ಸಾರಾಂಶ
ಗೋಕರ್ಣ: ವೇದಾಧ್ಯಯನ ಪರಂಪರೆ ಬೆಳೆಯಬೇಕು. ನಿಷ್ಕಾರಣವಾಗಿ, ಫಲಾಪೇಕ್ಷೆ ಇಲ್ಲದೇ ಅಧ್ಯಯನ ಮಾಡಬೇಕು ಎಂದು ರಾಘವೇಶ್ವರ ಭಾರತೀ ಶ್ರೀ ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು ೫೮ನೇ ದಿನವಾದ ಶುಕ್ರವಾರ ಬೆಂಗಳೂರಿನ ಹರ್ಷಕೃಷ್ಣ ಭಟ್ಟ ದಂಪತಿಗಳಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.ನಮ್ಮ ಶಿವಗುರುಕುಲದಲ್ಲೇ ಘನಪಾಠಿಗಳು ತಯಾರಾಗಬೇಕು. ಆಗ ಗುರುಕುಲ ಸ್ಥಾಪನೆಯ ಉದ್ದೇಶ ಸಾಕಾರವಾಗುತ್ತದೆ. ಸಮಾಜ ಇದರ ಮಹತ್ವ ಅರಿತು ಅಧ್ಯಯನಾರ್ಥವಾಗಿ ಮಕ್ಕಳನ್ನು ಕಳುಹಿಸಿಕೊಡಬೇಕು. ಮುಂದೊಂದು ದಿನ ಸಮಾಜದಲ್ಲಿ ಈ ವರ್ಗಕ್ಕೆ ದೊಡ್ಡ ಮಹತ್ವ ಬರುತ್ತದೆ ಎಂದು ಭವಿಷ್ಯ ನುಡಿದರು. ಅಗ್ನಿಹೋತ್ರ, ಶ್ರೌತಯಜ್ಞಗಳ ಗತವೈಭವ ಅಶೋಕೆಯಲ್ಲಿ ಮರುಕಳಿಸಬೇಕು ಎಂದು ಆಶಿಸಿದರು.
ಚಾತುರ್ಮಾಸ್ಯ ನಿರೀಕ್ಷೆಗೂ ಮೀರಿ ಉತ್ತಮವಾಗಿ ಮುಕ್ತಾಯಗೊಳ್ಳುತ್ತಿದೆ ಎನ್ನುವುದು ಸಮಾಧಾನ ತಂದಿದೆ. ಇದು ಬದುಕಿನ ಪ್ರತೀಕ. ಜೀವನ, ಬದುಕು ಮುಗಿಯುವ ವ್ಯಥೆಗಿಂತ ಬದುಕು ಚೆನ್ನಾಗಿ ಆಗಿದೆ ಎಂಬ ಸಮಾಧಾನಪಟ್ಟುಕೊಳ್ಳಬೇಕು. ಜೀವನದಲ್ಲಿ ಹಿಂದೆ ತಿರುಗಿ ನೋಡಿದಾಗ ಸಮಾಧಾನವಾಗುವಂತೆ ಬಾಳ್ವೆ ನಡೆಸಬೇಕು. ಜೀವನದಲ್ಲಿ ಸತ್ಯಾರ್ಯಗಳನ್ನು ಮಾಡಿದಾಗ ಆತ ಮೃತ್ಯುವನ್ನು ಅತಿಥಿಗಳಂತೆ ಸ್ವಾಗತಿಸುತ್ತಾನೆ. ಸಾವಿಗೆ ಅಂಜುವುದಿಲ್ಲ ಎಂದು ಬಣ್ಣಿಸಿದರು.ನಾಲ್ಕು ವೇದಗಳ ಸ್ವಾಹಾಕಾರ ಯಥೋಚಿತವಾಗಿ ನಡೆದಿದೆ. ಋಗ್ವೇದ, ಸಾಮವೇದ ಪಾರಾಯಣ, ಯಜುರ್ವೇದ ಘನ ಪಾರಾಯಣ ಸಂಪನ್ನಗೊಂಡಿದೆ. ಸಮಾಜ ವೇದಗಳನ್ನು ಮರೆತಿದೆ. ಘನವಿದ್ವಾಂಸರನ್ನು ಗುರುತಿಸುವ ಶಕ್ತಿಯೂ ಸಮಾಜಕ್ಕೆ ಇಲ್ಲದಾಗಿದೆ. ಮುಂದಿನ ಯುಗಕ್ಕೆ ವೈದಿಕ ಪರಂಪರೆಯ ಬೀಜಗಳು. ಇಂಥವರು ಸಮೃದ್ಧವಾಗಿ ಬೆಳೆಯಬೇಕು. ಪುನರುತ್ಥಾನಕ್ಕೆ ಸಮಾಜ ಪಣ ತೊಡಬೇಕು ಎಂದು ಕರೆ ನೀಡಿದರು.ಹವ್ಯಕ ಪರಂಪರೆ ಕ್ಷೀಣಿಸಬಾರದು ಎಂದಾದರೆ ಸಮಾಜ ಬಾಂಧವರು ಕುಲವೃದ್ಧಿಗೆ ಶ್ರಮಿಸಬೇಕು. ಮಕ್ಕಳನ್ನು ಪಡೆದುಕೊಳ್ಳಲು ನಾಚಿಕೆಪಡಬೇಕಿಲ್ಲ. ಮಕ್ಕಳು ಭವಿಷ್ಯದ ಸಂಪತ್ತು ಎಂದು ಬಣ್ಣಿಸಿದರು.
ನಾವು ನಾವಾಗಿ ಬಾಳಬೇಕು ಎನ್ನುವುದು ಸ್ವಭಾಷಾ ಚಾತುರ್ಮಾಸ್ಯದ ಆಶಯ. ಸಂಕರದಿAದ ವಿನಾಶ ಎದುರಾಗುತ್ತದೆ. ಇದಕ್ಕೆ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕು ಎಂದರು.ದಿನಕ್ಕೊಂದು ಆಂಗ್ಲಪದ ತ್ಯಾಗ ಅಭಿಯಾನದಲ್ಲಿ ಐಡಿಯಾ ಪದ ಕೈಬಿಡುವಂತೆ ಕರೆ ನೀಡಿದರು. ಉಪಾಯ, ಹೊಳಹು, ವಿಚಾರ, ಕಲ್ಪನೆ, ಎಣಿಕೆ, ಆಲೋಚನೆ ಹೀಗೆ ಕನ್ನಡದಲ್ಲೇ ಇದಕ್ಕೆ ಪರ್ಯಾಯ ಪದಗಳು ಹೇರಳವಾಗಿವೆ ಎಂದು ಉದಾಹರಣೆ ನೀಡಿದರು.
ಘನಪಾರಾಯಣ ಬಗ್ಗೆ ಮಾತನಾಡಿದ ಶ್ರೀಮಠದ ಶಾಸ್ತ್ರಿಗಳಾದ ಸುಚೇತನ ಘನಪಾಠಿಗಳು, "ಋಷಿಮುನಿಗಳು ಕಂಡುಕೊಂಡ ವಿವಿಧ ಸಿದ್ಧಿಮಾರ್ಗಗಳಲ್ಲಿ ವೇದ ಪಾರಾಯಣವೂ ಒಂದು. ಇದರಿಂದ ವಿಶೇಷ ಫಲ ಪಡೆಯಬಹುದು. ಪದ, ಕ್ರಮ ಜಟ, ಘನ ಪಾಠಗಳು ಪ್ರಸಿದ್ಧ. ಒಂದು ಘನ ಪಾರಾಯಣಕ್ಕೆ ೨೦೦ ಗಂಟೆಗಳ ಅವಧಿ ಬೇಕು. ೩೦ ದಿನಗಳ ಪಾರಾಯಣ ಅಪರೂಪ. ಆದ್ದರಿಂದ ತಲಾ ೧೧ ಪ್ರಶ್ನಗಳ ಪಾರಾಯಣ ನಾಲ್ಕು ವರ್ಷ ನಡೆಯುತ್ತಿದೆ. ಈ ಪೈಕಿ ಎರಡನೇ ಆವೃತ್ತಿ ಇಂದು ಪೂರ್ಣಗೊಂಡಿದೆ " ಎಂದು ವಿವರಿಸಿದರು.ಆ.೨೮ರಿಂದ ನಡೆಯುತ್ತಿರುವ ಕೃಷ್ಣ ಯಜುರ್ವೇದ ಘನ ಪಾರಾಯಣ ಶುಕ್ರವಾರ ಸಂಪನ್ನವಾಯಿತು. ಸುಚೇತನ ಭಟ್ಟ, ಮಹಾಬಲೇಶ್ವರ ಶಂಕರಲಿಂಗ ಭಟ್ಟ, ರಾಧಾಕೃಷ್ಣ ಭಟ್ಟ, ದತ್ತಾತ್ರೇಯ ಭಟ್ಟ, ಶ್ರೀಹರನ್ ರಾಮನಾಥ ಶರ್ಮಾ, ವಿಘ್ನೇಶ್ ಕೃಷ್ಣನ್ ಶರ್ಮಾ, ಮಂಜುನಾಥ ಭಟ್ಟ ಘನ ಪಾರಾಯಣ ನಡೆಸಿಕೊಟ್ಟರು. ಪ್ರದೋಷರುದ್ರ ಪರಣ ನಡೆಯಿತು.
ಅಶೋಕ ಲೋಕದ ವ್ಯವಸ್ಥಾ ಪರಿಷತ್ ಅಧ್ಯಕ್ಷರಾಗಿ ಶ್ರೀಕಾಂತ ಪಂಡಿತ್, ನಿರ್ಮಿತಿ ಪರಿಷತ್ ಅಧ್ಯಕ್ಷರಾಗಿ ವಿನಾಯಕ ಹೆಗಡೆಕಟ್ಟಾ, ವಿದ್ಯಾ ಪರಿಷತ್ ಅಧ್ಯಕ್ಷರಾಗಿ ಜಿ.ಎಲ್.ಹೆಗಡೆ ನಿಯುಕ್ತಿಗೊಂಡರು. ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಭಟ್, ಧಾರವಾಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಅಕ್ಕಿ ಶ್ರೀಗಳ ದರ್ಶನಾಶೀರ್ವಾದ ಪಡೆದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜೆ.ಪ್ರಸನ್ನಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಪಿ.ಆರ್.ಓ ಎಂ.ಎನ್.ಮಹೇಶ ಹೆಗಡೆ, ಚಾತುರ್ಮಾಸ್ಯ ತಂಡದ ಅರವಿಂದ ಧರ್ಬೆ, ರಾಘವೇಂದ್ರ, ಅಜಿತ್ ಗುಡಿಗೆ, ನಿಖಿಲ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.