ಸಾರಾಂಶ
ತೆರಿಗೆ ವಂಚನೆ ಆರೋಪದ ಮೇಲೆ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಅವರಿಗೆ ಸೇರಿದ ಒಡಿಶಾದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ ವೇಳೆ ₹320 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿದೆ. ಇನ್ನು ಹಣ ಎಣಿಕೆ ಮಾಡಲಾಗುತ್ತಿದೆ. ಈ ದಾಳಿಯಲ್ಲಿ ದೊರೆತ ಹಣ ಕಾಂಗ್ರೆಸ್‌ನ ಭ್ರಷ್ಟಾಚಾರ ನಡೆಸಿದ ಹಣವಾಗಿದ್ದು, ದೇಶದ ಸಂಪತ್ತನ್ನು ಲೂಟಿಗೈದ ಕಾಂಗ್ರೆಸ್ ನಾಯಕರು ಮುಖ ಬಯಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು
ಕನ್ನಡಪ್ರಭ ವಾರ್ತೆ ಬಳ್ಳಾರಿ
ಜಾರ್ಖಂಡ್ ನ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ, ದಾಳಿ ವೇಳೆ ಬಳಿ ನೂರಾರು ಕೋಟಿ ರು. ಭ್ರಷ್ಟಾಚಾರದ ಹಣ ಪತ್ತೆಯಾಗಿರುವುದನ್ನು ಖಂಡಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ತೆರಿಗೆ ವಂಚನೆ ಆರೋಪದ ಮೇಲೆ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಅವರಿಗೆ ಸೇರಿದ ಒಡಿಶಾದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ ವೇಳೆ ₹320 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿದೆ. ಇನ್ನು ಹಣ ಎಣಿಕೆ ಮಾಡಲಾಗುತ್ತಿದೆ. ಈ ದಾಳಿಯಲ್ಲಿ ದೊರೆತ ಹಣ ಕಾಂಗ್ರೆಸ್‌ನ ಭ್ರಷ್ಟಾಚಾರ ನಡೆಸಿದ ಹಣವಾಗಿದ್ದು, ದೇಶದ ಸಂಪತ್ತನ್ನು ಲೂಟಿಗೈದ ಕಾಂಗ್ರೆಸ್ ನಾಯಕರು ಮುಖ ಬಯಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಹಿರಿಯ ಮುಖಂಡರಾದ ಎಸ್. ಗುರುಲಿಂಗನಗೌಡ ಹಾಗೂ ಗುತ್ತಿಗನೂರು ವಿರುಪಾಕ್ಷಗೌಡ ಮಾತನಾಡಿ, ಕಾಂಗ್ರೆಸ್ ಸಂಸದನ ಮೇಲೆ ದಾಳಿ ನಡೆಸಿದ ವೇಳೆ ಸಿಕ್ಕ ಹಣವನ್ನು ಮೂರು ದಿನಗಳಾದರೂ ಎಣಿಸಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಕಾಂಗ್ರೆಸ್ ನಾಯಕರು ಭ್ರಷ್ಟಚಾರದ ಹಣ ಸಂಪಾದಿಸಿದ್ದಾರೆ. ಓರ್ವ ಸಂಸದನ ಮನೆಯಲ್ಲಿಯೇ ಇಷ್ಟೊಂದು ಪ್ರಮಾಣದ ಹಣವಿದೆ ಎಂದಾದರೆ, ಇನ್ನು ಆ ಪಕ್ಷದ ರಾಜಮಾತೆ, ಮಗ ಹಾಗೂ ಅಳಿಯ ಮನೆಯಲ್ಲಿ ಎಷ್ಟರ ಮಟ್ಟಿಗೆ ಹಣ ಇರಬಹುದು ಎಂದು ಪ್ರಶ್ನಿಸಿದರಲ್ಲದೆ, ಆದಾಯ ತೆರಿಗೆ ಅಧಿಕಾ಼ರಿಗಳು ಕಾಂಗ್ರೆಸ್‌ನ ಎಲ್ಲ ಹಿರಿಯ ನಾಯಕರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಿ. ಈ ಮೂಲಕ ಕಾಂಗ್ರೆಸ್ ನಿಜಬಣ್ಣ ಬಯಲು ಮಾಡಲಿ ಎಂದು ಆಗ್ರಹಿಸಿದರು.ಇಲ್ಲಿನ ಗಡಗಿ ಚೆನ್ನಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಹಾಗೂ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ದೇಶದ ವಿವಿಧೆಡೆಗಳಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಹಣದಲ್ಲಿ ಅಧಿಕಾರ ನಡೆಸುತ್ತಿದೆ ಎಂದು ದೂರಿದರು.
ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಸುಗಣ, ಬಿಜೆಪಿ ನಗರ ಘಟಕ ಅಧ್ಯಕ್ಷ ಕೆ.ಬಿ. ವೆಂಕಟೇಶ್ವರ, ಪಾಲಿಕೆ ಸದಸ್ಯ ಗುಡಿಗಂಟಿ ಹನುಮಂತು, ಅನಿಲ್‌ನಾಯ್ಡು, ಬಿ. ಹನುಮಂತಪ್ಪ, ಶಿವಶಂಕರ ರೆಡ್ಡಿ ಎಚ್. ವೀರಾಪುರ ಸೇರಿದಂತೆ ಪಕ್ಷದ ಜಿಲ್ಲಾ ಪ್ರಮುಖರು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 11 ಬಿಆರ್‌ವೈ 1ಬಳ್ಳಾರಿಯ ಗಡಗಿ ಚೆನ್ನಪ್ಪ ವೃತ್ತದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.