ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದೇವಾಲಯಗಳು ಸರ್ಕಾರದ ಹಿಡಿತದಿಂದ ಮುಕ್ತವಾಗಿ ಸ್ವಾಯತ್ತಗೊಳ್ಳಬೇಕು ಎಂದು ಉಡುಪಿ ಪೇಜಾವರ ಮಠಾಧೀಶ ಹಾಗೂ ಅಯೋಧ್ಯೆ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.ಮಂಗಳವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನಗಳಿಗೆ ಸ್ವಾಯತ್ತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸ್ವಾಯತ್ತೆ ಸಿಕ್ಕಿದರೆ ಮಾತ್ರ ದೇವಾಲಯಗಳಿಗೆ ಭಕ್ತರು ನೀಡುವ ಸಂಪತ್ತು ನೇರವಾಗಿ ಭಕ್ತರ(ಸಮಾಜ) ವಿನಿಯೋಗಕ್ಕೆ ಸಾಧ್ಯವಾಗುತ್ತದೆ. ಆಗ ದೇವಸ್ಥಾನಗಳಿಂದ ಶಿಕ್ಷಣ, ವೈದಿಕ ಸಂಸ್ಥೆಗಳನ್ನು ಸ್ಥಾಪಿಸಬಹುದು. ಅಲ್ಲದೆ ದೇವಾಲಯಗಳು ಇನ್ನಷ್ಟು ಸಮಾಜಮುಖಿಯಾಗಲು ಸಾಧ್ಯವಿದೆ ಎಂದರು.
ಮುಂದಿನ ಯೋಜನೆ:ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಮುಂದುವರಿದ ಕಾಮಗಾರಿ ನಡೆಯುತ್ತಿದೆ. ಮೊದಲು ಮಂದಿರದ ಕಾಮಗಾರಿ ಪೂರ್ಣಗೊಳ್ಳಬೇಕು. ಅಲ್ಲಿ ಗರ್ಭಗುಡಿಯಲ್ಲಿ ಸೋರಿಕೆ ಆಗಿಲ್ಲ. ಕಾಮಗಾರಿ ಪೂರ್ತಿಯಾಗದ ಕಾರಣ ಸ್ವಲ್ಪ ನೀರು ಬಂದಿದೆ ಅಷ್ಟೆ. ಕಾಮಗಾರಿ ಎಲ್ಲವೂ ಮುಕ್ತಾಯಗೊಂಡ ಬಳಿಕ ಟ್ರಸ್ಟ್‌ನ ನಿಯಮಕ್ಕೆ ತಿದ್ದುಪಡಿ ಮಾಡಿ ಶಿಕ್ಷಣ ಸಂಸ್ಥೆ, ಸಮಾಜಸೇವೆ ಯೋಜನೆಗಳ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.
ಚಿನ್ನಾಭರಣ ಕಾಣಿಕೆ ಯಾಕೆ?:ಪುರಿಯ ಶ್ರೀಜಗನ್ನಾಥ ಮಂದಿರದ ರತ್ನಭಂಡಾರ ತೆರೆದಿರುವ ಕುರಿತಂತೆ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ದೇವಸ್ಥಾನಗಳ ಚಿನ್ನಾಭರಣ ಸಮಾಜದ ಸೊತ್ತು. ಭಕ್ತರು ನೀಡುವ ಸಂಪತ್ತಿನ ಮಾಹಿತಿ ತಿಳಿಯುವುದರಲ್ಲಿ ತಪ್ಪೇನಿಲ್ಲ. ಆದರೆ ದೇವಸ್ಥಾನಗಳಿಗೆ ಚಿನ್ನಾಭರಣವನ್ನು ಕಾಣಿಕೆ ರೂಪದಲ್ಲಿ ಹಾಕುವುದರಿಂದ ಏನು ಪ್ರಯೋಜನವಿಲ್ಲ. ಅದರ ಬದಲು ಅದನ್ನು ಸಮಾಜಸೇವೆಗೆ ಬಳಸಿಕೊಳ್ಳುವತ್ತ ಯೋಚಿಸಬೇಕು ಎಂದರು.
ಅಯೋಧ್ಯೆಯಲ್ಲಿ ಯಾತ್ರಿ ನಿವಾಸ:ಅಯೋಧ್ಯೆಯಲ್ಲಿ ಪೇಜಾವರ ಮಠದ ಯಾತ್ರಿ ನಿವಾಸ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಅಲ್ಲಿ ಜಾಗ ಖರೀದಿಸಲಾಗಿದೆ. ಯಾತ್ರಿ ನಿವಾಸ ನಿರ್ಮಾಣದಿಂದ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಪೇಜಾವರಶ್ರೀ ಹೇಳಿದರು.
ಈ ಬಾರಿ ಚೆನ್ನೈನಲ್ಲಿ ಜು.21ರಿಂದ ಚಾತುರ್ಮಾಸ್ಯ ವ್ರತಾಚರಣೆ ಸುಮಾರು ಎರಡು ತಿಂಗಳ ಕಾಲ ನಡೆಯಲಿದೆ ಎಂದು ಸ್ವಾಮೀಜಿ ಹೇಳಿದರು.