ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದ ಅಡಿ ಬದುಕುತ್ತಿರುವ ನಾವೆಲ್ಲರೂ ಜಾತಿರಹಿತ, ವರ್ಗರಹಿತ ಮತ್ತು ಸಮ ಸಮಾಜ ಕಟ್ಟುವ ಅಂತಿಮ ಗುರಿ ಹೊಂದಬೇಕು. ದೇಶದ ಅಭಿವೃದ್ಧಿಗಾಗಿ ಅಂಬೇಡ್ಕರ್ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಡಾ.ಅಂಬೇಡ್ಕರ್ 134ನೇ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಾನ್ನಿಧ್ಯ ವಹಿಸಿದ ಹುಣಸಿಕೊಳ್ಳಮಠದ ಸಿದ್ಧಬಸವ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವ ಬೆಸೆಯುವ ದಿಸೆಯಲ್ಲಿ ಅಂಬೇಡ್ಕರರು ಸಾಮಾಜಿಕ ಅನಿಷ್ಠತೆ ಎನಿಸಿರುವ ಶ್ರೇಣಿಕೃತ ಜಾತಿ ವ್ಯವಸ್ಥೆ ಕಟುವಾಗಿ ವಿರೋಧಿಸಿದ್ದರು. ಮಹಿಳೆಯರ ಸಮಾನತೆ, ಮೀಸಲಾತಿಗೂ ಹೋರಾಟ ನಡೆಸಿದ್ದರು ಎಂದರು.
ಮುಖ್ಯ ಅತಿಥಿ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ನಿರ್ದೇಶಕ ಸುರೇಶ ತಳವಾರ ಮಾತನಾಡಿ, ಶೋಷಿತ ಸಮುದಾಯಗಳು ಸಮಾಜದ ಮುಂಚೂಣಿಯಲ್ಲಿ ಬರಬೇಕಿದೆ. ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬರೂ ಅಂಬೇಡ್ಕರ್ ತತ್ವ-ಸಿದ್ಧಾಂತಗಳನ್ನು ಅನುಸರಿಸಿ ಅವರ ವಿಚಾರಧಾರೆಗಳನ್ನು ಪರಿಣಾಮಕಾರಿಯಾಗಿ ಪ್ರಚಾರಗೊಳಿಸಬೇಕಿದೆ ಎಂದರು.ಗ್ರಾಪಂ ಅಧ್ಯಕ್ಷೆ ಅನಿತಾ ಮೈಲಾಖೆ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಸುಬ್ರಾವ ಎಂಟೆತ್ತಿನವರ, ಸಂತೋಷ ದೊಡಮನಿ ಉಪನ್ಯಾಸ ನೀಡಿದರು. ಇದೇ ವೇಳೆ ಎಸ್‌ಸಿ ಕಾಲೋನಿ ಸಮುದಾಯ ಭವನ ಬಳಿ ಗ್ರಾಪಂ 15ನೇ ಹಣಕಾಸು ಆಯೋಗ ಯೋಜನೆಯಡಿ ಅಳವಡಿಸಿದ ಹೈಮಾಸ್ಕ್ ವಿದ್ಯುತ್ ದೀಪ ಉದ್ಘಾಟಿಸಲಾಯಿತು. ಗ್ರಾಪಂ ಸದಸ್ಯೆ ಸಹದೇವಿ ತಳವಾರ, ಮುಖಂಡರಾದ ಕಲಗೌಡ ಪಾಟೀಲ, ಗುರು ಕುಲಕರ್ಣಿ, ಸತ್ಯಪ್ಪಾ ನಾಯಿಕ, ಸುರೇಶ ತಳವಾರ, ಬಸವರಾಜ ಖಡಕಬಾವಿ, ಗುರಪ್ಪಾ ತಳವಾರ, ಡಿ.ಶ್ರೀಕಾಂತ, ಬಸವರಾಜ ತಳವಾರ, ಯಮನಪ್ಪ ಸಣ್ಣರಾಮಗೋಳ, ರಮೇಶ ತಳವಾರ, ಭೀಮಸೇನ ತಳವಾರ, ನಿಂಗಪ್ಪಾ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ರಾಜು ತಳವಾರ ಸ್ವಾಗತಿಸಿದರು. ಎಸ್.ವೈ.ಸೋನ್ಯಾಗೋಳ ನಿರೂಪಿಸಿದರು. ಜಯಂತಿ ನಿಮಿತ್ತ ಡ್ಯಾನ್ಸ್, ಭಾಷಣ, ಪ್ರಬಂಧ, ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಂಜೆ ನಡೆದ ಹಾಸ್ಯ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.