ವಚನಗಳು ಕೊರಳ ಧ್ವನಿಯಾಗದೆ, ಜೀವನದ ಭಾಗವಾಗಲಿ

| Published : May 10 2024, 11:50 PM IST

ಸಾರಾಂಶ

ಇವ ನಮ್ಮವ ಇವ ನಮ್ಮವ ಎಂಬ ಸಂದೇಶ ಸಾರಿ, ಅನುಭವ ಮಂಟಪದ ಮೂಲಕ ಸರ್ವಜನಾಂಗದವರನ್ನು ಒಂದೆಡೆ ಸೇರಿಸಿ ಸಮಾನತೆ ಸಾರಿದ್ದಾರೆ

ಕನ್ನಡಪ್ರಭ ವಾರ್ತೆ ಬೀದರ್‌

ವಿಶ್ವಗುರು ಬಸವಣ್ಣನವರು ರಚಿಸಿದ ವಚನಗಳು ಕೇವಲ ಕೊರಳ ಧ್ವನಿಯಾಗದೆ, ಅವುಗಳು ನಮ್ಮ ಜೀವನದ ಭಾಗವಾಗಬೇಕು. ವಚನ ಕೇವಲ ಶೋಕಿಗಾಗಿ ಭಾಷಣಗಳಲ್ಲಿ ಬಳಸದೆ, ಅವುಗಳ ಅರ್ಥ ತಿಳಿದು ಸಂಸ್ಕಾರದಿಂದ ಬದುಕಬೇಕೆಂದು ಶರಣ ಸಾಹಿತಿಗಳು ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಔರಾದ್‌ ತಾಲೂಕು ಅಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ ತಿಳಿಸಿದರು.

ಅವರು ಬೀದರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬ್ರಿಮ್ಸ್‌ ಬೋಧಕ ಆಸ್ಪತ್ರೆ ಹಾಗೂ ಬ್ರಿಮ್ಸ್‌ ಕನ್ನಡ ಸಂಘದ ವತಿಯಿಂದ ಬ್ರಿಮ್ಸ್‌ ಸಭಾಂಗಣದಲ್ಲಿ ಜರುಗಿದ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ 891ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ ಮಾತನಾಡಿದರು.

ಬಸವೇಶ್ವರರು ಸಪ್ತ ಸೂತ್ರಗಳ ಮೂಲಕ ಇಡೀ ಕಾನೂನಿನ ಚೌಕಟ್ಟನ್ನು 1ನೇ ಶತಮಾನದಲ್ಲಿಯೇ ಮಾನವ ಜನಾಂಗಕ್ಕೆ ನೀಡಿದ್ದಾರೆ. ಇವ ನಮ್ಮವ ಇವ ನಮ್ಮವ ಎಂಬ ಸಂದೇಶ ಸಾರಿ, ಅನುಭವ ಮಂಟಪದ ಮೂಲಕ ಸರ್ವಜನಾಂಗದವರನ್ನು ಒಂದೆಡೆ ಸೇರಿಸಿ ಸಮಾನತೆ ಸಾರಿದ್ದಾರೆ. ಕಾಯಕದ ಪರಿಕಲ್ಪನೆ ನೀಡಿದ ಅವರು ಸರ್ವರೂ ಕಾಯಕ ಮಾಡಿ ಬದುಕಬೇಕು. ಜೊತೆಗೆ ದಾಸೋಹ ಪರಿಕಲ್ಪನೆ ಮೂಲಕ ಜನ ಬದುಕಲಿ ಜಗ ಬದುಕಲಿ ಎಂಬ ವಿನೂತನ ಸಂದೇಶ ನೀಡಿದ್ದಾರೆ. ವ್ಯಕ್ತಿ ಸಂಸ್ಕಾರದಿಂದ ಬದುಕಲು, ಮಾನವನ ಆತ್ಮೋದ್ಧಾರಕ್ಕೆ ಬೇಕಾದ ಎಲ್ಲಾ ಅಂಶಗಳನ್ನು ವಚನ ಸಾಹಿತ್ಯದ ಮೂಲಕ ನೀಡಿದ್ದಾರೆ. ಬಸವಣ್ಣನವರ ವಿಚಾರಗಳು ವಿಶ್ವ ಸಂದೇಶಗಳಾಗಿವೆ. ಆದ್ದರಿಂದ ಅವರನ್ನು ವಿಶ್ವಗುರು, ಸಾಂಸ್ಕೃತಿಕ ನಾಯಕ ಎಂದು ಕರೆಯುತ್ತಾರೆ ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮಹೇಶ ಬಿರಾದಾರ ಮಾತನಾಡಿ, 12ನೇ ಶತಮಾನದಲ್ಲಿ ಬಸವೇಶ್ವರರು ಅಂತರ್ವರ್ಣೀಯ ವಿವಾಹ ಮಾಡಿ ಸರ್ವರೂ ಸಮಾನರು ಎಂದು ಸಾರಿದ್ದರು. ದೇವನೊಬ್ಬನೇ ತಂದೆ, ಮನುಜರೆಲ್ಲರೂ ಒಂದೇ ಎನ್ನುವ ವಿಶ್ವಭಾತೃತ್ವದ ಸಂದೇಶ ಸಾರಿ ಜನ ಜನಿತರಾಗಿದ್ದಾರೆ. ಬಸವೇಶ್ವರರ ಜನಪ್ರೀಯತೆ ಕಂಡು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಶರಣರು ಕಲ್ಯಾಣಕ್ಕೆ ಬಂದು ಕಾಯಕ ಮಾಡಿ ಸರಳವಾಗಿ ಬದುಕುತ್ತಿದ್ದರು. ಬಸವಣ್ಣನವರ ನಾಯಕತ್ವದ ಗುಣಗಳನ್ನು ಸರ್ವರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಬ್ರಿಮ್ಸ್ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷೆ ಡಾ. ಉಮಾ ದೇಶಮುಖ ಮಾತನಾಡಿ, ಅನುಭವ ಮಂಟಪದಲ್ಲಿ ಬಸವಣ್ಣನವರು ಸ್ತ್ರೀಯರಿಗೆ ಅರ್ಧದಷ್ಟು ಮೀಸಲಾತಿ ನೀಡಿ, ಎಲ್ಲರೂ ದೇವರನ್ನು ಪೂಜಿಸಲು ಹಾಗೂ ವಚನಗಳನ್ನು ರಚಿಸಲು ಅರ್ಹರು ಎಂದು ಸಮಾನತೆ ಸಾರಿದ್ದರು. ಹಾಗೆಯೇ ಬ್ರಿಮ್ಸ್‌ನಲ್ಲಿ ನಿರ್ದೇಶಕ ಶಿವಕುಮಾರ ಶೆಟಕಾರ ಅವರು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು.

ಬ್ರಿಮ್ಸ್‌ ನಿರ್ದೇಶಕ ಶಿವಕುಮಾರ ಶೆಟಕಾರ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬ್ರಿಮ್ಸ್‌ ಪ್ರಾಂಶುಪಾಲರಾದ ಡಾ.ರಾಜೇಶ ಪಾರಾ ವಹಿಸಿದ್ದರು. ಬ್ರಿಮ್ಸ್‌ ಮುಖ್ಯ ಆಡಳಿತಾಧಿಕಾರಿ ಮಂಜುನಾಥ ಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ. ಶಿವಯೋಗಿ ಬಾಳಿ, ಸಮಿತಿ ಗೌರವಾಧ್ಯಕ್ಷ ಡಾ. ಅಶೋಕ ನಾಗೂರೆ, ಡಾ. ರಾಜಕುಮಾರ ಬನ್ನೀರ, ಡಾ. ದೀಪಾ ಖಂಡ್ರೆ, ರಾಜಕುಮಾರ ಮಾಳಗೆ, ದಿಲೀಪ ಡೊಂಗರಗೆ, ಸುಧಾ ಚಂದನ, ಇಮ್ಯಾನುವೆಲ್‌ ಕೊಡ್ಡಿಕರ್‌ ಸೇರಿ ಇನ್ನಿತರರಿದ್ದರು.

ಬ್ರಿಮ್ಸ್‌ ಬಸವ ಜಯಂತಿ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ನೂರಂದಪ್ಪ ಮೀನಕೇರಾ ವಚನ ಪಾರಾಯಣ ನಡೆಸಿಕೊಟ್ಟರು. ಅಶ್ವಿನಿ ರಾಜಕುಮಾರ ಬಂಪಳ್ಳಿ ವಚನ ಗಾಯನ ನಡೆಸಿಕೊಟ್ಟರು. ಅರವಿಂದ ಕುಲಕರ್ಣಿ ನಿರೂಪಿಸಿ ಗುರುರಾಜ ಉದಗೀರೆ ವಂದಿಸಿದರು.