ಸಾರಾಂಶ
ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿದಾಗ ಮಾತ್ರ ಸಮಾಜದಲ್ಲಿ ವ್ಯವಹಾರಗಳನ್ನು ಸಮಾನವಾಗಿ ನಿರ್ವಹಣೆ ಮಾಡಲು ಸಾಧ್ಯ. ಒಂದು ಹೆಣ್ಣು ಮಗುವಿನ ಸರ್ವಾಂಗೀಣ ಅಭಿವೃದ್ಧಿ ಆಗಬೇಕೆಂದರೆ ಅವಳಿಗೆ ಮಾನಸಿಕ ಸದೃಢತೆ ನೀಡಬೇಕು ಎಂದು ಡಾ. ನಿಂಗಪ್ಪ ಓಲೇಕಾರ ಹೇಳಿದರು.
ಶಿರಹಟ್ಟಿ: ಮಹಿಳೆಯರು ಸ್ವಯಂ ಉದ್ಯೋಗಿಗಳಾಗಿ ಕುಟುಂಬ ನಿರ್ವಹಣೆಗೆ ಕೈಜೋಡಿಸಬೇಕು. ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಡಾ. ನಿಂಗಪ್ಪ ಓಲೇಕಾರ ಕರೆ ನೀಡಿದರು.
ಪಟ್ಟಣದ ವಿಶ್ವ ಕಂಪ್ಯೂಟರ್ ಅಕಾಡೆಮಿಯಲ್ಲಿ ವಿಶ್ವ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ೭ ದಿನಗಳ ಉಚಿತ ಮೇಕಪ್ ಕ್ಲಾಸ್ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿ ಅವರು ಮಾತನಾಡಿದರು. ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿದಾಗ ಮಾತ್ರ ಸಮಾಜದಲ್ಲಿ ವ್ಯವಹಾರಗಳನ್ನು ಸಮಾನವಾಗಿ ನಿರ್ವಹಣೆ ಮಾಡಲು ಸಾಧ್ಯ. ಒಂದು ಹೆಣ್ಣು ಮಗುವಿನ ಸರ್ವಾಂಗೀಣ ಅಭಿವೃದ್ಧಿ ಆಗಬೇಕೆಂದರೆ ಅವಳಿಗೆ ಮಾನಸಿಕ ಸದೃಢತೆ ನೀಡಬೇಕು. ಇಂದಿನ ಸಮಾಜದಲ್ಲಿ ಮಹಿಳೆಯರು ಹಾಗೂ ಪುರುಷರು ಸಮಾನರು. ಇವರ ನಡುವೆ ಭೇದ ಕಾಣುವುದು ಸರಿಯಲ್ಲ ಎಂದರು.ಧರ್ಮಸ್ಥಳ ಸಂಸ್ಥೆಯ ಯೋಜನಾ ನಿರ್ದೇಶಕ ಪುನೀತ್ ಓಲೇಕಾರ ಮಾತನಾಡಿ, ಮಹಿಳೆ ಆರ್ಥಿಕವಾಗಿ ಸ್ವಾವಲಂಬನೆಯಾದಲ್ಲಿ ಮಾತ್ರ ಕುಟುಂಬ ನಿರ್ವಹಣೆ ಸುಗಮವಾಗಲಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಬಸವರಾಜ ಸಂಗಪ್ಪಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ವಿನಾಯಕ ಬಾತಖಂಡೆ, ಸ್ವಾತಿ ಕೋಷ್ಠಿ ಇದ್ದರು. ಮೇಕಪ್ ಕ್ಲಾಸ್ ಶಿಕ್ಷಕಿಯರಾದ ಶಮೀನಾಬಾನು ಲಕ್ಷ್ಮೇಶ್ವರ ಮತ್ತು ಪೂಜಾ ಖಾನಪೇಠ ಅವರನ್ನು ಸನ್ಮಾನಿಸಲಾಯಿತು. ಪವಿತ್ರಾ ಓಲೇಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿಜಯಲಕ್ಷ್ಮೀ ಪ್ರಾರ್ಥಿಸಿದರು. ರೇಣುಕಾ ಸ್ವಾಮಿ ವಂದಿಸಿದರು. ಮೇಕಪ್ ಕ್ಲಾಸ್ ತರಬೇತಿ ಪಡೆದ ನೂರಾರು ಫಲಾನುಭವಿಗಳು ಪಾಲ್ಗೊಂಡಿದ್ದರು.