ಸಾರಾಂಶ
ಕಳೆದ ಚುನಾವಣೆಯಲ್ಲಿ ಯಾರ್ಯಾರು ಹೇಗೆಲ್ಲಾ ನಡೆದುಕೊಂಡ್ರು । ಬಹಳ ಇದೆ ಹೇಳ್ತಿನಿ
--- ಪಕ್ಷ, ರಾಷ್ಟ್ರದ ಹಿತಕ್ಕಾಗಿ ಬಹಳ ವಿಷಯಗಳನ್ನ ನುಂಗಿಕೊಂಡಿದ್ದೇನೆ- ರಾಜ್ಯದ 28 ಸ್ಥಾನಗಳಲ್ಲೂ ಬಿಜೆಪಿ ಗೆಲ್ಲಬೇಕು
- ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು- ತಮಿಳುನಾಡಲ್ಲಿ ಸಾವಿರಾರು ರಾಮನ ದೇವಾಲಯಗಳಿವೆ, ತಾಕತ್ತಿದ್ದರೆ ಮುಟ್ಟಲಿಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಮನದಲ್ಲಿ ಬಹಳ ಭಾವನೆಗಳಿವೆ, ಹೇಳೋಕು ಬಹಳ ಇದೆ. ಸಮಯ ಇದಲ್ಲ. ಸದ್ಯಕ್ಕೆ ರಾಷ್ಟ್ರದ ಹಿತಕ್ಕಾಗಿ ಮೋದಿ 3ನೇ ಬಾರಿ ಪ್ರಧಾನಿ ಆಗಬೇಕು ಅಷ್ಟೆ. ಪಕ್ಷ, ರಾಷ್ಟ್ರದ ಹಿತಕ್ಕಾಗಿ ಬಹಳ ವಿಷಯಗಳನ್ನ ನುಂಗಿಕೊಂಡಿದ್ದೇನೆ. ಬಹಳ ದಿನ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗಲ್ಲ, ಸಮಯ ಬರಲಿ ಎಲ್ಲಾ ಹೇಳ್ತೀನಿ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡೋದಾದ್ರು ಲೋಕಸಭಾ ಚುನಾವಣೆ ನಂತರವೇ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾರು ಯಾರು ಹೇಗೆ ನಡೆದುಕೊಂಡ್ರು ಎನ್ನುವುದನ್ನು ಲೋಕಸಭಾ ಚುನಾವಣೆ ನಂತರ ಬಹಳ ವಿಷಯ ಹೇಳಲು ಇದೆ, ಹೇಳ್ತೀನಿ, ಹೇಳಲೇಬೇಕು ಎಂದು ತಮ್ಮ ಸ್ವಪಕ್ಷದವರ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದರು.
ಈಗ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಅದೊಂದೆ ನಮ್ಮ ಮುಂದೆ ಗುರಿ ಇರೋದು, ರಾಜ್ಯದ 28 ಸ್ಥಾನಗಳಲ್ಲೂ ಬಿಜೆಪಿ ಗೆಲ್ಲಬೇಕು, ಅದಕ್ಕೆ ಅಳಿಲು ಸೇವೆ ಮಾಡೋದಷ್ಟೆ ನಮ್ಮ ಸಧ್ಯದ ಕೆಲಸ ಎಂದು ಹೇಳಿದರು.ನಾಯಿ ಕೂಗಿದರೆ: ನಾಯಿ ಕೂಗಿದರೆ ಭೂಲೋಕ ಕೆಟ್ಟು ಹೋಗುತ್ತಾ, ಇವರು ಭಾರತ ದೇಶದ ಜನರ ಶ್ರದ್ಧೆಯನ್ನ ನಾಶ ಮಾಡಬೇಕು ಎಂದು ಬಯಸೋರು ಎಂದು ಸಿ.ಟಿ. ರವಿ ಟೀಕಿಸಿದರು.
ರಾಮ ದೇವರಲ್ಲ, ಭಾರತ ದೇಶವಲ್ಲ ಎಂದು ಸಂಸದ ಎ. ರಾಜ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹೀಗೇ ಬಯಸೋರೆಲ್ಲಾ ನಾಶವಾಗಿ ಹೋಗಿದ್ದಾರೆ, ಎಲ್ಲಿ ನಿನ್ನ ಹರಿ ಎಂದ ಹಿರಣ್ಯ ಕಶ್ಯಪನ ಮನೆಯಲ್ಲೇ ಪ್ರಹ್ಲಾದ ಹುಟ್ಟಿದ್ದ. ಎ.ರಾಜ ಅವರ ಮನೆಯಲ್ಲೇ ರಾಮಭಕ್ತ ಹುಟ್ಟುತ್ತಾನೆ ಎಂದು ನುಡಿದರು.ತಮಿಳುನಾಡಲ್ಲಿ ಸಾವಿರಾರು ರಾಮನ ದೇವಾಲಯಗಳಿವೆ, ತಾಕತ್ತಿದ್ದರೆ ಮುಟ್ಟಲಿ ಎಂದು ಸವಾಲು ಹಾಕಿದ ಸಿ.ಟಿ. ರವಿ, ರಾಮೇಶ್ವರದಲ್ಲಿ ರಾಮನೇ ಪೂಜೆ ಮಾಡಿದ ಈಶ್ವರನಿದ್ದಾನೆ. ಇವರಿಗೆ ರಾಮನ ದೇವಾಲಯದ ಹುಂಡಿ ಬೇಕು, ಶ್ರೀ ರಾಮ ಬೇಡಾ, ರಾಮನ ದೇವಸ್ಥಾನದ ಮುಂದೆ ಹುಂಡಿ ಇಟ್ಕೊಂಡು ಹಣ ತಿಂತಾರೆ ನಾಚಿಕೆ ಆಗಲ್ವಾ ಇವರಿಗೆ ಎಂದು ಕಿಡಿಕಾರಿದರು.
ಇಂತವರಲ್ಲಿ ಆಕಾಶಕ್ಕೆ ಉಗಿದು, ಮೈಮೇಲೆ ಬೀಳಿಸಿಕೊಂಡವರಿದ್ದಾರೆ. ರಾಮನನ್ನ ಟೀಕೆ ಮಾಡೋದು ಆಕಾಶಕ್ಕೆ ಉಗಿದಂತೆ, ಅದು ಅವರ ಮುಖಕ್ಕೆ ಬೀಳೋದು ಎಂದು ಹೇಳಿದರು.