ಸಾರಾಂಶ
ಶಿಗ್ಗಾಂವಿ: ಕನ್ನಡ ಭಾಷೆ ಪ್ರೀತಿಸುವುದು, ಗೌರವಿಸುವ ಜತೆಗೆ ಇತರ ಭಾಷಿಕರಿಗೆ ಕನ್ನಡ ಕಲಿಸುವ, ಬಳಕೆ ಮಾಡುವ ಕಾರ್ಯ ನಮ್ಮದಾಗಬೇಕು. ಗಡಿ ಭಾಗದಲ್ಲಿ ಹೆಚ್ಚು ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದು ತಾಲೂಕು ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಎಸ್. ಸಾಳುಂಕೆ ಹೇಳಿದರು.ಪಟ್ಟಣದ ನಳಂದಾ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹನುಮಂತಗೌಡ್ರ ಪಾಟೀಲ, ಕಮಲಮ್ಮ ರುದ್ರಗೌಡ ಪಾಟೀಲ, ಗುರುಸಿದ್ದಪ್ಪ ಅಜೂರ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬದುಕಿನ ಶ್ರೇಯಸಿಗೆ ಕನ್ನಡ ಭಾಷೆ ಪ್ರೇರಣೆಯಾಗಿದ್ದು, ಭಾಷೆ ನಾಡಿನ ಸಂಸ್ಕೃತಿಯಾಗಿದೆ. ಮನುಕುಲದ ವಿಕಾಸಕ್ಕೆ ಮಾರ್ಗದರ್ಶಿಯಾಗಿದೆ, ಅನ್ಯಭಾಷೆಗಳ ಪ್ರಭಾವ ತಡೆಯಬೇಕು. ಕನ್ನಡಿಗರಿಗೆ ಆದ್ಯತೆ ನೀಡುವ ಕೆಲಸವಾಗಬೇಕು ಎಂದರು.ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಚಂದ್ರಪ್ಪ ಸೊಬಟಿ ಅವರು ಕರ್ನಾಟಕ ಕಲೆ ಮತ್ತು ಸಂಸ್ಕೃತಿ, ಶಿವಾನಂದ ಮ್ಯಾಗೇರಿ ಅವರು ಸಾಹಿತ್ಯ, ಧಾರ್ಮಿಕ, ವೈದ್ಯಕೀಯ ಕ್ಷೇತ್ರಕ್ಕೆ ಶಿಗ್ಗಾಂವಿ ಕೊಡುಗೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ತಾಲೂಕು ಕಸಾಪ ಘಟಕದ ಅಧ್ಯಕ್ಷ ನಾಗಪ್ಪ ಬೆಂತೂರ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಹಿರೇಮಠ, ಅಶೋಕ ಕಾಳೆ, ಸ್ತ್ರೀ ಶಕ್ತಿ ಸ್ವ- ಸಹಾಯ ಗುಂಪುಗಳ ಸಂಘದ ಅಧ್ಯಕ್ಷೆ ಸುಶೀಲಕ್ಕ ಎಸ್. ಪಾಟೀಲ, ಡಾ. ಪಿ.ಆರ್. ಪಾಟೀಲ, ಕಲ್ಲಪ್ಪ ಆಜೂರ, ವೀರೇಶ ಆಜೂರ, ಕಲಾವಿದ ಬಸಣ್ಣ ಶಿಗ್ಗಾಂವಿ, ಸಿ.ಡಿ. ಯತ್ನಹಳ್ಳಿ, ಮುಖ್ಯಶಿಕ್ಷಕ ಎಂ.ಬಿ. ಹಳೆಮನಿ, ಶಂಭು ಕೆರಿ, ರವಿ ಕಡಕೋಳ, ಗೌರಮ್ಮ ಆಜೂರ, ವಿದ್ಯಾ ಮುಂಡಗೋಡ, ಸಂಜನಾ ರಾಯ್ಕರ್, ಮಂಜುಳಾ ಸಾಪ್ಪಿನಹಳ್ಳಿ ಇದ್ದರು. ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಘಟಕದ ರಮೇಶ ಹರಿಜನ ಪ್ರಾಸ್ತಾವಿಕವಾಗಿ ಮಾತನಾಡಿದರು.