ಹಳ್ಳಿಗಳಿಗೆ ಇನ್ನರ್‌ವ್ಹೀಲ್ ಸೌಲಭ್ಯ ದೊರೆಯಲಿ

| Published : Jul 03 2024, 01:23 AM IST

ಸಾರಾಂಶ

ಬಾಳೆಹೊನ್ನೂರಿನಲ್ಲಿ ನಡೆದ ಇನ್ನರ್‌ವ್ಹೀಲ್ ಕ್ಲಬ್ 318ರ ಜಿಲ್ಲಾ ಘಟಕದ ನೂತನ ಜಿಲ್ಲಾ ಚೇರ್ಮನ್ ಆಗಿ ವೈಶಾಲಿ ಕುಡ್ವ ಪದಗ್ರಹಣ ಸ್ವೀಕರಿಸಿದರು. ಸುನೀತಾ ಜೈನ್, ರಾಜಲಕ್ಷ್ಮಿಶೆಟ್ಟಿ ಇದ್ದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ವಿಶ್ವದ ಅತೀ ದೊಡ್ಡ ಮಹಿಳಾ ಸಂಘಟನೆಯಾದ ಇನ್ನರ್‌ವ್ಹೀಲ್ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಗ್ರಾಮೀಣ ಭಾಗಕ್ಕೂ ದೊರೆಯಬೇಕು ಎಂದು ಇನ್ನರ್‌ವ್ಹೀಲ್ ಕ್ಲಬ್‌ನ ಅಸೋಸಿಯೇಟ್ ಅಧ್ಯಕ್ಷೆ ಸುನೀತಾ ಜೈನ್ ಹೇಳಿದರು.

ಇನ್ನರ್‌ವ್ಹೀಲ್ ಕ್ಲಬ್ 318ರ ಜಿಲ್ಲಾ ಘಟಕ ಇತ್ತೀಚೆಗೆ ಆಯೋಜಿಸಿದ್ದ ನೂತನ ಜಿಲ್ಲಾ ಚೇರ್ಮನ್‌ರವರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಿಳೆ ತಮ್ಮ ಸಂಸಾರ ನಿಬಾಯಿಸಿಕೊಂಡು ಸಂಸ್ಥೆಯ ಮೂಲಕ ಸಮಾಜಮುಖಿ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯವಾಗಿದ್ದು, ಇನ್ನರ್‌ವ್ಹೀಲ್ ಸಂಸ್ಥೆಯಿಂದ ನಡೆಯುವ ಸಾಮಾಜಿಕ, ವೈದ್ಯಕೀಯ, ಆರ್ಥಿಕ ಸೇವೆಗಳು ಪ್ರತೀ ಹಳ್ಳಿಗಳಿಗೂ ತಲುಪಬೇಕಿದೆ. ಮಹಿಳೆಯು ಕೇವಲ ಅಡುಗೆ ಮನೆಗೆ ಸೀಮಿತವಾಗದೇ ಎಲ್ಲಾ ಕ್ಷೇತ್ರಗಳಲ್ಲೂ ಸೇವೆ ಮಾಡಬಹುದು ಎಂಬುದನ್ನು ಇನ್ನರ್‌ವ್ಹೀಲ್ ಸಂಸ್ಥೆ ಸಮಾಜಕ್ಕೆ ತೋರಿಸಿಕೊಟ್ಟಿದೆ.

ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಪರಸ್ಪರ ಸ್ನೇಹ, ಸೌಹಾರ್ಧತೆ ಕಲಿಸಿಕೊಡುವುದಲ್ಲದೇ ಮಹಿಳೆಯರನ್ನು ಬಲಿಷ್ಠರಾಗುವಂತೆ ಸಂಸ್ಥೆ ಮಾಡುತ್ತಿದೆ ಎಂದರು.

ನೂತನ ಜಿಲ್ಲಾ ಚೇರ್ಮನ್ ವೈಶಾಲಿ ಕುಡ್ವ ಪದವಿ ಸ್ವೀಕರಿಸಿ ಮಾತನಾಡಿ, ಇನ್ನರ್‌ವ್ಹೀಲ್ ಸಂಸ್ಥೆಯ ಮೂಲಕ ಆರೋಗ್ಯ, ಶಿಕ್ಷಣ, ಕಾನೂನು ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಭಿನ್ನವಾದ ಕಾರ್ಯಕ್ರಮಗಳನ್ನು ನಡೆಸಿ ಸಾಮಾಜಿಕ ಸೇವೆಯ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ರೋಟರಿ ಜಿಲ್ಲೆ 3182ರ ನೂತನ ಗವರ್ನರ್ ಸಿ.ಎ.ದೇವಾನಂದ, ಇನ್ನರ್‌ವ್ಹೀಲ್ ಕ್ಲಬ್‌ನ ಜಿಲ್ಲಾ ಸಮಿತಿಯ ರಾಜಲಕ್ಷ್ಮಿ ಶೆಟ್ಟಿ ಮತ್ತಿತರರು ಹಾಜರಿದ್ದರು.