ ಎಂದರು.ಶಾಲೆಯಲ್ಲಿ ೫-೬ ಗಂಟೆ ಮಕ್ಕಳಿರುತ್ತಾರೆ. ಉಳಿದ ಅವಧಿಯಲ್ಲಿ ಮಕ್ಕಳು ಮನೆಯಲ್ಲಿ ತಂದೆ-ತಾಯಿಯೊಂದಿಗೆ ಇರುತ್ತಾರೆ. ಹೀಗಾಗಿ ಮನೆಯ ವಾತಾವರಣಕ್ಕೆ ತಕ್ಕಂತೆ ಮಕ್ಕಳು ಬೆಳೆಯುತ್ತಾರೆ. ಮನೆಯಲ್ಲಿ ಪಾಲಕರು ಮಕ್ಕಳಿಗೆ ಮಾದರಿಯಾಗಿರಬೇಕು. ಮಕ್ಕಳ ಮುಂದೆ ನಮ್ಮ ನಡೆ-ನುಡಿ ಉತ್ತಮವಾಗಿರಬೇಕು. ಮಕ್ಕಳಿಗೆ ಉತ್ತಮ ಮೌಲ್ಯಯುತ ಸಂಸ್ಕಾರ ನೀಡಬೇಕು ಎಂದರು.
ವಿದ್ಯಾರ್ಥಿಗಳಿಗೆ ವಿದ್ಯೆ ಜತೆಗೆ ವಿನಯ ಬಹಳ ಮುಖ್ಯವಾಗಿದ್ದು, ಆತ್ಮಸ್ಥೆರ್ಯ ಹಾಗೂ ಛಲದೊಂದಿಗೆ ನಿಮ್ಮ ಮುಂದಿನ ವಿದ್ಯಾರ್ಜನೆ ಯಶಸ್ವಿಯಾಗಿ ಮುನ್ನಡೆಸಿ ಎಂದು ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ಅವರು, ಮಕ್ಕಳಿಗೆ ಸತತ ಪರಿಶ್ರಮ ಹಾಗೂ ಹೋರಾಟ ಮನೋಭಾವ ಅತ್ಯಗತ್ಯ. ಮುಖ್ಯವಾಗಿ ಮೊಬೈಲ್ ಹಾಗೂ ದೃಶ್ಯಮಾಧ್ಯಮದಿಂದ ದೂರವಿರಬೇಕು. ಅಗತ್ಯಕ್ಕೆ ತಕ್ಕಂತೆ ಮೊಬೈಲ್ ಬಳಸಬೇಕು. ಬಹುತೇಕ ಮಕ್ಕಳು ಮೊಬೈಲ್‌ಗಳಿಂದ ಅನವಶ್ಯಕವಾಗಿ ಸಮಯ ವ್ಯರ್ಥ ಮಾಡಿಕೊಂಡು ತಮ್ಮ ಭವಿಷ್ಯ ಹಾಳುಮಾಡಿಕೊಳ್ಳುತಿರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದರು.ಮಕ್ಕಳ ಆಸಕ್ತಿ ಗಮನಿಸಿ ಅವರಿಗಿಷ್ಟವಾದ ಕ್ಷೇತ್ರ ಆಯ್ಕೆಮಾಡಿಕೊಂಡು ಅವರಿಗೆ ಪ್ರೋತ್ಸಾಹ ನೀಡುವದು ಪಾಲಕರ ಆದ್ಯ ಕರ್ತವ್ಯವಾಗಿದ್ದು, ಅವರ ಆಸೆಗಳಿಗೆ ತಣ್ಣಿರೆರಚುವ ಕೆಲಸವಾಗಬಾರದು. ಪಾಲಕರ ಹಿತಾಸಕ್ತಿ ಅಡಗಿರುವುದು ಮಕ್ಕಳ ಭವಿಷ್ಯ ರೂಪಿಸುವದರಲ್ಲಿ ಎಂಬುದನ್ನು ಮರೆಯಬಾರದು. ವಿದ್ಯಾರ್ಥಿಗಳ ಜೀವನದಲ್ಲಿ ಗುರು ಮತ್ತು ಗುರಿ ಇದ್ದರೆ ಯಶಸ್ಸಿನ ಸಾಧನೆ ಕಟ್ಟಿಟ್ಟ ಬುತ್ತಿ. ನಮ್ಮ ಜೀವನದ ಗುರಿ ಸಾಧಿಸುವುದು ಕಷ್ಟಕರ. ಹಾಗೇ ಸಾಧಿಸಿದ ಯಶಸ್ಸನ್ನು ಕಾಪಾಡಿಕೊಳ್ಳುವುದು, ಯಶಸ್ಸು ಬಂದಾಗ ಸಾಗಿ ಬಂದ ದಾರಿ ನಾವು ಎಂದಿಗೂ ಮರೆಯಬಾರದು. ಪರಿಶ್ರಮ, ಶ್ರದ್ಧೆ, ಆಸಕ್ತಿ ನಿರಂತರ ಅಭ್ಯಾಸ ನಡೆಸಿದರೆ ಪರೀಕ್ಷೆ ಫಲಿತಾಂಶ ನಿರೀಕ್ಷೆಗೂ ಮೀರಿದ ಯಶಸ್ಸು ಪಡೆಬಹುದು ಎಂದು ತಿಳಿಸಿದರು.
ಶಿಕ್ಷಣದ ಗುಣಮಟ್ಟ ಹಾಗೂ ಪರಿಣಾಮಕಾರಿ ಭೋದನೆ ಸಹ ಮಕ್ಕಳಿಗೆ ಅವಶ್ಯಕವಾಗಿದೆ. ಜಾಗತಿಕ ಪೈಪೋಟಿ ಎದುರಿಸಲು ಅದಕ್ಕೆ ಪೂರಕವಾದ ಶಿಕ್ಷಣ ಅಗತ್ಯವಿದೆ. ಕಾಟಾಚಾರದ ಶಿಕ್ಷಣ ಸಲ್ಲದು.ಅದಕ್ಕೆ ಅನುಗುಣವಾಗಿ ಸರ್ಕಾರ ಸಹ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ.ಅದರ ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಮಲಿಕ ರೆಹಾನ ಫಣಿಬಂದ, ವಿಶ್ವನಾಥ ಹಿರೇಮಠ, ಕೃತಿಕ ಕೊಪ್ಪದ, ಶಿವರಾಜ ಕೊಪ್ಪದ, ಮಹಾಂತೇಶ ಡೊಳ್ಳಿನ, ಸುಧಾ ಕಲ್ಯಾಣಿ, ಸೃಷ್ಠಿ ಘಂಟಿ, ನಫೀಸಾ ಢಾಲಾಯತ, ತೇಜಶ್ವಿನಿ ಮಾಬಳಿ, ದೇವಮ್ಮ ಡೊಳ್ಳಿನ, ಜಗದೀಶ ಬೋರಶೆಟ್ಟರ ಅವರಿಗೆ ಸನ್ಮಾನ ಮಾಡಲಾಯಿತು.
ಸಿಸಿಎನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ, ಶಿಕ್ಷಕರಾದ ಎಂ.ಕೆ. ಲಮಾಣಿ, ಎಂ.ಎ. ಮಕಾನದಾರ, ರಿಯಾಜ್ ಫಣಿಬಂದ, ಅಕ್ಬರಸಾಬ ಯಾದಗಿರಿ, ಎಚ್.ಎಂ. ದೇವಗಿರಿ, ಲೋಕೇಶ್ವರನ್, ನೀಲಕಂಠಮ್ ಮತ್ತಿತರರು ಉಪಸ್ಥಿತರಿದ್ದರು.