ಸಾರಾಂಶ
ಪ್ರತಿ ವಿಧಾನಸಭಾ ಕ್ಷೇತ್ರವಾರು ಇವಿಎಂಗಳನ್ನು ಮತ ಎಣಿಕೆ ಕೊಠಡಿಗೆ ತಲುಪಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಸಹಾಯಕ ಚುನಾವಣಾ ಅಧಿಕಾರಿಗಳು ಅವರನ್ನು ಗುರುತಿಸಲು ನಿಗದಿಪಡಿಸಿದ ಬಣ್ಣದ ಟೀ- ಶರ್ಟ್ ಸಹ ನೀಡಲಾಗುವುದು. ನಿಯೋಜಿಸಲಾಗುವ ಸಿಬ್ಬಂದಿ ತಿಳಿಸಲಾಗುವ ಸಮಯಕ್ಕೆ ಎಣಿಕೆ ಕೇಂದ್ರ ಹಾಗೂ ಸ್ಥಳದಲ್ಲಿ ಹಾಜರಾಗಿ ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯು ಜೂ.4ರಂದು ನಡೆಯಲಿದ್ದು, ಮತ ಎಣಿಕೆ ಕೆಲಸ ನಿಖರವಾಗಿರಲಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮತ ಎಣಿಕೆ ತರಬೇತಿ ಕುರಿತಂತೆ ಸಭೆ ನಡೆಸಿ ಮಾತನಾಡಿದರು. 8 ವಿಧಾನಸಭಾ ಕ್ಷೇತ್ರದ ಇವಿಎಂ ಯಂತ್ರಗಳನ್ನು 16 ಕೊಠಡಿಗಳು, ಸ್ಟ್ರಾಂಗ್ ರೂಂನಲ್ಲಿ ಇಡಲಾಗಿದೆ. ಜೂನ್ 4ರಂದು 16 ಸ್ಟ್ರಾಂಗ್ ರೂಂ ಗಳನ್ನು ತೆರೆದು ಎಣಿಕೆ ಪ್ರಾರಂಭಿಸಲಾಗುವುದು ಎಂದರು.
ಇವಿಎಂಗಳನ್ನು ಅಂದು ಬೆಳಗ್ಗೆ 8 ಗಂಟೆಗೆ ಎಣಿಕೆ ಟೇಬಲ್‌ಗಳಿಗೆ ತಲುಪಿಸಲಾಗುವುದು. ಮತ ಎಣಿಕೆಯ ಸಿಬ್ಬಂದಿ ಎಣಿಕೆ ಸಂದರ್ಭದಲ್ಲಿ ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು. ಯಾವುದೇ ಲೋಪವಾಗದಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು.ಸಹಾಯಕ ಚುನಾವಣಾಧಿಕಾರಿಗಳು ಪ್ರತಿ ಸುತ್ತಿನ ಎಣಿಕೆಯನ್ನು ಚುನಾವಣಾ ಆಯೋಗ ತಿಳಿಸುವ ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಬೇಕಿರುತ್ತದೆ. ಇಲ್ಲಿ ತಿದ್ದುಪಡಿಗೆ ಅವಕಾಶ ನೀಡದಂತೆ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರವಾರು ಇವಿಎಂಗಳನ್ನು ಮತ ಎಣಿಕೆ ಕೊಠಡಿಗೆ ತಲುಪಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಸಹಾಯಕ ಚುನಾವಣಾ ಅಧಿಕಾರಿಗಳು ಅವರನ್ನು ಗುರುತಿಸಲು ನಿಗದಿಪಡಿಸಿದ ಬಣ್ಣದ ಟೀ- ಶರ್ಟ್ ಸಹ ನೀಡಲಾಗುವುದು. ನಿಯೋಜಿಸಲಾಗುವ ಸಿಬ್ಬಂದಿ ತಿಳಿಸಲಾಗುವ ಸಮಯಕ್ಕೆ ಎಣಿಕೆ ಕೇಂದ್ರ ಹಾಗೂ ಸ್ಥಳದಲ್ಲಿ ಹಾಜರಾಗಿ ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸಬೇಕು. ಈ ಕುರಿತಂತೆ ಸಹಾಯಕ ಚುನಾವಣಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಿರ್ದೇಶನ ನೀಡಿ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.