ಸಾರಾಂಶ
ಕುಮಟಾ: ದೀವಗಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ರ ಚತುಷ್ಪಥ ಕಾಮಗಾರಿಯಡಿ ಜನರ ಬೇಡಿಕೆಯ ಪೂರಕ ಕಾಮಗಾರಿಗಳನ್ನು ಮಾಡುವುದಕ್ಕೆ ಕನಿಷ್ಠ ಪಕ್ಷ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್‌ಬಿಯಿಂದ ಲಿಖಿತವಾಗಿ ಟೈಂ ಬಾಂಡ್ ನೀಡಿದಲ್ಲಿ ಮಾತ್ರ ಸಂಬಂಧಿಸಿದ ಗುಡ್ಡಗಾಡು ನಿವಾಸಿ ಮತ್ತು ಅರಣ್ಯ ಅವಲಂಬಿತ ಸಾಂಪ್ರದಾಯಿಕ ನಿವಾಸಿಗಳ ಅರಣ್ಯ ಅತಿಕ್ರಮಣ ಭೂಸ್ವಾಧೀನ ಸಂಬಂಧಿಸಿದಂತೆ ಇರುವ ಪ್ರಮಾಣಪತ್ರ(ಆರ್‌ಒಎಫ್‌ಆರ್) ನೀಡಬಹುದು ಎಂದು ದಿವಗಿ ಗ್ರಾಮ ಪಂಚಾಯಿತಿಯಲ್ಲಿ ಸರ್ವಾನುಮತದಿಂದ ಠರಾವು ಪಾಸ್ ಮಾಡಲಾಗಿದೆ.ದೀವಗಿ ಗ್ರಾಪಂನಲ್ಲಿ ಕರೆದ ವಿಶೇಷ ಗ್ರಾಮಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಈ ಕುರಿತಂತೆ ಸುದೀರ್ಘವಾಗಿ ಚರ್ಚಿಸಿದರು. ಸಭೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಇಲ್ಲಿನ ಜನರ ಬೇಡಿಕೆಯ ಕಾಮಗಾರಿಗಳಿಗೆ ಎನ್ಎಚ್ಐದಿಂದ ಅನುಮೋದನೆ ದೊರಕಬೇಕಿರುವುದರಿಂದ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿ, ಬಳಿಕ ಅನುಮತಿ ಪಡೆಯಬೇಕಿದೆ. ಈ ಎಲ್ಲ ಹೊಸ ಕಾಮಗಾರಿಗಳಿಗೆ ತಗಲುವ ಸಮಯ ಮತ್ತು ಕಾಮಗಾರಿ ಆರಂಭಗೊಳ್ಳುವ ದಿನಾಂಕ ಇತ್ಯಾದಿ ಸಂಪೂರ್ಣ ವಿವರವನ್ನು ಲಿಖಿತವಾಗಿ ಟೈಮ್ ಬಾಂಡ್ ಮೂಲಕ ನೀಡಲಾಗುತ್ತದೆ. ಅದಾದ ಬಳಿಕ ಗ್ರಾಪಂನಿಂದ ಐಆರ್‌ಬಿಗೆ ಆರ್‌ಒಎಫ್‌ಆರ್ ಪ್ರಮಾಣಪತ್ರ ನೀಡಲಾಗುತ್ತದೆ ಎಂದರು.
ಇದಕ್ಕೂ ಮುನ್ನ ದೀವಗಿ ಗ್ರಾಮದ ಸರ್ವೆ ನಂ. ೯೬ಎಗೆ ಸಂಬಂಧಿಸಿದಂತೆ ಅರಣ್ಯ ಅತಿಕ್ರಮಣ ಮಂಜೂರಿ ಕುರಿತು ಚರ್ಚೆ ನಡೆಯಿತು. ಕೆಲ ದಿನಗಳ ಹಿಂದಷ್ಟೇ ತುರ್ತು ಸಭೆ ನಡೆಸಿದ್ದಾಗ ಗ್ರಾಮ ಪಂಚಾಯಿತಿಯಿಂದ ಇರುವ ಬೇಡಿಕೆಗಳನ್ನು ಪೂರ್ಣಗೊಳಿಸುವುದಾಗಿ ಐಆರ್‌ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು. ಆದರೆ ಇನ್ನೂ ತನಕ ಯಾವುದೇ ಕಾಮಗಾರಿ ಮಾಡಿಲ್ಲ. ಬೇಡಿಕೆಯಂತೆ ಫೂಟ್ ಬ್ರಿಡ್ಜ್, ಸರ್ವೀಸ್ ರಸ್ತೆ, ಹೈಮಾಸ್ಟ ದೀಪ, ದೀವಗಿ, ತಂಡ್ರಕುಳಿ, ದುಂಡಕುಳಿಯಲ್ಲಿ ಬಸ್ ನಿಲ್ದಾಣವನ್ನು ಶೀಘ್ರ ಮಾಡಿಕೊಡಿ. ಜನರಿಗೆ ನಿಮ್ಮ ಮೇಲೆ ವಿಶ್ವಾಸ ಬರುವಂತೆ ಉತ್ತಮ ಕಾಮಗಾರಿ ಮಾಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದರು.ಗ್ರಾಪಂ ಅಧ್ಯಕ್ಷ ಜಗದೀಶ ಭಟ್ಟ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಇಒ ಆರ್.ಎಲ್. ಭಟ್, ಗ್ರೇಡ್ ೨ ತಹಸೀಲ್ದಾರ್ ಸತೀಶ ಗೌಡ, ಸಮಾಜ ಕಲ್ಯಾಣಾಧಿಕಾರಿ ಭಾರತಿ ಆಚಾರ್ಯ, ಕಂದಾಯ ನಿರೀಕ್ಷಕ ಗಾಣಿಗೇರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಮರ್ ಮಣಿಪಾಲ, ಪಂಚಾಯಿತಿ ಕಾರ್ಯದರ್ಶಿ ವಿ.ಡಿ. ಮೋರೆ, ಪಂಚಾಯಿತಿ ಸದಸ್ಯರಾದ ಪ್ರವೀಣ ಅಂಬಿಗ, ಶಿವಾನಂದ ಅಂಬಿಗ, ಶ್ರೀಧರ ಗೌಡ, ಶಂಕರ ಗೌಡ, ಸಂಗೀತ ದೇಶಭಂಡಾರಿ, ಮಂಗಲಾ ಭಟ್, ನಾಗವೇಣಿ ಅಂಬಿಗ, ಸಿಲ್ವಿನ್ ರೊಡ್ರಗಿಸ್ ಇತರರು ಇದ್ದರು.