ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಕಾರ್ಯವಾಗಲಿ

| Published : Dec 20 2024, 12:45 AM IST

ಸಾರಾಂಶ

ನಾವು ಮಕ್ಕಳನ್ನು ಸಹೃದಯಿಗಳನ್ನಾಗಿ ಮಾಡಿದ್ದೇವೆ ಎಂದರೆ ನಮ್ಮ ಕರ್ತವ್ಯ ಚೆನ್ನಾಗಿ ಮಾಡಿದ್ದೇವೆ ಎಂದು ಅರ್ಥ

ಮುಂಡರಗಿ: ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವುದು ಕೇವಲ ಶಾಲೆಯ ಶಿಕ್ಷಕರ ಜವಾಬ್ದಾರಿಯಲ್ಲ. ಅದು ಪಾಲಕರು, ಶಿಕ್ಷಕರು ಸೇರಿದಂತೆ ನಮ್ಮೆಲ್ಲರದ್ದಾಗಿದೆ. ಪಾಲಕರು ಮಕ್ಕಳ ಮನಸ್ಸನ್ನು ಅರಿತಕೊಳ್ಳಬೇಕು ಎಂದು ಡಿಸೇಲ್ಸ್ ಮ್ಯೂಜಿಕ್ ಅಕಾಡೆಮಿ ಡೈರೆಕ್ಟರ್ ರೆವಿರೆಂಡ್ ಫಾದರ್ ಸಂತೋಷ ಕುಮಾರ ಹೇಳಿದರು.

ಅವರು ಬುಧವಾರ ಸಂಜೆ ಪಟ್ಟಣದ ಗದಗ ರಸ್ತೆಯಲ್ಲಿರುವ ಎಸ್.ಎಫ್.ಎಸ್.ಶಾಲೆಯಲ್ಲಿ ಜರುಗಿದ ಎಸ್.ಎಫ್.ಎಸ್.ಶಾಲೆಯ 24ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾವು ಮಕ್ಕಳನ್ನು ಸಹೃದಯಿಗಳನ್ನಾಗಿ ಮಾಡಿದ್ದೇವೆ ಎಂದರೆ ನಮ್ಮ ಕರ್ತವ್ಯ ಚೆನ್ನಾಗಿ ಮಾಡಿದ್ದೇವೆ ಎಂದು ಅರ್ಥ. ಪಾಲಕರು ತಮ್ಮ ಮಕ್ಕಳಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸುತ್ತಿದ್ದು, ನಂತರದಲ್ಲಿ ಮಕ್ಕಳು ಅಭಿವೃದ್ಧಿ ಹೊಂದಿರುವ ಕುರಿತು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳ ಕೈಯಲ್ಲಿಯೂ ಮೊಬೈಲ್ ನೀಡುತ್ತಿದ್ದು, ಮೊಬೈಲ್ ವಿಕಿರಣದಿಂದ ಅವರ ಜೀವನ ಹಾಳಾಗುತ್ತಿದೆ. ಪಾಲಕರು ಮಕ್ಕಳಿಗೆ ಬಡಿದು ಹೊಡೆದು ಬುದ್ದಿ ಕಲಿಸುವುದಕ್ಕಿಂತ ಪ್ರೀತಿಯಿಂದ ಬೆಳೆಸಿ ಒಳ್ಳೆಯ ಸಹೃದಯಿಗಳನ್ನಾಗಿ ಮಾಡಬೇಕು. ಕಳೆದ 24 ವರ್ಷಗಳಿಂದ ಇಲ್ಲಿ ಎಸ್.ಎಫ್.ಎಸ್.ಶಾಲೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದು, ಅದಕ್ಕಾಗಿ ಇಲ್ಲಿನ ಜನತೆಗೆ ಹಾಗೂ ಆಡಳಿತ ಮಂಡಳಿಗೆ ಅಭಿನಂದಿಸುವೆ ಎಂದರು.

24ನೇ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ತಹಸೀಲ್ದಾರ ಎರ್ರಿಸ್ವಾಮಿ ಪಿ.ಎಸ್. ಮಾತನಾಡಿ, ಶಿಕ್ಷಣ ಎಂದರೆ 100ಕ್ಕೆ 100 ಅಂಕ ಪಡೆಯುವ ಪರೀಕ್ಷೆ ಅಥವಾ ಅಂಕಪಟ್ಟಿಯಲ್ಲ. ಅದಕ್ಕೆ ಶಿಕ್ಷಣ ಎನ್ನಲು ಸಾಧ್ಯವಿಲ್ಲ. ಮಗು ದೈಹಿಕ,ಮಾನಸಿಕ, ಶೈಕ್ಷಣಿಕವಾಗಿ ಸರ್ವತೋಮುಖ ಬೆಳವಣಿಗೆ ಹೊಂದಿದಾಗ ಉತ್ತಮ ಶಿಕ್ಷಣ ಪಡೆದಂತಾಗುತ್ತದೆ.ಪಾಲಕರು ಮಕ್ಕಳಿಗೆ ಅಂಕಗಳಿಗೆ ಒತ್ತಾಯಿಸುವುದನ್ನು ಬಿಡಬೇಕು. ಅಂಕದ ಹೊರತಾಗಿಯೂ ಮಗು ಏನೆಲ್ಲ ಸಾಧಿಸಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲಿನ ಎಸ್.ಎಫ್.ಎಸ್.ಶಾಲೆ ಕಳೆದ 24 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಸಧ್ಯ ಈ ಶಾಲೆಯಲ್ಲಿ 1250ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.

ಅತಿಥಿಗಳಾಗಿ ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಪಡ್ನೇಶಿ, ಬಿಆರ್‌ಸಿ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ, ಫಾ. ಇರುದಯರಾಜ್, ಮುಂಡರಗಿ ಎಸ್.ಎಫ್. ಶಾಲೆ ಫಾ. ಪ್ರಶಾಂತ, ಪ್ರಾ. ಫಾ.ನಿರ್ಮಲ್, ಕುಮಾರ ಸಂದೇಶ, ಕುಮಾರಿ ಸುನಿತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆ,ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.