ಸಾರಾಂಶ
-ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ
------ಕನ್ನಡಪ್ರಭ ವಾರ್ತೆ ಶಹಾಪುರ
ಶಿಕ್ಷಕರು ಸಮಾಜದ ಶಿಲ್ಪಿಗಳಾಗಿದ್ದು, ವಿದ್ಯಾರ್ಥಿಗಳನ್ನು ಜ್ಞಾನದ ಬೆಳಕಿನತ್ತಾ ಕರೆದೊಯ್ಯುವ ಮಹತ್ತರ ಜವಾಬ್ಧಾರಿ ಹೊಂದಿದ್ದಾರೆ. ಶಿಕ್ಷಕರ ಸಂಘ ಎಂದ ಮೇಲೆ ಇದು ಸುಶಿಕ್ಷಿತರ ಕೂಟ. ಸಮಾಜದಲ್ಲಿ ಶಿಕ್ಷಕ ವರ್ಗಕ್ಕೆ ಪೌರಾಣಿಕ ಕಾಲದಿಂದ ಅಪಾರ ಗೌರವವಿದೆ ಎಂದು ಸಂತಪಾಲ ಶಾಲೆಯ ಮುಖ್ಯಗುರು ಸ್ಟ್ಯಾನ್ಲಿ ವರದರಾಜ ತಿಳಿಸಿದರು.ನಗರದ ಸಂತಪಲಾ ಶಾಲಾವರಣದಲ್ಲಿ ನಡೆದ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಮತ್ತು ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸಂಘದಲ್ಲಿ ವೈಮನಸ್ಸಿಗೆ ಎಡೆ ಮಾಡಿಕೊಡದೆ, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರಿತು ನಾವುಗಳೆಲ್ಲ ವಯಕ್ತಿಕ ಹಿತಾಸಕ್ತಿಗೆ ಒತ್ತು ನೀಡಿ ತಪ್ಪು ದಾರಿಗೆ ಇಳಿಯಬಾರದು. ಶಿಕ್ಷಕರ ಸಂಘ ಮಾದರಿ ಸಂಘವಾಗಿ ಬೆಳೆಸಬೇಕಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳೆಲ್ಲ ಎಲ್ಲಾ ಶಿಕ್ಷಕರು ಒಂದಾಗಿ ಸಂಘದ ಬಲವರ್ಧನೆಗೆ ಶ್ರಮಿಸಬೇಕಿದೆ ಎಂದರು.ಸಂಘದ ನೂತನ ಜಿಲ್ಲಾಧ್ಯಕ್ಷ ಶಿವಬಸಪ್ಪ ಮಾಲಿಪಾಟೀಲ್ ಮಾತನಾಡಿ, ಅನುದಾನಿತ ಶಾಲಾ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಸದಾ ನಿಮ್ಮೊಂದಿಗೆ ಇದ್ದು, ಕೆಲಸ ಮಾಡುವೆ. ಅನುದಾನಿತ ಶಾಲಾ ಶಿಕ್ಷಕರ ಸಮಸ್ಯೆ ಸಾಕಷ್ಟು ಇವೆ. ಈ ಕುರಿತು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದರು.
ಸಂಘದ ನೂತನ ತಾಲೂಕು ಅಧ್ಯಕ್ಷ ಲಕ್ಕಪ್ಪ ಮಲ್ಲಾಬಾದಿ ಮಾತನಾಡಿ, ಅನುದಾನಿತ ಶಾಲಾ ಶಿಕ್ಷಕರ ಸಹಾಯದೊಂದಿಗೆ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಸಂಘದ ಚಟುವಟಿಕೆಯಲ್ಲಿ ಸದಾ ಕ್ರಿಯಾಶೀಲನಾಗಿರುವೆ. ತಮ್ಮ ಸಲಹೆ ಸೂಚನೆ ಅನುಸಾರ ಮುಂದಿನ ಸಂಘದ ಚಟುವಟಿಕೆ ನಡೆಸುವ ಭರವಸೆ ನೀಡಿದರು.ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶಿವಬಸಪ್ಪ ಮಾಲಿಪಾಟೀಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಚಂದ್ರಶೇಖರ ಸಾಹು, ಶಹಾಪುರ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಕಪ್ಪ ಮಲ್ಲಾಬಾದಿ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸೂರ್ಯಕಾಂತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಹ ಶಿಕ್ಷಕ ನಾಗರಾಜ ನಿರೂಪಿಸಿದರು. ರಾಮೇಶ್ವರ ಸ್ವಾಗತಿಸಿದರು. ಪ್ರಕಾಶ ವಂದಿಸಿದರು.----
4ವೈಡಿಆರ್1: ಶಹಾಪುರ ನಗರದ ಸಂತಪಾಲ ಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಯ ಸ್ಟ್ಯಾನ್ಲಿ ವರದರಾಜ ಮಾತನಾಡಿದರು.