ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು ಶೈಕ್ಷಣಿಕವಾಗಿ ಮುಂದೆ ಬಂದಾಗ ಉನ್ನತ ಸಮುದಾಯದವರು ಸಂಭ್ರಮಿಸಬೇಕು ಹಾಗೂ ಗೌರವಿಸಬೇಕು. ಕೆಳಗಿನ ಜನಾಂಗದವರನ್ನು ಮೇಲಿನವರು ಮೇಲೆತ್ತಿದಾಗ ಮಾತ್ರ ಸಮಸಮಾಜವನ್ನು ಸ್ಥಾಪಿಸಲು ಸಾಧ್ಯ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಆಗಲೇ ಹೇಳಿದ್ದಾರೆ. ಆದರೆ ಇಂತಹ ಕಾರ್ಯ ಕರ್ನಾಟಕದಲ್ಲಿ ಯಾರು ಕೂಡ ಸಮರ್ಪಕವಾಗಿ ಮಾಡುತ್ತಿಲ್ಲ ಎಂಬುದು ನೋವಿನ ಸಂಗತಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎ.ಬಿ. ರಾಮಚಂದ್ರ ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು ಶೈಕ್ಷಣಿಕವಾಗಿ ಮುಂದೆ ಬಂದಾಗ ಉನ್ನತ ಸಮುದಾಯದವರು ಸಂಭ್ರಮಿಸಬೇಕು ಹಾಗೂ ಗೌರವಿಸಬೇಕು. ಕೆಳಗಿನ ಜನಾಂಗದವರನ್ನು ಮೇಲಿನವರು ಮೇಲೆತ್ತಿದಾಗ ಮಾತ್ರ ಸಮಸಮಾಜವನ್ನು ಸ್ಥಾಪಿಸಲು ಸಾಧ್ಯ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಆಗಲೇ ಹೇಳಿದ್ದಾರೆ. ಆದರೆ ಇಂತಹ ಕಾರ್ಯ ಕರ್ನಾಟಕದಲ್ಲಿ ಯಾರು ಕೂಡ ಸಮರ್ಪಕವಾಗಿ ಮಾಡುತ್ತಿಲ್ಲ ಎಂಬುದು ನೋವಿನ ಸಂಗತಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎ.ಬಿ. ರಾಮಚಂದ್ರ ಬೇಸರ ವ್ಯಕ್ತಪಡಿಸಿದರು.ನಗರದ ಮಹಾರಾಜ ಪಾರ್ಕ್ ರಸ್ತೆ, ಕೃಷ್ಣರಾಜ ಒಡೆಯರ ಸ್ಮಾರಕ ಆವರಣದಲ್ಲಿ ಕರ್ನಾಟಕ ಪ್ರತಿಭಾ ಅಕಾಡೆಮಿ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಸಾಮಾಜಿಕ ನೋವನ್ನು ಅರ್ಥ ಮಾಡಿಕೊಂಡು ಪ್ರತಿಭಾ ಅಕಾಡೆಮಿ ಎಲ್ಲಾ ಸಮುದಾಯಗಳ ಮಕ್ಕಳಿಗೆ ಪುರಸ್ಕಾರ ನೀಡುತ್ತಿರುವುದು ನಿಜಕ್ಕೂ ಜಾತ್ಯಾತೀತ ಮತ್ತು ಮಾನವೀಯ ವೇದಿಕೆಯಾಗಿದ್ದು, ತಮ್ಮಗೆ ತಿಳಿದ ಮಟ್ಟಿಗೆ ಕರ್ನಾಟಕದಲ್ಲಿ ಇಂತಹ ಮತ್ತೊಂದು ವೇದಿಕೆ ಇಲ್ಲ ಎಂದು ಶ್ಲಾಘಿಸಿದರು. ನಾನು ವಾಸ್ತವವಾಗಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕನಾಗಿದ್ದು, ಈ ವೇದಿಕೆಯನ್ನು ಸತೀಶ್ ಜಾರಕಿಹೊಳಿ ಅವರು ಹುಟ್ಟು ಹಾಕಿದ್ದಾರೆ ಎಂದು ತಿಳಿಸಿದ ರಾಮಚಂದ್ರ, ಮಾನವ ಬಂಧುತ್ವ ವೇದಿಕೆಯ ಪರಿಕಲ್ಪನೆಯೇ ಎಲ್ಲಾ ಸಮುದಾಯಗಳ ಜನರು ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಹಾಗೂ ಉದ್ಯೋಗಿಕವಾಗಿ ಅಭಿವೃದ್ಧಿಯಾಗಬೇಕು ಎಂಬ ಮಹತ್ತರ ಕನಸ್ಸಾಗಿದೆ ಎಂದರು.
ರಾಜಕೀಯಕ್ಕಾಗಿ ಭಾಷಣ ಮಾಡುವುದೊಂದು ವಿಷಯವಾದರೆ, ಜನಮುಖಿ ಕಾರ್ಯಗಳನ್ನು ಮಾಡುವುದು ಸುಲಭದ ಕೆಲಸವಲ್ಲ. ಸತೀಶ್ ಜಾರಕಿಹೊಳಿ ಅವರು ಈ ಮೂಲಕ ಎಲ್ಲಾ ವರ್ಗದ ಜನರಿಗೆ ಉದ್ಯೋಗ ತರಬೇತಿ ನೀಡುವುದು, ಐಎಎಸ್, ಕೆಎಎಸ್, ಪಿಡಿಒ ತರಗತಿಗಳ ಜೊತೆಗೆ ವಸತಿ ಮತ್ತು ಊಟದ ಸಂಪೂರ್ಣ ವ್ಯವಸ್ಥೆ ಕಲ್ಪಿಸುವಂತಹ ದೊಡ್ಡ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ತರಬೇತಿಗಾಗಿ ಕರ್ನಾಟಕದಲ್ಲಿ ಐದು-ಆರು ತರಬೇತಿ ಸಂಸ್ಥೆಗಳನ್ನು ಆರಂಭಿಸಲಾಗಿದ್ದು, ಅದರ ಸಂಪೂರ್ಣ ವೆಚ್ಚವನ್ನು ಸತೀಶ್ ಜಾರಕಿಹೊಳಿ ಅವರೇ ಭರಿಸುತ್ತಿದ್ದಾರೆ. ಎಲ್ಲಾ ಜನಾಂಗದವರನ್ನು ಅಭಿವೃದ್ಧಿ ಪಥಕ್ಕೆ ಕರೆತರುವುದು ಅವರ ದೊಡ್ಡ ಕನಸಾಗಿದ್ದು, ಅಂತಹ ಮಹತ್ತರ ಜವಾಬ್ದಾರಿಯನ್ನು ನನಗೆ ವಹಿಸಿರುವುದಾಗಿ ರಾಮಚಂದ್ರ ತಿಳಿಸಿದರು. ಇಂತಹ ಸಮಾಜಮುಖಿ ಆಲೋಚನೆ ಹೊಂದಿರುವ ದೇಶದ ಏಕೈಕ ರಾಜಕಾರಣಿ ಎಂದರೆ ಸತೀಶ್ ಜಾರಕಿಹೊಳಿ ಅವರು ಎಂದೂ ಅವರು ಬಣ್ಣಿಸಿದರು. ಸಮಾಜಮುಖಿ ಸಂಘಟನೆಗಳು ಸಮಾಜದ ಒಟ್ಟಾರೆ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರತಿಭಾ ಅಕಾಡೆಮಿ ಜಿಲ್ಲಾ ಘಟಕದ ಎಸ್.ಎಸ್. ರಂಗಸ್ವಾಮಿ, ಜಿಲ್ಲಾ ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಮಧುನಾಯಕ್, ಜಾಗೃತ ಅಲೆಮಾರಿ ಸಮುದಾಯಗಳ ರಾಜ್ಯ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ವಿ. ಗೋವಿಂದರಾಜು, ಸಿಜಿಎಂ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಶ್ ಉಳುವಾರೆ, ಅಖಿಲ ಕುಳುವ ಮಹಾ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ರಂಗಸ್ವಾಮಿ, ಜಿಲ್ಲಾ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯ ಅಭಿವೃದ್ಧಿ ಸೇವಾ ಸಂಸ್ಥೆಯ ಜಿಲ್ಲಾಧ್ಯಕ್ಷ ಎ.ಎಂ. ಹೂರಾಜ, ಎಂ.ಬಿ.ವಿ. ವಿಭಾಗೀಯ ಸಂಚಾಲಕ ದ್ಯಾವಪ್ಪ ನಾಯಕ್ ಇತರರು ಉಪಸ್ಥಿತರಿದ್ದರು.