ದೇಶದ ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಲಿ -ಸಚಿವ ಜೋಶಿ

| Published : Aug 10 2025, 01:32 AM IST

ದೇಶದ ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಲಿ -ಸಚಿವ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಪ್ರತಿಯೊಂದು ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಿದರೆ ಮಾತ್ರ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಸಾರ್ಥಕವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ನರಗುಂದ: ದೇಶದ ಪ್ರತಿಯೊಂದು ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಿದರೆ ಮಾತ್ರ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಸಾರ್ಥಕವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ಅವರು ಶನಿವಾರ ಪಟ್ಟಣದ ಪುರಸಭೆ ಎದುರು ಸ್ವಾತಂತ್ರ್ಯ ಹೋರಾಟಗಾರ ವೀರ ಬಾಬಾಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ ಆನಂತರ ಮನೆ ಮನೆಗೆ ತ್ರಿವರ್ಣ ಧ್ವಜ, ಹರ ಘರ ತಿರಂಗಾ ಯಾತ್ರೆ ಅಂಗವಾಗಿ ನಡೆದ ಬೈಕ್‌ ರ್‍ಯಾಲಿಗೆ ಚಾಲನೆ ನೀಡಿ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಹಲವಾರು ರಾಜ ಮಹಾರಾಜರು, ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದಿಂದ ನಮ್ಮ ಭಾರತ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯ ಸಿಕ್ಕು 75 ವರ್ಷ ಆಗಿದ್ದರಿಂದ 2022 ರಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹರ ಘರ ತಿರಂಗಾ (ಮನೆ ಮನೆಗೆ ತ್ರಿವರ್ಣ ಧ್ವಜ) ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈಗ ಪ್ರತಿ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮನೆ ಮನೆಯ ಮೇಲೆ ತಿರಂಗಾ ಹಾರಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಾಡುವ ಹಾಗೆ ಮಾಡಬೇಕೆಂದು ಹೇಳಿದರು.

ದೇಶದ ಜನರು ನರೇಂದ್ರ ಮೋದಿಯವರಿಗೆ ಅಧಿಕಾರ ನೀಡಿದ್ದರಿಂದ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಆಗಿದೆ. ಮೇಲಾಗಿ ಆರ್ಥಿಕ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ಏರುತ್ತಿದ್ದೇವೆ. ಪಾಕಿಸ್ತಾನದ ಭಯೋತ್ಪಾದಕರು ಒಂದು ಗುಂಡು ಹಾಕಿದರೆ ಭಾರತ ದೇಶದ ಸೈನಿಕರು 10 ಗುಂಡು ಹಾರಿಸಲು ನಮ್ಮ ಪ್ರಧಾನಿಗಳಾದ ಮೋದಿಯವರು ಸೈನಿಕರಿಗೆ ಅಧಿಕಾರ ನೀಡಿದ್ದಾರೆ. ಮೇಲಾಗಿ ಪಹಲ್ಗಾಂ ದಾಳಿ ಮಾಡಿದ ಪಾಕಿಸ್ತಾನ ಭಯೋತ್ಪಾದಕರಿಗೆ ಚೇತರಿಸಿಕೊಳ್ಳದ ಹಾಗೆ ನಮ್ಮ ಸೈನಿಕರು 25 ನಿಮಿಷಗಳಲ್ಲಿ ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಗೊಬ್ಬರ ತಲುಪಿಸಲು ವಿಫಲ ರಾಜ್ಯದ ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರ ಅವಶ್ಯವಿರುವಷ್ಟು ಗೊಬ್ಬರ ನೀಡಿದರೂ ಸಹ ರಾಜ್ಯ ಸರ್ಕಾರ ಯೂರಿಯಾ ಗೊಬ್ಬರವನ್ನು ಸರಿಯಾಗಿ ರೈತರಿಗೆ ತಲುಪಿಸಲು ವಿಫಲವಾಗಿದೆ ಎಂದು ಗಂಭೀರವಾದ ಆರೋಪ ಮಾಡಿದರು.

2026ರ ಮಾರ್ಚ್‌ ತಿಂಗಳೊಳಗೆ ಭಾರತ ನಕ್ಸಲು ಮುಕ್ತ ದೇಶವಾಗುವುದರಲ್ಲಿ ಯಾವುದೇ ಸಂದೇಹವಿಲ್ಲವೆಂದು ಹೇಳಿದರು.

ಅಮೆರಿಕಾ ಅಧ್ಯಕ್ಷ ಟ್ರಂಪ್‌ ಹೇಳಿದ ಹಾಗೆ ಪ್ರಧಾನಿ ಮೋದಿ, ಕೃಷಿಗೆ ಸಂಬಂಧಪಟ್ಟ ಕೆಲವು ಯೋಜನೆಗಳಿಗೆ ಸಹಿ ಮಾಡದ್ದರಿಂದ ಇಂದು ಭಾರತದ ವಸ್ತುಗಳಿಗೆ ಶೇ. 50ರಷ್ಟು ಸುಂಕ ವಿಧಿಸಿದ್ದಾರೆ. ಆದರೆ ನಮ್ಮ ಪ್ರಧಾನಿಗಳು ಭಾರತದ ರೈತರ ಹಿತ ಬಲಿ ಕೊಡುವುದಿಲ್ಲ, ಬೇಕಾದರೆ ನಾವು ಅದರಿಂದ ಯಾವುದೇ ತೊಂದರೆ ಬಂದರೂ ಎದುರಿಸಲು ಸಿದ್ಧವೆಂದು ಅಮೆರಿಕಾ ಅಧ್ಯಕ್ಷರಿಗೆ ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಮತಗಳ್ಳತನ ಸುಳ್ಳು: ರಾಜ್ಯದಲ್ಲಿ ಇಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಮತ ಯಂತ್ರಗಳ ಮೂಲಕ ಬಿಜೆಪಿಯವರು ಮತ ಕದ್ದು ಅಧಿಕಾರಕ್ಕೆ ಬಂದಿದ್ದಾರೆಂದು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದದ್ದು ಎಂದರು.

ರಾಹುಲ್ ಗಾಂಧಿಯವರು ಚುನಾವಣೆ ಮುಗಿದು 2 ವರ್ಷದ ನಂತರ ಮತಗಳ್ಳತನ ಹೋರಾಟ ಮಾಡುತ್ತಿದ್ದಾರೆ. ಆದರೆ ನಮ್ಮ ಸಂವಿಧಾನದ ಕಾನೂನು ಪ್ರಕಾರ ಚುನಾವಣೆ ನಡೆದ 45 ದಿನದೊಳಗೆ ಏನಾದರು ತಕರಾರು ಇದ್ದರೆ ಚುನಾವಣೆ ಆಯೋಗಕ್ಕೆ ಪತ್ರ ಬರೆಯಲು ಅವಕಾಶವಿದೆ ಎನ್ನುವುದು ಈ ರಾಹುಲ್ ಗಾಂಧಿಯವರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನೆ ಮಾಡಿದರು. ಮಾಜಿ ಸಿಎಂ ಹಾಗೂ ಗದಗ ಹಾವೇರಿ ಲೋಕಸಭೆ ಸಂಸದ ಬಸವರಾಜ ಬೊಮ್ಮಯಿ ಮಾತನಾಡಿ, ಸ್ವಾತಂತ್ರ್ಯ ಹೋರಾಟ ಮತ್ತು ರೈತ ಬಂಡಾಯ ನಾಡಿನಿಂದ ದೇಶದಲ್ಲಿ ಮೊದಲು ಮನೆ ಮನೆಗೆ ತ್ರಿವರ್ಣ ಧ್ವಜ ಹಾಗೂ ಹರ ಘರ ತಿರಂಗಾ ಕಾರ್ಯಕ್ರಮ ಪ್ರಾರಂಭ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ನಾವು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದೇವೆ, ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ನೆನಪಿಗಾಗಿ ಪ್ರತಿಯೊಂದು ಕುಟುಂಬದ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಬೇಕೆಂದು ಹೇಳಿದರು.

ಅಮೆರಿಕಾ ಅಧ್ಯಕ್ಷ ಟ್ರಂಪ್‌ಗೆ ಭಾರತದ ಅಭಿವೃದ್ಧಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅವರು ಮೈಯಲ್ಲಿ ಗಾಳಿ ಬಂದವರ ರೀತಿ ನಿತ್ಯ ಭಾರತ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆಂದು ಹಾಸ್ಯ ಚಟಾಕಿ ಹಾರಿಸಿದರು.

ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಹರ ಘರ ತಿರಂಗಾ ಯಾತ್ರೆ ಕಾರ್ಯಕ್ರಮವನ್ನು ರೈತ ಬಂಡಾಯದ ನಾಡಿನ ಮೂಲಕ ಪ್ರಾರಂಭ ಮಾಡಿದ್ದು ಹರ್ಷ ತಂದಿದೆ. ಭಾರತ ದೇಶ ಇಂದು ಆರ್ಥಿಕ ಕ್ಷೇತ್ರದಲ್ಲಿ ಅತೀ ವೇಗವಾಗಿ ಬೆಳೆಯುತ್ತಿದೆ. ಆದ್ದರಿಂದ ಈ ದೇಶದ ಪ್ರತಿಯೊಬ್ಬ ಯುವಕರಲ್ಲಿ ದೇಶ ಪ್ರೇಮ ಮೂಡಬೇಕೆಂದು ಕರೆ ನೀಡಿದರು.

ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಡಾ. ಚಂದ್ರು ಲಮಾಣಿ ವರು ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ನೀಲವ್ವ ವಡ್ಡಿಗೇರಿ, ವಿಧಾನ ಪರಿಷತ್‌ ಸದಸ್ಯ ಎಸ್.ಬಿ. ಸಂಕನೂರ, ಮಾಜಿ ಶಾಸಕ ಶಿವರಾಜ ಸಜ್ಜನರ, ಶರಣ ತಳ್ಳಿಕೇರಿ, ರಾಜಣ್ಣ ಕುರಡಗಿ, ಭರತ ಬೊಮ್ಮಾಯಿ, ವಿರೂಪಾಕ್ಷಪ್ಪ ಬಳ್ಳಾರಿ, ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತ್ತಿಗಟ್ಟಿ, ನಾಗನಗೌಡ ತಿಮ್ಮನಗೌಡ್ರ, ಬಿ.ಬಿ. ಐನಾಪುರ, ರವಿ ದಂಡಿನ, ಪ್ರಕಾಶಗೌಡ ತಿರಕನಗೌಡ್ರ, ಬಾಬುಗೌಡ ತಿಮ್ಮನಗೌಡ್ರ, ಶೋಭಾ ನಿಸ್ಸೀಮಗೌಡ, ಮುತ್ತು ರಾಯರಡ್ಡಿ, ಎಸ್.ಆರ್. ಪಾಟೀಲ, ಚಂದ್ರಶೇಖರ ದಂಡಿನ, ಮಲ್ಲಪ್ಪ ಮೇಟಿ, ನರಗುಂದ, ಹೊಳೆಆಲೂರ, ಲಕ್ಕಂಡಿ ಭಾಗದ ಬಿಜೆಪಿ ಬ್ಲಾಕ್ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.