ಸಾರಾಂಶ
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ತನ್ನದೇ ಆದ ಪ್ರತಿಭೆ ಅಡಗಿದ್ದು, ಅದನ್ನು ಹೊರ ತರುವ ಕೆಲಸ ಶಿಕ್ಷಕರಿಂದ ನಿರಂತರವಾಗಿ ಆಗಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್ ತಿಳಿಸಿದರು. ಹೊಸಕೋಟೆಯಲ್ಲಿ ಮಕ್ಕಳ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿದರು.
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ ಹೊಸಕೋಟೆ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ತನ್ನದೇ ಆದ ಪ್ರತಿಭೆ ಅಡಗಿದ್ದು, ಅದನ್ನು ಹೊರ ತರುವ ಕೆಲಸ ಶಿಕ್ಷಕರಿಂದ ನಿರಂತರವಾಗಿ ಆಗಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್ ತಿಳಿಸಿದರು.
ತಾಲೂಕಿನ ದೊಡ್ಡ ಹುಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಶಾಲೆಯಲ್ಲಿರುವ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಹ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಈ ಉದ್ದೇಶದಿಂದಲೇ ಸರ್ಕಾರವು ಪ್ರತಿಭಾ ಕಾರಂಜಿ ಎಂಬ ಕಾರ್ಯಕ್ರಮ ರೂಪಿಸಿದ್ದು, ಈ ಮೂಲಕ ಮಕ್ಕಳ ಪ್ರತಿಭೆಯನ್ನು ಹೊರ ತರಲು ಉತ್ತಮ ವೇದಿಕೆಯನ್ನು ಕಲ್ಪಿಸಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಸೂಕ್ತ ವೇದಿಕೆಯಲ್ಲಿ ಹೊರ ತರಬೇಕು. ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಮೂಲಕ ಪ್ರತಿಭೆಗಳ ಅನಾವರಣಕ್ಕೆ ಶಿಕ್ಷಕರು ಸಹ ಕೈಜೋಡಿಸಬೇಕು ಎಂದರು.
ಎಸ್‌ಡಿಎಮ್‌ಸಿ ಅಧ್ಯಕ್ಷ ರಾಜಗೋಪಾಲ್ ಮಾತನಾಡಿ, ಪೋಷಕರು ಮಕ್ಕಳಿಗೆ ಓದಿನ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ಸಾಮಾಜಿಕ ಕ್ಷೇತ್ರಗಳಲ್ಲೂ ಸಹ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಸಲಹೆ ನೀಡಿದರು.ಕ್ಲಸ್ಟರ್ ವ್ಯಾಪ್ತಿಯ ಸುಮಾರು 12 ಶಾಲೆಗಳಿಂದ ನೂರಾರು ವಿದ್ಯಾರ್ಥಿಗಳು ಆಗಮಿಸಿ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾದರು.
ಗ್ರಾಪಂ ಅಧ್ಯಕ್ಷ ನೀಲಾಂಜನಪ್ಪ, ಮಾಜಿ ಸದಸ್ಯ ಐಟಿ ಮಂಜುನಾಥ್, ಸಿಆರ್‌ಪಿ ನಟರಾಜ್, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶ್ವತ್ಥಮ್ಮ ಸೇರಿದಂತೆ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಿಕ್ಷಕರು ಹಾಜರಿದ್ದರು.