ಸಾರಾಂಶ
ಹಣವಂತರು ಗುಣವಂತರಾಗಿ ಸಮಾಜಕ್ಕೆ ಏನಾದರೂ ಕೊಡುಗೆಯನ್ನ ಕೊಡುವಂತವರಾಗಬೇಕು. ಅಂದಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಿಗೂ ಹೊಸ ಪರಿಕಲ್ಪನೆಯ ಶಿಕ್ಷಣದ ಅವಶ್ಯವಿದೆ. ಸಮರ್ಥ ಶಿಕ್ಷಕರಿಂದ ಮಾತ್ರ ಮಕ್ಕಳನ್ನ ಉತ್ತಮ ನಾಗರಿಕರನ್ನಾಗಿ ಮಾಡಲು ಸಾಧ್ಯವಿದೆ. ಅಂತಹ ಶಿಕ್ಷಕರು ಎಲ್ಲ ಶಾಲೆಗಳಿಗೆ ಅವಶ್ಯ ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೨ರಲ್ಲಿ ಹಮ್ಮಿಕೊಂಡ ಪಾಲಕ, ಪೋಷಕರ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಲೆಗೆ ೧೦ ಟೇಬಲ್ ಹಾಗೂ ಮಕ್ಕಳಿಗೆ ೫೦ ಖುರ್ಚಿ ವಿತರಿಸಿ ಮಾತನಾಡಿದರು.
ಹಣವಂತರು ಗುಣವಂತರಾಗಿ ಸಮಾಜಕ್ಕೆ ಏನಾದರೂ ಕೊಡುಗೆಯನ್ನ ಕೊಡುವಂತವರಾಗಬೇಕು. ಅಂದಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.ನನ್ನ ವೈಯಕ್ತಿಕ ₹೫೦ ಸಾವಿರವನ್ನ ಈ ಶಾಲೆಯ ಹೆಸರಲ್ಲಿ ಠೇವಣಿ ಇಡಲಾಗುವುದು. ಅದರಿಂದ ಬರುವ ಬಡ್ಡಿ ಹಣದಲ್ಲಿ ಈ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಗುರುತಿಸಿ, ಸನ್ಮಾನಿಸುವ ಕಾರ್ಯವಾಗಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಸದಸ್ಯ ಸುಭಾಸ್ ಚವ್ಹಾಣ ಮಾತನಾಡಿ, ಮೂಲಭೂತ ಸೌಲಭ್ಯಗಳನ್ನ ಶಾಲೆಗೆ ಒದಗಿಸಲು ಸರ್ಕಾರಕ್ಕೆ ಆಗುತ್ತಿಲ್ಲ. ಬಡ ಮಕ್ಕಳು ಓದುವ ಸರ್ಕಾರಿ ಶಾಲೆಗಳನ್ನ ಮೇಲ್ದರ್ಜೆಗೆ ಏರಿಸುವ ಮೂಲಕ ಶೈಕ್ಷಣಿಕವಾಗಿ ಮಕ್ಕಳ ಪ್ರಗತಿ ಸಾಧಿಸಬೇಕಿದೆ. ಒಳ್ಳೆಯ ವಾತಾವರಣವಿದ್ದಾಗ ಮಾತ್ರ ಒಳ್ಳೆಯ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗಲು ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಬಹಳಷ್ಟು ಮುಖ್ಯವಾಗಿದೆ ಎಂದ ಅವರು, ಈ ಶಾಲೆಗೆ ನೀರಿನ ವ್ಯವಸ್ಥೆಯ ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.ಶಿಕ್ಷಕಿ ಸುಮಾ ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ಹಣವಿದ್ದವರಿಗೆ ಸಮಾಜಕ್ಕೆ ಏನಾದರೂ ಕೊಡುಗೆ ಕೊಡುವ ಗುಣವೂ ಇರಬೇಕು. ಈ ಶಾಲೆಯು ಮಾದರಿಯಾಗಬೇಕೆಂಬ ಕನಸಿದೆ. ಸಿಸಿ ಕ್ಯಾಮರಾ ಅಳವಡಿಕೆ, ಕಾಂಪೌಂಡ್ ವ್ಯವಸ್ಥೆ, ಒಂದು ಹೈಮಾಸ್ಕ್ ವಿದ್ಯುತ್ ಕಂಬ ಅಳವಡಿಕೆ, ಮಕ್ಕಳಿಗೆ ಶುದ್ದ ಕುಡಿಯುವ ನೀರಿನ ಘಟಕ ಸೇರಿದಂತೆ ವಿವಿಧ ಕೆಲಸಗಳು ಇಲ್ಲಿ ಆಗಬೇಕಿದೆ ಎಂದರು.
ಅಂಜುಮನ್ ಸಂಸ್ಥೆಯ ಮುಖಂಡ ಮಜೀದ್ ಮಾಳಗಿಮನಿ ಮಾತನಾಡಿದರು. ಗುತ್ತಿಗೆದಾರ ಚಂದ್ರು ಹೆಬ್ಬಾಳ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಬಡಿಗೇರ, ಪ್ರಮುಖರಾದ ಬಸವಂತಪ್ಪ ಬೈಲವಾಳ, ಶೀಲಾ ಅಂಬೂರ, ಶಿವರಾಜ ಪಾಣಿಗಟ್ಟಿ, ಶ್ರೀಕಾಂತ ಶಿವಲೋಚನಮಠ, ಮುಖ್ಯ ಶಿಕ್ಷಕಿ ಆರ್.ಎಸ್. ಕೊಪ್ಪದ ಸೇರಿದಂತೆ ಪಾಲಕರು, ಮಕ್ಕಳು ಇದ್ದರು.